ಪುಷ್ಪಾ2 ಚಿತ್ರದ ಕಾಲ್ತುಳಿತದಲ್ಲಿ ಗಾಯಗೊಂಡ 9 ವರ್ಷದ ಬಾಲಕನ ಮೆದುಳು ನಿಷ್ಕ್ರೀಯ!
ಕಾಲ್ತುಳಿತದಲ್ಲಿ ಅಭಿಮಾನಿ ಮೃತಪಟ್ಟ ಪ್ರಕರಣದಿಂದ ಅಲ್ಲು ಅರ್ಜುನ್ ಜೈಲು ಸೇರಿ ಬಿಡುಗಡೆಯಾಗಿದ್ದಾರೆ. ಆದರೆ ಅಲ್ಲು ಅರ್ಜುನ್ ಅಭಿಮಾನಿ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನ ಮೆದುಳು ನಿಷ್ಕ್ರೀಯಗೊಂಡಿದೆ.
ಹೈದರಾಬಾದ್(ಡಿ.18) ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ2 ಚಿತ್ರ ಭಾರಿ ಯಶಸ್ಸು ಕಂಡಿದೆ. ಹಲವು ದಾಖಲೆಗಳನ್ನು ಪುಡಿ ಮಾಡಿದೆ. ಇತ್ತ ಪುಷ್ಪಾ2 ಚಿತ್ರದ ಪ್ರಿಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆ ಭಾರಿ ಕೋಲಾಹಲ ಮಾತ್ರಲ್ಲ ರಾಜಕೀಯವಾಗಿಯೂ ಗದ್ದಲ ಸೃಷ್ಟಿಸಿದೆ. ಅಲ್ಲು ಅರ್ಜುನ್ ಅರೆಸ್ಟ್ ಆಗಿ ಜೈಲು ಸೇರಿ ಬಳಿಕ ಬಿಡುಗಡೆಯಾಗಿದ್ದಾರೆ. ಆದರೆ ಪುಷ್ಪಾ2 ಚಿತ್ರ ಅಲ್ಲು ಅರ್ಜುನ್ ಅಭಿಮಾನಿ ರೇವತಿ ಕುಟುಂಬಕ್ಕೆ ತೀವ್ರ ಆಘಾತ ನೀಡಿದೆ. ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿ ರೇವತಿ ಮೃತಪಟ್ಟಿದ್ದರೆ, ಆಕೆಯ 9 ವರ್ಷದ ಮಗ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಿಸಲಾಗಿತ್ತು. ಇದೀಗ ಬಾಲಕನ ಬ್ರೈನ್ ಡೆಡ್ ಆಗಿದೆ. ಈ ಕುರಿತು ಹೈದರಾಬಾದ್ ಸಿಟಿ ಪೊಲೀಸ್ ಕಮಿಷನರ್ ಸಿವಿ ಆನಂದ್ ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಮಹಿಳಾ ಅಭಿಮಾನಿ ರೇವತಿ ಪುತ್ರ 9 ವರ್ಷದ ಶ್ರೀ ತೇಜಾ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಕಾಲ್ತುಳಿತದ ಭೀಕರತೆಯಲ್ಲಿ ಬಾಲಕನಿಗೆ ಉಸಿರಾಡಲು ಸಾಧ್ಯವಾಗಿರಲಿಲ್ಲ. ಇದರ ಪರಿಣಾಮ ಬಾಲಕನ ಮೆದುಳು ನಿಷ್ಕ್ರೀಯಗೊಂಡಿದೆ. ಬಾಲಕನಿಗೆ ಸುದೀರ್ಘ ಅವಧಿಯ ಚಿಕಿತ್ಸೆಯ ಅಗತ್ಯವಿದೆ. ವೈದ್ಯರ ತಂಡದ ಜೊತೆಗೆ ಚರ್ಚಿಸಲಾಗಿದೆ. ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಸುದೀರ್ಘ ದಿನಗಳ ಚಿಕಿತ್ಸೆ ಅಗತ್ಯವಿದೆ. ಪ್ರತಿ ನಿಮಿಷವೂ ಅಷ್ಟೇ ಮುಖ್ಯವಾಗಿದೆ ಎಂದು ಸಿವಿ ಆನಂದ್ ಹೇಳಿದ್ದಾರೆ.
ಅಲ್ಲು ಅರ್ಜುನ್ ಬಂಧನದಿಂದ ರಶ್ಮಿಕಾ ಮಂದಣ್ಣ ಹಾರ್ಟ್ ಬ್ರೇಕ್, ಭಾವನಾತ್ಮಕ ಪೋಸ್ಟ್!
