ಕಾಲಿವುಡ್‌ನ ಖ್ಯಾತ ನಟ ಸೂರ್ಯ ಅಭಿನಯದ 'ಎತ್ತಾರ್ಕು ತುನಿಂದವನ್' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪಿಎಂಕೆ (ಪಟ್ಟಾಲಿ ಮಕ್ಕಳ್ ಕಚ್ಚಿ) ಸದಸ್ಯರು ತಮಿಳುನಾಡಿನ ಕೆಲವು ಕಡೆ ನಟ ಸೂರ್ಯರ ಪ್ರತಿಕೃತಿ ದಹಿಸಿದ್ದಾರೆ.
ಕಾಲಿವುಡ್‌ನ (Kollywood) ಖ್ಯಾತ ನಟ ಸೂರ್ಯ (Suriya) ಅಭಿನಯದ 'ಎತ್ತಾರ್ಕು ತುನಿಂದವನ್' (Etharkum Thuninthavan) ಸಿನಿಮಾ ಶುಕ್ರವಾರವಷ್ಟೇ ರಿಲೀಸ್ ಆಗಿದ್ದು, ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಶುಕ್ರವಾರ 'ಎತ್ತಾರ್ಕು ತುನಿಂದವನ್' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪಿಎಂಕೆ (ಪಟ್ಟಾಲಿ ಮಕ್ಕಳ್ ಕಚ್ಚಿ) ಸದಸ್ಯರು ತಮಿಳುನಾಡಿನ ಕೆಲವು ಕಡೆ ನಟ ಸೂರ್ಯರ ಪ್ರತಿಕೃತಿ ದಹಿಸಿದ್ದಾರೆ. ಪಿಎಂಕೆ ಮಾತ್ರವಲ್ಲದೇ ವನ್ನಿಯರ್ ಸಂಘ ಸಹ ಸೂರ್ಯ ವಿರುದ್ಧ ಪ್ರತಿಭಟನೆಗಳನ್ನು ಮಾಡಿದೆ.
ಈ ಹಿಂದೆ ಸೂರ್ಯ ನಿರ್ಮಾಣ ಮಾಡಿ ನಟಿಸಿದ್ದ ಸಿನಿಮಾ 'ಜೈ ಭೀಮ್'ನಲ್ಲಿ (Jai Bhim) ವನ್ನಿಯರ್ ಸಂಘಕ್ಕೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಆಗಿನಿಂದಲೂ ಸೂರ್ಯ ಅವರ ಕ್ಷಮೆಗೆ ಒತ್ತಾಯಿಸುತ್ತಿರುವ ಪಿಎಂಕೆ (PMK) ಹಾಗೂ ವನ್ನಿಯರ್ ಸಂಘವು (Vanniyar) ಶಿಕ್ರವಾರ ಸೂರ್ಯರ ಹೊಸ ಸಿನಿಮಾ ಬಿಡುಗಡೆ ವೇಳೆ ಮತ್ತೆ ಪ್ರತಿಭಟನೆ ನಡೆಸಿ ಸೂರ್ಯರ ಪ್ರತಿಕೃತಿಯನ್ನು ದಹಿಸಿದೆ. ಟಿಜೆ ಜ್ಞಾನವೇಲ್ (TJ Gnanavel) ನಿರ್ದೇಶಿಸಿದ 'ಜೈ ಭೀಮ್' ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ಜಾತಿ ಆಧಾರಿತ ತಾರತಮ್ಯದ ಹೋರಾಟದ ಕುರಿತು ನಡೆದ ಘಟನೆಯ ಆಧಾರಿತ ಕೋಟ್ ಡ್ರಾಮಾ ಆಗಿದೆ. ಈ ಸಿನಿಮಾದಲ್ಲಿ ಸೂರ್ಯ ನಿಜ ಜೀವನದ ವಕೀಲ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಸೂರ್ಯ ಅವರು ಒಂದೇ ಒಂದು ಪೈಸೆ ಶುಲ್ಕವಿಲ್ಲದೆ ತುಳಿತಕ್ಕೊಳಗಾದವರಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. 'ಜೈ ಭೀಮ್' ಸಿನಿಮಾದಲ್ಲಿ ಭ್ರಷ್ಟ, ಹಿಂಸಾ ಪ್ರವೃತ್ತಿಯ ಪೊಲೀಸ್ ಅಧಿಕಾರಿಯು ವನ್ನಿಯರ್ ಸಮುದಾಯವದವನು ಎಂಬಂತೆ ಚಿತ್ರಿಸಲಾಗಿದೆ ಎಂಬುದು ವನ್ನಿಯರ್ ಸಂಘದ ಆರೋಪವಾಗಿದ್ದು, ಪೊಲೀಸ್ ಅಧಿಕಾರಿ ಇರುವ ದೃಶ್ಯವೊಂದರಲ್ಲಿ ವನ್ನಿಯರ್ ಸಮುದಾಯದ ಗುರುತಾಗಿರುವ ಚೆಂಬು ಹಾಗೂ ಕತ್ತಿಗಳು ಹೊಂದಿರುವ ಕ್ಯಾಲೆಂಡರ್ ತೂಗು ಹಾಕಲಾಗಿರುತ್ತದೆ. ಇದೇ ಕಾರಣಕ್ಕೆ 'ಜೈ ಭೀಮ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ವನ್ನಿಯರ್ ಸಂಘವು ಸೂರ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
