ಟಾಲಿವುಡ್ ಸ್ಟಾರ್ ನಟ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು ನಿಧನರಾಗಿದ್ದಾರೆ.
ಟಾಲಿವುಡ್ ಸ್ಟಾರ್ ನಟ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು ಕೊನೆಯುಸಿರೆಳೆದಿದ್ದಾರೆ. 90 ವರ್ಷದ ರಾಜಗೋಪಾಲ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿ ಹೈದರಾಬಾದ್‌ನಲ್ಲಿರುವ ರವಿತೇಜ ನಿವಾಸದಲ್ಲಿ ನಿಧನರಾಗಿದ್ದಾರೆ. ರವಿತೇಜ ಮೂವರು ಗಂಡು ಮಕ್ಕಳಲ್ಲಿ ಒಬ್ಬರು. ರವಿತೇಜ ಎರಡನೇ ಸಹೋದರ ಭರತ್ 2017 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಸಹೋದರ ರಘು ಟಾಲಿವುಡ್ ನಲ್ಲಿ ನಟರಾಗಿದ್ದಾರೆ. ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ರಾಜಗೋಪಾಲ್ ರಾಜು ಜನಿಸಿದರು. ರಾಜು ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದರಿಂದ ಒಂದೇ ಕಡೆ ಇರಲು ಸಾಧ್ಯವಾಗದೆ, ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಉತ್ತರ ಭಾರತದಲ್ಲಿ ರಾಜಗೋಪಾಲ್ ರಾಜು ಹೆಚ್ಚಿನ ಜೀವನವನ್ನು ಕಳೆದರು. ಚಿತ್ರರಂಗಕ್ಕೆ ಬರುವ ಮುನ್ನ ರವಿತೇಜ ತಂದೆಯೊಂದಿಗೆ ಜೈಪುರ್, ದೆಹಲಿ ಮತ್ತು ಮುಂಬೈನಲ್ಲಿ ವಾಸಿಸುತ್ತಿದ್ದರು. ಅದಕ್ಕಾಗಿಯೇ ರವಿತೇಜ ಹೆಚ್ಚಾಗಿ ಹಿಂದಿ ಚಿತ್ರಗಳನ್ನು ನೋಡಿ ಅಮಿತಾಬ್ ಅವರ ಅಭಿಮಾನಿಯಾದರು. ಇದರಿಂದಾಗಿ ರವಿತೇಜ ವಿವಿಧ ಉಚ್ಚಾರಣೆಗಳನ್ನು ಕಲಿತರು ಎಂದು ತಿಳಿದುಬಂದಿದೆ.
ರಾಜಗೋಪಾಲ್ ರಾಜು ಅವರ ನಿಧನದ ಸುದ್ದಿ ತಿಳಿದ ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಕೆಲವು ಸ್ಟಾರ್‌ಗಳು ರವಿತೇಜ ಅವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದರೆ, ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ರವಿತೇಜ ತಂದೆಯ ನಿಧನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಸಹೋದರ ರವಿತೇಜ ತಂದೆ ರಾಜಗೋಪಾಲ್ ರಾಜು ಅವರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು. ವಾಲ್ತೇರ್ ವೀರಯ್ಯ ಚಿತ್ರೀಕರಣದಲ್ಲಿ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಮೆಗಾಸ್ಟಾರ್ ಪೋಸ್ಟ್ ಮಾಡಿದ್ದಾರೆ.
