Mahavatar Narasimha Movie : ಹಿಂದಿನ ವಾರ ಬಿಡುಗಡೆಯಾದ ಸಿನಿಮಾಗಳ ಕಲೆಕ್ಷನ್ ಜೋರಾಗಿದೆ. ಸು ಫ್ರಂ ಸೋ ಜೊತೆ ಹೆಚ್ಚು ಗಳಿಕೆ ಕಂಡ ಸಿನಿಮಾ ಯಾವ್ದು? ಗಳಿಕೆ ಎಷ್ಟು? ಮಾಹಿತಿ ಇಲ್ಲಿದೆ.
ಯಾವುದೇ ಸಿನಿಮಾ (movie) ಸೂಪರ್ ಹಿಟ್ ಆಗೋಕೆ ಸೂಪರ್ ಸ್ಟಾರ್ (superstar), ಹಿಟ್ ಸಾಂಗ್, ಮಾಸ್ ಡೈಲಾಗ್ಸ್, ರೋಮ್ಯಾಂಟಿಕ್ ಸಾಂಗ್, ಐಟಂ ಡಾನ್ಸ್ ಇರ್ಲೇಬೇಕು ಅಂತ ಇಲ್ವೇ ಇಲ್ಲ. ಜನ ಒಳ್ಳೆ ಕಥೆ ಹಾಗೂ ಕಥೆ ಹೇಳಿದ ರೀತಿ ಚೆನ್ನಾಗಿದ್ರೆ ಸಿನಿಮಾವನ್ನು ಮೆಚ್ಚಿಕೊಳ್ತಾರೆ. ಅದಕ್ಕೆ ಸ್ಯಾಂಡಲ್ವುಡ್ ಸಿನಿಮಾ ಸು ಫ್ರಮ್ ಸೋ ಮಾತ್ರ ಎಗ್ಸಾಂಪಲ್ ಅಲ್ಲ. ತೆರೆಗಪ್ಪಳಿಸಿ, ಸದ್ದಿಲ್ಲದೆ ದುಡ್ಡು ಬಾಚಿಕೊಳ್ತಿರುವ ಇನ್ನೊಂದು ಸಿನಿಮಾ ಕೂಡ ಈ ಲೀಸ್ಟ್ ನಲ್ಲಿದೆ. ಭಕ್ತ ಪ್ರಹ್ಲಾದ್ ಮತ್ತು ವಿಷ್ಣುವಿನ ಅವತಾರ ನರಸಿಂಹನ ಕಥೆ ದೊಡ್ಡ ಪರದೆ ಮೇಲೆ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕನ್ನಡದ ಆನಿಮೇಟೆಡ್ ಸಿನಿಮಾ ಮಹಾವತಾರ ನರಸಿಂಹ (Mahavatar Narasimha), ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ಮಹಾವತಾರ ನರಸಿಂಹ ಸಿನಿಮಾ, ಪ್ರೇಕ್ಷಕರ ಮನಸ್ಸು ಗೆಲ್ಲೋದ್ರಲ್ಲಿ ಯಶಸ್ವಿಯಾಗಿದೆ. ಈ ಚಿತ್ರ ಕೂಡ ಹೌಸ್ ಫುಲ್ ಆಗಿ ಓಡ್ತಿದೆ. ಅನಿಮೇಟೆಡ್ ಚಿತ್ರ ಮಹಾವತಾರ ನರಸಿಂಹ ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದೆ. ಚಿತ್ರ ಈವರೆಗೆ 105 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರ ಕನ್ನಡ, ಹಿಂದಿ ಮತ್ತು ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗ್ತಿದೆ.
