ಜೂನ್ 12 ರಂದು ಬಿಡುಗಡೆಯಾಗಬೇಕಿದ್ದ 'ಸ್ಟಾರ್ ನಟರೊಬ್ಬರ ₹200 ಕೋಟಿ ಬಜೆಟ್‌ನ ಸಿನಿಮಾ ಅನಿರ್ಧಿಷ್ಠ ಕಾಲದವರೆಗೆ ಮುಂದೂಡಲ್ಪಟ್ಟಿದೆ. ಇದಕ್ಕೆ ಆರ್ಥಿಕ ಸಮಸ್ಯೆಗಳು ಕಾರಣವೆಂದು ಹೇಳಲಾಗುತ್ತಿದ್ದು, ಸ್ವತಃ ನಟನೇ ತನ್ನ ಸಂಭಾವನೆಯನ್ನು ಹಿಂದಿರುಗಿಸಿ ಕೊಡಲು ನಿರ್ಧರಿಸಿದ್ದಾರೆ.

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರೊಬ್ಬರ ಮೇಲೆ 200 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಭರ್ಜರಿಯಾಗಿ ಚಿತ್ರೀಕರಣ ಮಾಡಿದ್ದ ಸಿನಿಮಾ ಜೂ.12ಕ್ಕೆ ಚಿತ್ರಮಂದಿರಕ್ಕೆ ಬರಬೇಕಿತ್ತು. ಆದರೆ, ಇದೀಗ ಸಿನಿಮಾ ಬಿಡುಗಡೆಗೆ ಒಂದು ವಾರದ ಮುಂಚೆ ಆರ್ಥಿಕ ಸಂಕಷ್ಟದಿಂದ ಸಿನಿಮಾದ ವಿಎಫ್‌ಎಕ್ಸ್ ಸೇರಿದಂತೆ ಕೆಲವೊಂದು ಕೆಲಸಗಳು ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ನಟಿಸಲು ಪಡೆದಿದ್ದ ಸಂಭಾವನೆಯ ಅಡ್ವಾನ್ಸ್ ಹಣವನ್ನು ಸ್ವತಃ ನಟನೇ ಹಿಂದಿರುಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಭಾರತದಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ 'ಹರಿ ಹರ ವೀರ ಮಲ್ಲು'. ಈ ಸಿನಿಮಾವನ್ನು ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಒಳಗೊಂಡ ಚಿತ್ರತಂಡವು ಜೂನ್ 12 ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ಬಿಡುಗಡೆ ದಿನಾಂಕವನ್ನು ಅನಿರ್ಧಿಷ್ಠಾವಧಿ ಕಾಲದವರೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಎಫ್‌ಎಕ್ಸ್ ಕೆಲಸಗಳು ಪೂರ್ಣಗೊಳ್ಳದಿರುವುದು ಮತ್ತು ಆರ್ಥಿಕ ಸಮಸ್ಯೆಗಳು ಇದಕ್ಕೆ ಕಾರಣ ಎಂದು ವರದಿಗಳು ಸೂಚಿಸುತ್ತಿವೆ. ಈ ನಡುವೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ನಾಯಕ ಪವನ್ ಕಲ್ಯಾಣ್ ತಮ್ಮ ಸಂಭಾವನೆಯ 11 ಕೋಟಿ ಮುಂಗಡ ಹಣವನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಕೃಷ್ ಜಾಗರ್ಲಮುಡಿ ಮತ್ತು ಜ್ಯೋತಿ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿಧಿ ಅಗರ್ವಾಲ್ ನಾಯಕಿ. ಜ್ಞಾನ ಶೇಖರ್ ವಿ.ಎಸ್. ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ನಿಕ್ ಪೊವೆಲ್ ಚಿತ್ರದ ಸಾಹಸ ನಿರ್ದೇಶಕ. 200 ಕೋಟಿ ಬಜೆಟ್‌ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ರಾಂಪಾಲ್, ನರ್ಗೀಸ್ ಫಖ್ರಿ, ಆದಿತ್ಯ ಮೆನನ್, ಪೂಜಿತ ಪೊನ್ನಾಡ ಮುಂತಾದವರು 'ಹರಿ ಹರ ವೀರ ಮಲ್ಲು' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು ನಟ ಪವನ್ ಕಲ್ಯಾಣ್ ಅವರ ಕೊನೆಯ ಚಿತ್ರ 'ಭೀಮ್ಲ ನಾಯಕ್'. ಮಲಯಾಳಂನ ಸೂಪರ್‌ಹಿಟ್ ಚಿತ್ರ 'ಅಯ್ಯಪ್ಪನುಂ ಕೋಶಿಯುಂ' ನ ತೆಲುಗು ರಿಮೇಕ್ ಆಗಿತ್ತು 'ಭೀಮ್ಲ ನಾಯಕ್'. ಸಾಗರ್ ಕೆ. ಚಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸೂರ್ಯದೇವರ ನಾಗ ವಂಶಿ ನಿರ್ಮಾಪಕರಾಗಿದ್ದರು. ಸಿತಾರ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿತ್ತು. ತ್ರಿವಿಕ್ರಮ್ ಶ್ರೀನಿವಾಸ್ ಸಂಭಾಷಣೆ ಬರೆದಿದ್ದರು. ಪವನ್ ಕಲ್ಯಾಣ್ ಬಿಜು ಮೆನನ್‌ರ 'ಅಯ್ಯಪ್ಪನ್ ನಾಯರ್' ಪಾತ್ರವನ್ನು ಚಿತ್ರದಲ್ಲಿ ನಿರ್ವಹಿಸಿದರೆ, ಪೃಥ್ವಿರಾಜ್‌ರ ಪಾತ್ರವನ್ನು ರಾಣಾ ದಗ್ಗುಬಾಟಿ ನಿರ್ವಹಿಸಿದ್ದರು. ನಿತ್ಯ ಮೆನನ್ ಪವನ್ ಕಲ್ಯಾಣ್‌ಗೆ ನಾಯಕಿಯಾಗಿದ್ದರು. ರವಿ ಕೆ. ಚಂದ್ರನ್ ಛಾಯಾಗ್ರಹಣ ಮತ್ತು ತಮನ್ ಸಂಗೀತ ನಿರ್ದೇಶನ ಮಾಡಿದ್ದರು. ರಾಮ್ ಲಕ್ಷ್ಮಣ್ ಚಿತ್ರದ ಸಾಹಸ ನಿರ್ದೇಶಕರಾಗಿದ್ದರು. ಸಚ್ಯ್ ನಿರ್ದೇಶಿಸಿದ 'ಅಯ್ಯಪ್ಪನುಂ ಕೋಶಿಯುಂ' ಚಿತ್ರದಲ್ಲಿ ಎರಡೂ ಪ್ರಮುಖ ಪಾತ್ರಗಳಿಗೆ ಸಮಾನ ಪ್ರಾಮುಖ್ಯತೆ ಇತ್ತು, ಆದರೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು.