ಬಾಹುಬಲಿ ತಂದುಕೊಟ್ಟ ಯಶಸ್ಸಿನಂತೆ ಪ್ರಭಾಸ್‌ಗೆ ಯಾವ ಚಿತ್ರವೂ ಕೈ ಹಿಡಿಯುತ್ತಿಲ್ಲ. ಅವರನ್ನು ನಂಬಿ ಬಂಡವಾಳ ಹಾಕಿರುವ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಇದೀಗ ಭಯ ಶುರುವಾಗಿದೆ!

ಸಾಹೋ, ರಾಧೆ ಶ್ಯಾಮ್‌, ಆದಿಪುರುಷ್‌... ಯಾವುದೂ ಗೆಲ್ಲಲಿಲ್ಲ. ಯಾಕೋ ಪ್ರಭಾಸ್ ಅವರ ನಸೀಬು ನೆಟ್ಟಗಿಲ್ಲ. ‘ಆದಿಪುರುಷ್‌’ ನಂತರವಾದರೂ ತಮ್ಮ ನೆಚ್ಚಿನ ಹೀರೋಗೆ ಗೆಲುವು ಕೈ ಹಿಡಿಯಲಿದೆಯೇ ಎಂದು ಕಾದ ಅವರ ಅಭಿಮಾನಿಗಳಿಗೆ ‘ಪ್ರಾಜೆಕ್ಟ್‌ ಕೆ’ ಅಲಿಯಾಸ್‌ ‘ಕಲ್ಕಿ’ ಚಿತ್ರದ ಗ್ಲಿಂಪ್ಸ್‌ ಈಗಷ್ಟೇ ಬಂದಿದೆ. ಮತ್ತೆ ಅದೇ ರೀತಿ ಟ್ರೋಲ್‌ಗೆ ಒಳಗಾಗಿದ್ದಾರೆ. ನಿರೀಕ್ಷೆಗಳು ಕೊಂಚ ಮಟ್ಟಿಗೆ ನಿರಾಸೆ ಆಗಿವೆ. ಹೀಗಾಗಿ ಟಾಲಿವುಡ್‌ನ ಈ ಡಾರ್ಲಿಂಗ್‌ಗೆ ಬಾಹುಬಲಿಯ ನಂತರ ಸೋಲು ಹೆಗಲೇರಿದೆ. ಸಾಲದ್ದಕ್ಕೆ ಟ್ರೋಲಿಗರು ಸೈನಿಕರಿಂದ ಬೇಟೆಯಾಡಲು ಆರಂಭಿಸಿದ್ದಾರೆ. 

ಆ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ಗೆ ಸೋಲು ದೊಡ್ಡ ಅಭಿಮಾನಿಯಾಗಿದೆಯೇ ಎಂದು ನಟ ಪ್ರಭಾಸ್‌ ಸುತ್ತ ಹೀಗೆ ಚರ್ಚೆಗಳು ಅವರದ್ದೇ ಸಿನಿಮಾಗಳ ವಿಎಫ್‌ಎಕ್ಸ್‌ನಂತೆ ಸದ್ದು ಮಾಡುತ್ತಿದ್ದರೆ ಇತ್ತ ಸ್ಯಾಂಡಲ್‌ವುಡ್‌ನ ನಿರ್ದೇಶಕ ಪ್ರಶಾಂತ್‌ ನೀಲ್‌ಗೆ ನಿರೀಕ್ಷೆಗಳ ಭಯ ಹಾಗೂ ಒತ್ತಡಗಳು ಶುರುವಾಗಿವೆಯಂತೆ. 

ಪ್ರಭಾಸ್‌ ಹಾಗೂ ನೀಲ್‌ ಕಾಂಬಿನೇಶನ್‌ನ ‘ಸಲಾರ್‌’ ಟೀಸರ್‌ ಒಂದು ಮಟ್ಟಿಗೆ ಯಶಸ್ಸು ಕಂಡಿರುವುದೇ ಈ ನಿರೀಕ್ಷೆಗಳಿಗೆ ಕಾರಣ. ಪ್ರಶಾಂತ್‌ ನೀಲ್‌ ಸದ್ಯಕ್ಕೆ ಪ್ರಭಾಸ್‌ ಅಭಿಮಾನಿಗಳ ಪಾಲಿಗೆ ನೀಲ್‌ ಮಾಮ ಆಗಿದ್ದಾರೆ. 

