Parineeti Chopra Engaged: ಗುಸುಗುಸುಗೆ ಕೊನೆಗೂ ತೆರೆ- ಪ್ರೇಮಪಕ್ಷಿಗಳ ಎಂಗೇಜ್‌ಮೆಂಟ್
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಡೇಟಿಂಗ್ ಸುದ್ದಿಗೆ ಕೊನೆಗೂ ತೆರೆ ಬಿದ್ದಿದ್ದು, ಈ ಜೋಡಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದೆ.
ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ದ ನಟಿ ಪರಿಣಿತಿ ಚೋಪ್ರಾ ಕೊನೆಗೂ ಮದುವೆಯ ಬಂಧನಕ್ಕೆ ಒಳಗಾಗಲು ಸನ್ನದ್ಧರಾಗಿದ್ದಾರೆ. ನಿನ್ನೆ ಅಂದರೆ ಮೇ 13ರಂದು ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾ (Raghav Chadda) ಅವರೊಂದಿಗೆ ನಟಿಯ ನಿಶ್ಚಿತಾರ್ಥ ಸಂಬಂಧ ನಡೆದಿದೆ. ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ. ಶೀಘ್ರವೇ ಇವರ ವಿವಾಹವೂ ನಡೆಯಲಿದೆ ಎನ್ನಲಾಗಿದ್ದು, ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಈಗ ಪರಿಣಿತಿಚೋಪ್ರಾ ಮತ್ತು ರಾಘವ್ ಚಡ್ಡಾ ಹಸೆಮಣೆಯೇರಲಿದ್ದಾರೆ. ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಇಷ್ಟು ದಿನಗಳು ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದುವರೆಗೆ ಮದುವೆಯ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದಾಗ ಸುದ್ದಿ ಮತ್ತಷ್ಟು ಹರಡಿತ್ತು. ಕೊನೆಗೆ ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ ಟ್ವೀಟ್ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದರೂ ಜೋಡಿ ಮಾತ್ರ ಮೌನ ತಾಳಿತ್ತು. ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಪಂಜಾಬಿ ಶೈಲಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್ (Engagement) ನಡೆದಿದೆ. ಪ್ರಿಯಾಂಕಾ ಚೋಪ್ರಾ ಕೂಡ ಸೇರಿ ಎರಡೂ ಕುಟುಂಬದ ಹಲವರು ಈ ಖುಷಿಯ ಕ್ಷಣದ ಭಾಗವಾಗಿದ್ದರು. ಆಯ್ದ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿ ರಾಜಕೀಯ ಗಣ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. 150ಕ್ಕೂ ಅಧಿಕ ಅತಿಥಿಗಳ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಳ್ಳುವ ಮೂಲಕ ಪ್ರೀತಿಯಲ್ಲಿದ್ದ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲು ಅಧಿಕೃತ ಮುದ್ರೆಯೊತ್ತಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತುಂಬಾ ರೊಮ್ಯಾಂಟಿಕ್ ಆಗಿ ಕಾಣುತ್ತಿದ್ದರು. ಅಲ್ಲಿ ಪರಿಣಿತಿ ಹಾಡುತ್ತಿದ್ದಾಗ, ರಾಘವ್ ಆಕೆಯನ್ನು ಕಿಸ್ ಮಾಡಿದರು. ಸದ್ಯ ಕುಟುಂಬದ ಕೆಲ ಮೂಲಗಳ ಮಾಹಿತಿ ಪ್ರಕಾರ ಇದೇ ವರ್ಷದ ಅಕ್ಟೋಬರ್‌ನಲ್ಲಿ ಈ ಜೋಡಿಯ ಅದ್ದೂರಿ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.
ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ರು ಪರಿಣಿತಿ!
ಕೊನೆಯವರೆಗೂ ಮೌನ ವಹಿಸಿದ್ದ ಜೋಡಿ ನಿಜವಾಗಿಯೂ ಡೇಟಿಂಗ್ನಲ್ಲಿ ಇದ್ದಾರೆಯೇ ಇಲ್ಲವೇ ಎನ್ನುವುದಕ್ಕೆ ಇನ್ನಷ್ಟು ಕುತೂಹಲ ಬಂದಿದ್ದ ಕಾರಣ ಏನೆಂದರೆ, ಪರಿಣಿತಿ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾತಲಾಣದಲ್ಲಿ ಸಕತ್ ಸದ್ದು ಮಾಡಿದ್ದು. ನಟಿ ಆ ಸಂದರ್ಶನದಲ್ಲಿ ಎಂದಿಗೂ ಯಾವುದೇ ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದರು.
