ಮುಂಬೈ(ಮಾ.07): ಕೆಲ ದಿನಗಳ ಹಿಂದೆ ತಮ್ಮ ಮೇಲೆ ನಡೆದ ಆದಾಯ ತೆರಿಗೆ (ಐಟಿ) ದಾಳಿ ಕುರಿತು ಮೌನ ಮುರಿದಿರುವ ಬಾಲಿವುಡ್‌ ನಟಿ ತಾಪ್ಸಿ ಪನ್ನು ಹಾಗೂ ನಿರ್ದೇಶಕ ಅನುರಾಗ್‌ ಕಶ್ಯಪ್‌ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.

ತಾಪ್ಸಿ ಪನ್ನು ಅವರು ‘ಗಮನಿಸಿ, ನಾನಿನ್ನು ಅಗ್ಗ ಅಲ್ಲ’ ಎಂದು ವ್ಯಂಗ್ಯವಾಗಿ 3 ಟ್ವೀಟ್‌ ಮಾಡಿದ್ದಾರೆ. ಇನ್ನು ಚಿತ್ರೀಕರಣಕ್ಕೆ ಮರಳಿರುವ ಕಶ್ಯಪ್‌, ‘ನನ್ನ ಟೀಕಾಕಾರರಿಗೆ ವಂದನೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ತಾಪ್ಸಿ ಪನ್ನು ಹೇಳಿಕೆ ನೀಡಿ, ‘3 ದಿನಗಳ ವ್ಯಾಪಕ ತಪಾಸಣೆ ನಡೆಸಿದ್ದು ಇದರ ಬಗ್ಗೆ: 1.ಪ್ಯಾರಿಸ್‌ನಲ್ಲಿ ನಾನು ಹೊಂದಿದ್ದೇನೆ ಎನ್ನಲಾದ ಬಂಗಲೆಯ ಕೀ ಬಗ್ಗೆ. ಏಕೆಂದರೆ ಬೇಸಿಗೆ ರಜೆ ಹತ್ತಿರ ಬರುತ್ತಿದೆ. 2.ನಾನು ಪಡೆದುಕೊಂಡಿದ್ದೇನೆ ಎನ್ನಲಾದ 5 ಕೋಟಿ ರು. ಬಗ್ಗೆ. ಏಕೆಂದರೆ ಈ ಹಿಂದೆ ಆ ಹಣವನ್ನು ನಾನು ನಿರಾಕರಿಸಿದ್ದೆ. 3.ಗೌರವಾನ್ವಿತ ಹಣಕಾಸು ಮಂತ್ರಿಗಳ ಪ್ರಕಾರ ಈ ಹಿಂದೆ 2013ರಲ್ಲೂ ನನ್ನ ಮೇಲೆ ನಡೆದಿತ್ತು ಎನ್ನಲಾದ ಐಟಿ ದಾಳಿಯ ಕುರಿತು ನನಗಿರುವ ನೆನಪಿನ ಬಗ್ಗೆ. ಗಮನಿಸಿ: ನಾನಿನ್ನು ಮೊದಲಿನಂತೆ ಅಗ್ಗ (ಸಸ್ತಾ) ಅಲ್ಲ’ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ‘ಈ ನಟರ ಮೇಲೆ 2013ರಲ್ಲೂ ಐಟಿ ದಾಳಿ ನಡೆದಿತ್ತು. ಆಗ ಯಾರೂ ಗದ್ದಲ ಮಾಡಿರಲಿಲ್ಲ’ ಎಂದು ಹೇಳಿದ್ದರು. ಅದಕ್ಕೆ ತಾಪ್ಸಿ ತಿರುಗೇಟು ನೀಡಿದ್ದಾರೆ. ಮಾ.3ರಂದು ತಾಪ್ಸಿ ಹಾಗೂ ಬಾಲಿವುಡ್‌ ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಆ ವೇಳೆ 650 ಕೋಟಿ ರು.ಗಿಂತ ಹೆಚ್ಚು ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ ಎನ್ನಲಾಗಿತ್ತು.