ಪ್ರತಿಭೆ ಇದ್ದರೆ ಅವಕಾಶಗಳು ಯಾವೆಲ್ಲಾ ರೂಪದಲ್ಲಿ ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ಪೂಜಾ ಹೆಗಡೆ ಸಾಕ್ಷಿ. ಎಲ್ಲಾ ಹೊಸಬರಿಗೂ ತಮ್ಮ ಕಾಲದ ಶ್ರೇಷ್ಠ ನಟ, ನಟಿ ಜೊತೆಗೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದೇ ರೀತಿಯ ಆಸೆ ಪೂಜಾ ಹೆಗಡೆಗೂ ಇದ್ದಿರಬಹುದು. ಸದ್ಯ ಬಾಲಿವುಡ್‌ನ ಬಾದ್‌ಶಾ ಸಲ್ಮಾನ್‌ ಖಾನ್‌ ಜೊತೆಗೆ ನಟಿಸಬೇಕು ಎನ್ನುವ ಆಸೆ ಅವರಿಗೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಅವಕಾಶ ಬಂದು ಎದುರು ನಿಂತಿದೆ.

ಸಜೀದ್‌ ನಡೀಯಾದ್ವಾಲ ನಿರ್ದೇಶನ ಮಾಡುತ್ತಿರುವ ‘ಕಭಿ ಈದ್‌ ಕಭಿ ದಿವಾಲಿ’ ಚಿತ್ರ ಮುಂದಿನ ವರ್ಷ ಅಂದರೆ 2021ಕ್ಕೆ ಬಿಡುಗಡೆಯಾಗಲಿದೆ. ಇದಕ್ಕೆ ಸಲ್ಮಾನ್‌ ಖಾನ್‌ ಹೀರೊ. ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ನಿರ್ದೇಶಕರಲ್ಲಿ ಹುಟ್ಟಿದಾಗ ಅವರ ಕಣ್ಣು ಪೂಜಾ ಕಡೆಗೆ ಹರಿದಿದೆ. ಇದಕ್ಕೆ ಕಾರಣ ಹಿಂದಿನ ‘ಹೌಸ್‌ ಫುಲ್‌ 4’ ಚಿತ್ರ. ಅದರಲ್ಲಿ ಪೂಜಾ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಅವರು ಈ ಚಿತ್ರಕ್ಕೆ ಬೆಸ್ಟ್‌ ಫಿಟ್‌. ಅವರಲ್ಲಿ ಒಳ್ಳೆಯ ಸ್ಕ್ರೀನ್‌ ಪ್ರಸೆನ್ಸ್‌ ಇದೆ ಎಂದು ಸಜೀದ್‌ ನಡೀಯಾದ್ವಾಲ ಅವರ ಪ್ರೊಡಕ್ಷನ್‌ ಹೌಸ್‌ ಟ್ವೀಟ್‌ ಮಾಡಿದೆ. ಹಾಗಾಗಿ ಪೂಜಾ ಆಯ್ಕೆಗೆ ಹಿಂದಿನ ಚಿತ್ರವೇ ಮುಖ್ಯ ಕಾರಣ. ಅಲ್ಲಿಗೆ ಪೂಜಾ ಫುಲ್‌ ಖುಷ್‌ ಆಗಿರುವುದಂತೂ ಗ್ಯಾರೆಂಟಿ. ಮುಂದಿನ ವರ್ಷ ಅಕ್ಟೋಬರ್‌ ವೇಳೆಗೆ ಸಲ್ಮಾನ್‌ ಮತ್ತು ಪೂಜಾ ಜೋಡಿಯನ್ನು ಒಟ್ಟಿಗೆ ನೋಡಿ ಖುಷ್‌ ಆಗುವ ಕಾತುರ ಸಧ್ಯಕ್ಕೆ ಪ್ರೇಕ್ಷಕರದ್ದು.

ಮತ್ತಷ್ಟು ಸ್ಲಿಮ್ ಆಗಲು ಹೊರಟ ಪೂಜಾ

ಮೊಹೆಂಜೋದಾರೋ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಪೂಜಾ ಹೃತಿಕ್ ರೋಷನ್ ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದರು. ನಂತರ ತೆಲಗು ಚಿತ್ರರಂಗದಲ್ಲಿ ಒಂದಲ ಮೇಲೆ ಮತ್ತೊಂದು ಆಫರ್ಸ್ ಪಡೆದು, ಇದೀಗ ಅಲ್ಲಿನ ಬಹ ಬೇಡಿಕೆಯ, ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಬಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿರುವ ಈ ನಟಿ ಕನ್ನಡದಲ್ಲಿ ನಟಿಸುವ ಯಾವುದೇ ಸುದ್ದಿಗಳಿಲ್ಲ. ಆದರೆ, ಹಿಂದಿ, ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. 

ಐಶ್ವರ್ಯಾ ರೈ ಹಾಗೂ ಶಿಲ್ಪಾ ಶೆಟ್ಟಿ ದಕ್ಷಿಣ ಕನ್ನಡದ ಮೂಲದವರಾಗಿದ್ದು, ಬಾಲಿವುಡ್‌ನಲ್ಲಿ ಹೆಸರು ಮಾಡಿದರು. ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ತಮ್ಮದೇ ಛಾಪು ಮೂಡಿಸಿ, ಅಪಾರ ಅಭಿಮಾನಿಗಳು ಹೊಂದಿದ್ದಾರೆ. ಇದೀಗ ಬಾಲಿವುಡ್ ಹಾಗೂ ತಾಲಿವುಡ್  ಎರಡು ಚಿತ್ರೋದ್ಯಮಗಳಲ್ಲಿಯೂ ಪೂಜಾ ಹೆಸರು ಮಾಡಿದ್ದಾರೆ. 

ಬಾಲಿವುಡ್‌ನಲ್ಲಿ ಪೂಜಾಗೆ ಡಿಮ್ಯಾಂಡೋ ಡಿಮ್ಯಾಂಡ್

ಇತ್ತೀಚೆಗೆ ಮಂಗಳೂರಿನ ಈ ಸುಂದರಿಯನ್ನು ನೋಡಲು ಅಭಿಮಾನಿಯೊಬ್ಬ 5 ದಿನಗಳ ಕಾಲ ರಸ್ತೆಯಲ್ಲಿಯೇ ಮಲಗಿ, ಮೀಟ್ ಆಗಲು ಯತ್ನಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಪೂಜಾ ತಕ್ಷಣವೇ ಭೇಟಿ ಮಾಡಿ ಮಾತನಾಡಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಇನ್ನು ಪೂಜಾ ಸಂಭಾವನೆ ಕೇಳಬೇಕೇ? ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಾಗಿನಿಂದ ಇವರ ಸಂಭಾವನೆ ಗಗನ ಮುಟ್ಟಿದೆ ಎಂದು ಟಾಲಿವುಡ್‌ ನಿರ್ದೇಶಕರು ಹೇಳುತ್ತಾರೆ. 'ಅಲ ವೈಕುಂಠಪುರಂ' ಚಿತ್ರಕ್ಕೆ ಪೂಜಾ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದೆ. ಮುಂದಿನ ಚಿತ್ರಗಳಿಗೆ 2 ಕೋಟಿ ಕೇಳುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಮೊಹೆಂಜದಾರೋ ನಟಿಗೆ ಇದೀಗ ಎಲ್ಲೆಡೆ ಎಲ್ಲಿಲ್ಲದ ಡಿಮ್ಯಾಂಡ್.

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