Assault Case: ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ
ಈಗಾಗಲೇ 'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿಜೆ ಜ್ಞಾನವೇಲು ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದು, ಕ್ಷಮೆಯನ್ನೂ ಯಾಚಿಸಿದ್ದಾರೆ. ತಾವು ಉದ್ದೇಶಪೂರ್ವಕವಾಗಿ ಆ ದೃಶ್ಯದಲ್ಲಿ ಕ್ಯಾಲೆಂಡರ್ ತೂಗು ಹಾಕಿಲ್ಲ, ಬದಲಿಗೆ ಅದೊಂದು ಕಾಕತಾಳೀಯವಷ್ಟೆ ಎಂದಿದ್ದಾರೆ. ಅಲ್ಲದೆ ಸಿನಿಮಾದ ಕ್ರಿಯಾತ್ಮಕ ಕಾರ್ಯಕ್ಕೂ ನಿರ್ಮಾಪಕ ಸೂರ್ಯಗೂ ಸಂಬಂಧ ಇಲ್ಲ ಹಾಗಾಗಿ ಅವರ ಮೇಲೆ ಆರೋಪ ಮಾಡುವುದು, ಅವರ ಕ್ಷಮೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ಸಹ ಜ್ಞಾನವೇಲು ಹೇಳಿದ್ದರು. ಆದರೂ ಸಹ ಸೂರ್ಯ ವಿರುದ್ಧ ಪ್ರತಿಭಟನೆಗಳು ಅಲ್ಲಲ್ಲಿ ನಡೆಯುತ್ತಿವೆ. 
ಈ ಹಿಂದೆ ತಮಿಳುನಾಡಿನ ಪಿಎಂಕೆ (ಪಟ್ಟಾಲಿ ಮಕ್ಕಳ್ ಕಚ್ಚಿ) ಪದಾಧಿಕಾರಿಯು ನಟ ಸೂರ್ಯ ಮೇಲೆ ದಾಳಿ ಮಾಡಿದರೆ ನಗದು ಬಹುಮಾನವನ್ನು ಘೋಷಿಸಿದ್ದರು. ಆಗ ಪಿಎಂಕೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಹಾಗೂ 'ಜೈ ಭೀಮ್' ಚಿತ್ರದ ಕೆಲವು ದೃಶ್ಯಗಳು ತಮ್ಮ ಖ್ಯಾತಿಗೆ ಮಸಿ ಬಳಿದಿದೆ ಎಂದು ಸೂರ್ಯ ಅವರಿಗೆ ವನ್ನಿಯಾರ್ ಸಮುದಾಯವು ಲೀಗಲ್ ನೋಟಿಸ್ ನೀಡಿತ್ತು. ನೋಟಿಸ್ ನಂತರ, ನಟನಿಗೆ ಬೆದರಿಕೆಗಳು ಬಂದವು. ಸೂರ್ಯ ಅವರ ನಿವಾಸದ ಹೊರಗೆ ಶಸ್ತ್ರಾಸ್ತ್ರಗಳೊಂದಿಗೆ ಐದು ಪೊಲೀಸ್ ಸಿಬ್ಬಂದಿಯನ್ನು ಈ ಮೊದಲು ನಿಯೋಜಿಸಲಾಗಿತ್ತು.
16 ವರ್ಷಗಳ ನಂತರ ಸೂರ್ಯ ಮತ್ತು ಜ್ಯೋತಿಕಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ?
ಇನ್ನು ಸೂರ್ಯ ನಟನೆಯ 'ಎತ್ತಾರ್ಕು ತುನಿಂದವನ್' ಚಿತ್ರಕ್ಕೆ ಪಾಂಡಿರಾಜ್ (Pandiraj) ಆಕ್ಷನ್ ಕಟ್ ಹೇಳಿದ್ದು, ಸಿನಿಮಾವು ಅಶ್ಲೀಲ ವಿಡಿಯೋ ಚಿತ್ರಿಸಿ ಹರಿಬಿಡುವವರ ಸುತ್ತ ಇದೆ. ಇದೊಂದು ಕೌಟುಂಬಿಕ ಸಿನಿಮಾ ಸಹ ಆಗಿದ್ದು, ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಸೂರ್ಯಗೆ ನಾಯಕಿಯಾಗಿ ಪ್ರಿಯಾಂಕಾ ಅರುಳ್ (Priyanka Arul) ಕಾಣಿಸಿಕೊಂಡಿದ್ದು, ಸಿನಿಮಾವನ್ನು ಕಲಾನಿಧಿ ಮಾರನ್ (Kalanithi Maran) ನಿರ್ಮಾಣ ಮಾಡಿದ್ದಾರೆ.