ಶ್ರೀ ತೇಜಾ ಚಿಕಿತ್ಸೆ ಹಾಗೂ ಆರೋಗ್ಯ ಪರಿಸ್ಥಿತಿ ಕುರಿತು ಶೀಘ್ರದಲ್ಲೇ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ ಎಂದು ಸಿವಿ ಆನಂದ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಆರೋಗ್ಯ ಕಾರ್ಯದರ್ಶಿ ಡಾ.ಕ್ರಿಸ್ಟಿನಾ, ನಾವು ಪ್ರತಿ ದಿನ ಶ್ರೀ ತೇಜಾ ಆರೋಗ್ಯ ಪರಿಸ್ಥಿತಿ ಮಾನಿಟರ್ ಮಾಡುತ್ತಿದ್ದೇವೆ. ಆದಷ್ಟು ಬೇಗ ಶ್ರೀ ತೇಜ ಗುಣಮುಖರಾಗಲಿ ಅನ್ನೋದು ನಮ್ಮ ಬಯಕೆ. ಇದಕ್ಕಾಗಿ ಎಲ್ಲಾ ಪ್ರಯತ್ನ ಮಾಡುತ್ತೇವೆ. ವೈದ್ಯರ ತಂಡ ಸಂಪೂರ್ಣ ನಿಗಾ ವಹಿಸಿದೆ ಎಂದು ಡಾ.ಕ್ರಿಸ್ಟಿನಾ ಹೇಳಿದ್ದಾರೆ. ಶ್ರೀ ತೇಜಾ ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.
ಶ್ರೀ ತೇಜಾ ತಂದೆ ಜೊತೆ ಚರ್ಚಿಸಲಾಗಿದೆ. ಶ್ರೀ ತೇಜಾ ತಂದೆಗೆ ಎಲ್ಲಾ ನೆರವು ನೀಡಲಾಗುತ್ತದೆ. ಶ್ರೀ ತೇಜಾ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ. ಚಿಕಿತ್ಸೆಯ ಮಾಹಿತಿ ನೀಡಲಾಗಿದೆ. ಪ್ರತಿ ಅಪ್‌ಡೇಟ್ ನೀಡಲಾಗಿದೆ ಎಂದು ಕಾರ್ಯದರ್ಶಿ ಹೇಳಿದ್ದಾರೆ.
ಡಿಸೆಂಬರ್ 4ರ ಮಧ್ಯ ರಾತ್ರಿ ಪುಷ್ಪಾ2 ಚಿತ್ರದ ಪ್ರಮಿಯರ್ ಶೋ ಆಯೋಜಿಸಲಾಗಿತ್ತು. ಹೈದರಾಬಾದ್ ನಗರದ ಸಂಧ್ಯಾ ಥಿಯೇಟರ್‌ನಲ್ಲೂ ಪ್ರಿಮಿಯರ್ ಶೋ ಆಯೋಜಿಸಲಾಗಿತ್ತು. ಈ ಪ್ರಿಮಿಯರ್ ಶೋ ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಥಿಯೇಟರ್‌ಗೆ ಅಲ್ಲು ಅರ್ಜುನ್ ಮಹಿಳಾ ಅಭಿಮಾನಿ ತನ್ನ ಪತಿ ಹಾಗೂ ಮಗನೊಂದಿಗೆ ಆಗಮಿಸಿದ್ದರು. ಆದರೆ ಈ ಪ್ರಿಮಿಯರ್ ಶೋಗೆ ಅಲ್ಲು ಅರ್ಜುನ್ ಕೂಡ ದಿಢೀರ್ ಎಂಟ್ರಿಕೊಟ್ಟಿದ್ದರು. ಇದರಿಂದ ಅಭಿಮಾನಿಗಳಲ್ಲಿ ನುಕು ನುಗ್ಗಲು ಸೃಷ್ಟಿಯಾಗಿತ್ತು. ಇದು ಬಹುದೊಡ್ಡ ದುರಂತಕ್ಕೆ ಕಾರಣವಾಗಿತ್ತು.
ಕಾಲ್ತುಳಿತದಿಂದ ಮಹಿಳಾ ಅಭಿಮಾನಿ ರೇವತಿ ಹಾಗೂ ಆಕೆಯ ಪುತ್ರ ಶ್ರೀ ತೇಜಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ರೇವತಿ ಮೃತಪಟ್ಟರೆ, ಶ್ರೀ ತೇಜಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಇದೀಗ ಶ್ರೀ ತೇಜಾ ಪರಿಸ್ಥಿತಿ ಗಂಭೀರವಾಗಿದೆ. ಇದೇ ಪ್ರಕರಣದಲ್ಲಿ ಎ12 ಆರೋಪಿಯಾಗಿರುವ ಅಲ್ಲು ಅರ್ಜುನ್ ಇತ್ತೀಚೆಗೆ ಅರೆಸ್ಟ್ ಆಗಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದರು.