ಮುಂಬೈ(ಮಾ.06): ನಟ ಸುಶಾಂತ್‌ ಸಿಂಗ್‌ ಸಾವಿನಲ್ಲಿ ಮಾದಕ ವಸ್ತುವಿನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಮಾದಕ ವಸ್ತು ನಿಯಂತ್ರಣ ದಳವು (ಎನ್‌ಸಿಬಿ) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

70,000 ಪುಟಗಳ ಆರೋಪಪಟ್ಟಿಯಲ್ಲಿ ಸುಶಾಂತ್‌ರ ಗೆಳತಿ, ನಟಿ ರಿಯಾ ಚಕ್ರವರ್ತಿ, ಆಕೆಯ ಸೋದರ ಶೋವಿಕ್‌ ಸೇರಿದಂತೆ 33 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ಪೈಕಿ ಅನೂಜ್‌ ಕೇಶ್ವಾನಿ, ಆಜಂ ಜುಮ್ಮಾನ್‌ ಅವರನ್ನು ಪ್ರಮುಖ ಆರೋಪಿಗಳೆಂದು ಪ್ರಸ್ತಾಪಿಸಲಾಗಿದೆ. ಅಲ್ಲದೆ ವಿಚಾರಣೆ ಎದುರಿಸಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌ ಮತ್ತು ಸಾರಾ ಆಲಿ ಖಾನ್‌ ಸೇರಿದಂತೆ ಸಾಕ್ಷಿಯಾದ 200 ಜನರ ಹೇಳಿಕೆಯನ್ನೂ ಲಗತ್ತಿಸಲಾಗಿದೆ.

ರಿಯಾ ಚಕ್ರವರ್ತಿ ವಿರುದ್ಧ ಮಾದಕ ವಸ್ತು ಖರೀದಿ, ಹಂಚಿಕೆ ಮತ್ತು ಅದಕ್ಕೆ ಹಣ ನೀಡಿದ ಆರೋಪ ಹೊರಿಸಲಾಗಿದೆ. ಪ್ರಕರಣ ಸಂಬಂಧ ರಿಯಾ ಮತ್ತು ಶೋವಿಕ್‌ ಸೇರಿದಂತೆ ಹಲವರನ್ನು ಎನ್‌ಸಿಬಿ ಬಂಧಿಸಿತ್ತು. ಬಳಿಕ ಜಾಮೀನು ಆಧಾರದ ಮೇಲೆ ಕೆಲ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.

ತನಿಖೆ ವೇಳೆ ದೊರೆತ ಮಾದಕ ವಸ್ತುಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಭಾರತ ಮತ್ತು ವಿದೇಶಿ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆಯಲಾಗಿತ್ತು. ಅದರ ಆಧಾರದ ಮೇಲೆ ಎನ್‌ಸಿಬಿ ಕಳೆದ ತನಿಖೆ ನಡೆಸುತ್ತಿದೆ. ಸುಶಾಂತ್‌ ಸಿಂಗ್‌ ಕಳೆದ ವರ್ಷ ಜೂ.14ರಂದು ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.