ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಐತಿಹಾಸಿಕ ಚಿತ್ರ 'ಹರಿಹರ ವೀರಮಲ್ಲು' ಬಿಡುಗಡೆ ದಿನಾಂಕ ನಿಗದಿಯಾಗಿದೆ. ಈ ಬಿಗ್ ಬಜೆಟ್ ಸಿನಿಮಾ ಯಾವಾಗ ತೆರೆಗೆ ಬರುತ್ತಿದೆ ಅಂತೀರಾ?
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಐತಿಹಾಸಿಕ ಚಿತ್ರ 'ಹರಿಹರ ವೀರಮಲ್ಲು'. ಪವನ್ ಕಲ್ಯಾಣ್ ಒಬ್ಬ ಯೋಧನಾಗಿ 'ವೀರಮಲ್ಲು' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಕಥೆ 17ನೇ ಶತಮಾನದ ಹಿನ್ನೆಲೆಯಲ್ಲಿ ಸಾಗುತ್ತದೆ. ಪವನ್ ಕಲ್ಯಾಣ್‌ಗೆ ಇದು ಕೆಲವು ಗ್ಯಾಪ್ ನಂತರ ಬರುತ್ತಿರುವ ಚಿತ್ರವಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ. ಈ ಬಿಗ್ ಬಜೆಟ್ ಸಿನಿಮಾವನ್ನು ಜೂನ್ 12 ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಪ್ರಸ್ತುತ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ವಿಎಫ್‌ಎಕ್ಸ್, ಸೌಂಡ್ ಡಿಸೈನ್, ಡಬ್ಬಿಂಗ್ ಮುಂತಾದ ಪ್ರಮುಖ ಕೆಲಸಗಳನ್ನು ಚಿತ್ರತಂಡವು ವೇಗವಾಗಿ ಪೂರ್ಣಗೊಳಿಸುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಂಗೀತ ಪ್ರಿಯರ ಮನ ಗೆದ್ದಿವೆ. ಶೀಘ್ರದಲ್ಲೇ ಮೂರನೇ ಹಾಡಿನ ಜೊತೆಗೆ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.
ಈ ಚಿತ್ರಕ್ಕೆ ಎ.ಎಂ. ಜ್ಯೋತಿ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ತಡವಾದರೂ ನಿರ್ದೇಶಕರು ಈ ಯೋಜನೆಯನ್ನು ಗುಣಮಟ್ಟದ ದೃಷ್ಟಿಯಿಂದ ಪರಿಷ್ಕರಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ, ತೋಟ ತರಣಿ ಪ್ರೊಡಕ್ಷನ್ ಡಿಸೈನ್ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ.

ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗೆ ಬಾಲಿವುಡ್ ನಟ ಬಾಬಿ ಡಿಯೋಲ್ ಮೊಘಲ್ ಚಕ್ರವರ್ತಿಯಾಗಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸಿದರೆ, ಹಿರಿಯ ನಟರಾದ ಸತ್ಯರಾಜ್, ಜಿಶ್ಶು ಸೇನ್‌ಗುಪ್ತ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ. ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿರುವ 'ಹರಿಹರ ವೀರಮಲ್ಲು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಲಿದೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ಪವನ್ ಸ್ಟಾರ್ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.