ಭರ್ಜರಿ ವೀಕ್ಷಣೆಕಂಡ 'ಸಲಾರ್' ಟೀಸರ್: ಇದೇ ಖುಷಿಗೆ ಮತ್ತೊಂದು ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್

‘ನೀಲ್‌ ಮಾಮ, ನಮ್‌ ಡಾರ್ಲಿಂಗ್‌ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಮಲಗುತ್ತಿವೆ. ನೀವೇ ನಮಗೆ ದಿಕ್ಕು’, ‘ನೀಲ್‌ ಮಾಮ ತೆರೆ ಮೇಲೆ ಮಸಿ ಕಡಿಮೆ ಮಾಡಿ’, ‘ಪ್ರಶಾಂತ್‌ ಅಣ್ಣ ನಾವು ಬೇರೆ ಯಾರನ್ನೂ ನಂಬುತ್ತಿಲ್ಲ. ನೀವೇ ನಮಗೆ ದಿಕ್ಕು’ ಎನ್ನುವಂತೆ ಮೀಮ್ಸ್‌, ಟ್ರೋಲ್‌ ಮಾಡಕ್ಕೆ ಶುರು ಮಾಡಿರುವ ಪ್ರಭಾಸ್‌ ಅಭಿಮಾನಿಗಳು, ಟ್ರೋಲಿಗರು ಪ್ರಶಾಂತ್‌ ನೀಲ್‌ ಜಪ ಮಾಡುತ್ತಿದ್ದಾರೆ.

ಹೀಗಾಗಿ ಬಾಹುಬಲಿ ಜತೆಗಿದ್ದರೂ ಪ್ರಶಾಂತ್‌ ನೀಲ್‌ಗೆ ಮತ್ತು ಅವರ ‘ಸಲಾರ್‌’ ಚಿತ್ರದ ಭಯ ಕಾಡುತ್ತಿದೆಯಂತೆ. ಅದು ಹಿಂದಿನ ಚಿತ್ರಗಳ ಸೋಲು ಮತ್ತು ಮುಂದಿನ ನಿರೀಕ್ಷೆಗಳ ಕಾರಣಕ್ಕೆ. ‘ಬೇರೆಯವರ ಸಿನಿಮಾಗಳ ಸೋಲಿನ ಭಾರ ನನ್ನ ಮೇಲೆ ಯಾಕ್ರೋ ಹಾಕ್ತಿರಾ’ ಎನ್ನುವ ಪ್ರಶಾಂತ್‌ ನೀಲ್‌ ಅವರ ದುಗುಡವನ್ನು ಯಾರಾದರೂ ಕೇಳಿಸಿಕೊಳ್ಳುವ ತುರ್ತು ಅಗತ್ಯ ಇದೆಯಂತೆ.

Salaar Teaser: ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಟೀಸರ್ ರಿಲೀಸ್: ರಗಡ್ ಲುಕ್‌ನಲ್ಲಿ ಡಾರ್ಲಿಂಗ್ ಪ್ರಭಾಸ್

ರಿಲ್ಯಾಕ್ಸ್ ಆದ ಹೊಂಬಾಳೆ ಫಿಲ್ಮ್ಸ್:
ಪ್ರಭಾಸ್ ಸಲಾರ್ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೋಟಿಗಟ್ಟಲೆ ವೀಕ್ಷಣೆ ಪಡೆದು, ಟ್ರೆಡಿಂಗ್‌ನಲ್ಲಿತ್ತು. ಸಲಾರ್ ಟೀಸರ್ ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಖುಷಿಯಾಗಿದೆ. ಇದೇ ಸಂತಸದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಪತ್ರ ಹಂಚಿಕೊಂಡಿದ್ದಾರೆ. ಜೊತೆಗೆ ಟೈರಲ್ ರಿಲೀಸ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. 'ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೃದಯ ತುಂಬಿದ ಧನ್ಯವಾದಗಳು. ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ' ಎಂದು ನಿರ್ಮಾಪಕರು ಪತ್ರ ಬರೆದು, ಧನ್ಯವಾದ ಹೇಳಿದ್ದಾರೆ.