ಭಾರತೀಯ ಸೇನೆ ಸೇರಿದ 'ಹೆಬ್ಬುಲಿ' ವಿಲನ್ ರವಿ ಕಿಶನ್ ಮಗಳು ಇಶಿಕಾ; ಇದಕ್ಕಿಂತ ಹೆಮ್ಮೆ ತಂದೆಗೆ ಇನ್ನೇನಿದೆ?
ಹೆಬ್ಬುಲಿ ಸಿನಿಮಾದ ವಿಲನ್ ರವಿ ಕಿಶನ್ ಅವರ ಪುತ್ರಿ ಇಶಿತಾ ಶುಕ್ಲಾ ಭಾರತೀಯ ಸೇನೆ ಸೇರಿದ್ದಾರೆ. ಮಗಳ ಸಾಧನೆ ಬಗ್ಗೆ ತಂದೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಿನಿಮಾರಂಗದ ಖ್ಯಾತ ನಟ ರವಿ ಕಿಶನ್ ಪುತ್ರಿ ಇಶಿತಾ ಶುಕ್ಲಾ ಭಾರತೀಯ ಸೇನೆ ಸೇರಿದ್ದಾರೆ. ವಿಲನ್ ಆಗಿ ತೆರೆಮೇಲೆ ಅಬ್ಬರಿಸುತ್ತಿದ್ದ ಕಿಶನ್ ಪುತ್ರಿ ಭಾರತೀಯ ಸೇನೆ ಸೇರಿರುವುದು ಹೆಮ್ಮೆಯ ವಿಚಾರವಾಗಿದೆ. 21 ವರ್ಷದ ಇಶಿತಾ ಸಾಧನೆಗೆ ಅಭಿಮಾನಿಗಳು, ಆಪ್ತರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ರವಿ ಕಿಶನ್ ಅವರ ಚಿಕ್ಕ ಮಗಳು ಇಶಿತಾ ಶುಕ್ಲಾ ಎನ್‌ಸಿಸಿ ಕೆಡೆಟ್ ಆಗಿದ್ದರು. ಇಶಿತಾ ಭಾರತ ಸರ್ಕಾರದ ಅಗ್ನಿಪಥ್ ಯೋಜನೆ ಮೂಲಕ ಸಶಸ್ತ್ರ ಪಡೆಗೆ ಸೇರಿದ್ದಾರೆ. ಈ ಯೋಜನೆಯ ಪ್ರಕಾರ, ಭಾರತದ ಯುವಕರು 17 ರಿಂದ 21 ವಯಸ್ಸಿನ ನಡುವೆ ನೋಂದಾಯಿಸಿಕೊಳ್ಳಬೇಕು. ಇಶಿತಾ ಅವರು ಆರು ತಿಂಗಳ ತರಬೇತಿ ಮತ್ತು 3.5 ವರ್ಷಗಳ ನಿಯೋಜನೆ ಸೇರಿದಂತೆ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಈ ಅವಧಿ ಪೂರ್ಣಗೊಂಡ ನಂತರ ಇವರು ಅಗ್ನಿವೀರ್‌ಗಳಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಬೇಕು.
ಮಗಳು ಭಾರತೀಯ ಸೇನೆ ಸೇರುವ ಬಗ್ಗೆ ರವಿ ಕಿಶನ್ ಕಳೆದ ವರ್ಷವೆ ಬಹಿರಂಗ ಪಡಿಸಿದ್ದರು. ಅಗ್ನಿಪಥ್ ಯೋಜನೆಯಡಿ ಮಗಳು ಭಾರತೀಯ ಸೇನೆ ಸೇರಲು ಆಸಕ್ತಿಹೊಂದಿರುವ ಬಗ್ಗೆ ಹೇಳಿದ್ದರು. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 26, 2023 ರಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇಶಿಕಾ ಶುಕ್ಲಾ ಭಾಗವಹಿಸಿದ್ದರು. ಮಗಳ ಸಾಧನೆ ಬಗ್ಗೆ ರವಿ ಕಿಶನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. 'ನನ್ನ ಧೈರ್ಯಶಾಲಿ ಮಗಳು ಇಶಿತಾ ಶುಕ್ಲಾ ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕಳೆದ 3 ವರ್ಷಗಳಿಂದ ತುಂಬಾ ಶ್ರಮಿಸುತ್ತಿದ್ದಾಳೆ. ಅವಳು ದೆಹಲಿ ನಿರ್ದೇಶನಾಲಯದ 7 ಬಾಲಕಿಯರ ಬೆಟಾಲಿಯನ್‌ನ ಕೆಡೆಟ್ ಆಗಿದ್ದು ಕೊರೆಯುವ ಚಳಿಯಲ್ಲಿಯೂ ತರಬೇತಿ ಪಡೆಯುತ್ತಿದ್ದಾಳೆ. ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ಗಾಗಿ ಮಂಜಿನ ವಿರುದ್ಧ ಹೋರಾಡುತ್ತಿದ್ದಾಳೆ. ತಂದೆಯಾಗಿ ಹೆಮ್ಮೆಯ ಕ್ಷಣ, ಜನವರಿ 26 ರಂದು ಅವಳು ಭಾಗವಹಿಸಲಿದ್ದಾಳೆ' ಎಂದು ಹೇಳಿದ್ದರು.
ನಟಿ ನಗ್ಮಾ ಜೊತೆ ಅನೈತಿಕ ಸಂಬಂಧ: ಕೊನೆಗೂ ಮೌನ ಮುರಿದ ನಟ ರವಿ ಕಿಶನ್
ರವಿ ಕಿಶನ್ ಮತ್ತು ಅವರ ಪತ್ನಿ ಪ್ರೀತಿ ಕಿಶನ್ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಹಿರಿಯ ಮಗಳು ತನಿಷ್ಕಾ ಮ್ಯಾನೇಜ್‌ಮೆಂಟ್ ಇಂಡಸ್ಟ್ರಿಯಲ್ಲಿದ್ದರೆ, ಇಶಿತಾಗಿಂತ ಕಿರಿಯಳಾದ ರಿವಾ ತನ್ನ ತಂದೆಯಂತೆ ನಟನಾಗಲು ತಯಾರಿ ನಡೆಸುತ್ತಿದ್ದಾರೆ. ಇನ್ನು ಮಗ ಸಕ್ಷಮ್ ಕಿಶನ್ ಇನ್ನೂ ಓದುತ್ತಿದ್ದಾನೆ.
ಕಾಫಿ ಕುಡಿಯೋಕೆ ರಾತ್ರಿ ಕರೆಯೋದಾ? ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ 'ಹೆಬ್ಬುಲಿ' ನಟ
ಭೋಜ್‌ಪುರಿ ಮೂಲದ ನಟ ರವಿ ಕಿಶನ್ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲೂ ಖ್ಯಾತಿಗಳಿದ್ದಾರೆ. ವಿಲನ್ ಆಗಿ ಅಬ್ಬರಿಸುವ ರವಿ ಕಿಶನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಹೆಬ್ಬುಲಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಅಭಿಮಾನಿಗಳಿಗೂ ಚಿರಪರಿಚಿತರಾಗಿದ್ದಾರೆ.