ತಿರುವನಂತಪುರ(ಡಿ.30): ಈ ವರ್ಷದ ಆರಂಭದಲ್ಲಿ ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ವಿದ್ಯಾರ್ಥಿ ಪ್ರತಿಭಟನೆಯಾಧಾರಿತ ‘ವರ್ತಮಾನಂ’ ಮಲಯಾಳ ಸಿನಿಮಾ ಬಿಡುಗಡೆಗೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರಾಕರಿಸಿದೆ.

ಸಿದ್ಧಾರ್ಥ ಶಿವ ನಿರ್ದೇಶನದ ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಪಾರ್ವತಿ ತಿರುವೋತ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದಿಂದ ಜೆಎನ್‌ಯುಗೆ ಸಂಶೋಧನಾ ಉದ್ದೇಶಕ್ಕೆ ತೆರಳಿದ ಹೆಣ್ಣುಮಗಳೊಬ್ಬಳ ಪಯಣದ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾ ನಿರ್ಮಾಪಕ ಆರ್ಯದನ್‌ ಶೌಕತ್‌, ಪ್ರಮಾಣೀಕರಣ ನಿರಾಕರಣೆಗೆ ಸಿಬಿಎಫ್‌ಸಿ ಯಾವುದೇ ಕಾರಣ ತಿಳಿಸಿಲ್ಲ. ಹಾಗಾಗಿ ಈ ವಾರವೇ ಸಿನಿಮಾವನ್ನು ಮುಂಬೈನ ಸಿಬಿಎಫ್‌ಸಿಯ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಸಿಬಿಎಫ್‌ಸಿ ಇಬ್ಬರು ಸದಸ್ಯರು ಸಿನಿಮಾವನ್ನು ಬೆಂಬಲಿಸಿದರೆ, ಇನ್ನಿಬ್ಬರು ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಜನವರಿಯಲ್ಲಿ ಮುಸುಕುದಾರಿಗಳ ಗುಂಪೊಂದು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದಾಳಿ ಮಾಡಿತ್ತು. ಈ ಘಟನೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿತ್ತು