ಕೆಲವು ವರ್ಷಗಳ ಹಿಂದೆ ನಡೆದಿದ್ದ ಈ ಸಂದರ್ಶನವು ಅವರ ಸಿನಿಮಾವೊಂದರ ಪ್ರಚಾರದ ಸಂದರ್ಭದಲ್ಲಿ ನಡೆದಿತ್ತು. ಆಗ ಪತ್ರಕರ್ತರು ಮದುವೆಯ ಕುರಿತು ಕೇಳಿದ್ದ ಪ್ರಶ್ನೆಗೆ ನಟಿ ಪರಿಣಿತಿ, ಒಬ್ಬ ರಾಜಕಾರಣಿ ತನ್ನ ಗಂಡನಾಗಲು ಸಾಧ್ಯವಿಲ್ಲ. ಅದು ನನ್ನ ಮೊದಲ ಆಯ್ಕೆಯಾಗುವುದಿಲ್ಲ ಎಂದಿದ್ದರು. ಈ ಸಂದರ್ಶನದ ಸಮಯದಲ್ಲಿ ಇದಲ್ಲದೆ, ಆದರ್ಶ ಪತಿಯ ಮೂರು ಗುಣಗಳ ಬಗ್ಗೆ ಕೇಳಿದಾಗ, ಪರಿಣಿತಿ ಅವರು 'ಅವನು ತಮಾಷೆಯಾಗಿರಬೇಕು, ಅವನು ಒಳ್ಳೆಯ ಗುಣ ಹೊಂದಿರಬೇಕು ಮತ್ತು ಅವನು ನನ್ನನ್ನು ಗೌರವಿಸಬೇಕು' ಎಂದು ಹೇಳಿದ್ದರು. ನಂತರ ನೀವು ಯಾರನ್ನು ಮದುವೆಯಾಗುವಿರಿ ಎಂದು ಪ್ರಶ್ನಿಸಲಾಗಿತ್ತು. ಮೊದಲು ನಟರ ಬಗ್ಗೆ ಕೇಳಲಾಗಿತ್ತು. ನಂತರ ಹಾಲಿವುಡ್ ನಟ ಬ್ರಾಡ್ ಪಿಟ್ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅವುಗಳ ಬಗ್ಗೆ ನಟಿ ಮೌನವಾಗಿದ್ದಾಗ ಒಂದು ವೇಳೆ ರಾಜಕಾರಣಿಯನ್ನು (Politician) ಮದುವೆಯಾಗುವುದಾದರೆ ನೀವು ಒಪ್ಪಿಕೊಳ್ಳುವಿರಾ ಎಂದು ಪ್ರಶ್ನಿಸಲಾಗಿತ್ತು. ಕೂಡಲೇ ಪರಿಣಿತಿ, ಸಾಧ್ಯವೇ ಇಲ್ಲ. ಅದು ನನ್ನ ಮೊದಲ ಆಯ್ಕೆ ಆಗುವುದೇ ಇಲ್ಲ. ನಾನು ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವು ಉತ್ತಮ ಆಯ್ಕೆಗಳು ಇರುವಾಗ ರಾಜಕಾರಣಿಯನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರು. ಸ್ವಯಂ ನಿರ್ಮಿತ ಪುರುಷನನ್ನು ಜೀವನ ಸಂಗಾತಿಯನ್ನಾಗಿ ಬಯಸುತ್ತೇನೆ. ನಾನು ಸ್ವಾಭಿಮಾನ ಹೊಂದಿರುವ, ತಮ್ಮನ್ನು ತಾವು ರೂಪಿಸಿಕೊಂಡ ಪುರುಷರನ್ನು ಇಷ್ಟಪಡುತ್ತೇನೆ. ರಾಜಕಾರಣಿ ನನ್ನ ಆಯ್ಕೆಯಾಗಲು ಸಾಧ್ಯವಿಲ್ಲ ಎಂದಿದ್ದರು.
ಚಾರ್ಟರ್ಡ್ ಅಕೌಂಟೆಂಟ್ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ನೆಟ್ ವರ್ತ್ ಎಷ್ಟು?