ಪ್ರೇಕ್ಷಕರು ಚಿತ್ರದ ಕಥೆ, ಅನಿಮೇಷನ್ ಗುಣಮಟ್ಟ ಮತ್ತು ಆಧ್ಯಾತ್ಮಿಕ ಸ್ಪರ್ಶವನ್ನು ಇಷ್ಟಪಡುತ್ತಿದ್ದಾರೆ. ಕೇವಲ ಮಕ್ಕಳಿಗಾಗಿ ಮಾಡಿರುವ ಸಿನಿಮಾ ಇದಲ್ಲ. ಎಲ್ಲಾ ವಯಸ್ಸಿನ ಜನರು ಇದನ್ನು ಇಷ್ಟಪಡ್ತಿದ್ದಾರೆ. ಇದರಿಂದಾಗಿ ಈ ಚಿತ್ರ ನಿಧಾನವಾಗಿ ಪ್ಯಾನ್ ಇಂಡಿಯಾ ಬ್ಲಾಕ್ಬಸ್ಟರ್ ರೂಪವನ್ನು ಪಡೆಯುತ್ತಿದೆ.
ಚಿತ್ರದ ಇನ್ನೊಂದು ವಿಶೇಷ ಹಿನ್ನೆಲೆ ಸಂಗೀತ. ಇದನ್ನು ಪ್ರಸಿದ್ಧ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಸಂಯೋಜಿಸಿದ್ದಾರೆ. ಅವರ ಸಂಗೀತ ಚಿತ್ರದ ಪ್ರತಿಯೊಂದು ಭಾವನಾತ್ಮಕ ಮತ್ತು ಸಾಹಸ ದೃಶ್ಯವನ್ನು ಪ್ರೇಕ್ಷಕರು ಇನ್ನಷ್ಟು ಇಷ್ಟಪಡುವಂತೆ ಮಾಡ್ತಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಪ್ರಸ್ತುತಿಯಲ್ಲಿ ಕ್ಲೆಮ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಕಂಟೆಂಟ್ ಪ್ರಬಲವಾಗಿದ್ರೆ, ಅನಿಮೇಷನ್ ಚಿತ್ರಗಳು ಸಹ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಾಣ್ತವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷವಾಗಿದೆ.
ಈ ಚಿತ್ರದ ಬಜೆಟ್ ಕೇವಲ 15 ಕೋಟಿ ರೂಪಾಯಿ. ಸಿನಿಮಾ ಈಗ ತನ್ನ ಬಜೆಟ್ಗಿಂತ ಸುಮಾರು 6.5 ಪಟ್ಟು ಹೆಚ್ಚು ಗಳಿಕೆ ಕಂಡಿದೆ. ಉಳಿದ ಭಾಷೆಗಿಂತ ಹಿಂದಿಯಲ್ಲಿ ಈ ಚಿತ್ರಕ್ಕೆ ರೆಸ್ಪಾನ್ಸ್ ಹೆಚ್ಚಿದೆ. ಅಹಾನ್ ಪಾಂಡೆ-ಅನಿತ್ ಪಡ್ಡಾ ಅವರ ಬ್ಲಾಕ್ಬಸ್ಟರ್ ಸೈಯಾರಾ, ಅಜಯ್ ದೇವಗನ್ ಅಭಿನಯದ ಸನ್ ಆಫ್ ಸರ್ದಾರ್ 2, ಸಿದ್ಧಾಂತ್ ಚತುರ್ವೇದಿ-ತ್ರಿಪ್ತಿ ದಿಮ್ರಿ ಅವರ ಧಡಕ್ 2 ಗಿಂತ ಮಹಾವತಾರ ನರಸಿಂಹ ಹೆಚ್ಚು ಹಣ ಗಳಿಸಿದೆ. ಮೊದಲ ದಿನ ಸಿನಿಮಾ 1.75 ಕೋಟಿ ಗಳಿಕೆ ಮಾಡಿತ್ತು. ಭಾನುವಾರ 23.40 ಕೋಟಿ ಬಾಚಿಕೊಂಡಿತ್ತು. ಅದ್ರಲ್ಲಿ ಹಿಂದಿ ಪ್ರೇಕ್ಷಕರು 17.8 ಕೋಟಿ ಗಳಿಕೆಗೆ ಕಾರಣರಾಗಿದ್ದಾರೆ. ಒಟ್ಟೂ ಚಿತ್ರ 105 ಕೋಟಿ ಸಂಪಾದನೆ ಮಾಡಿದ್ದು,ಗಳಿಕೆ ದಿನ ದಿನಕ್ಕೂ ಹೆಚ್ಚಾಗ್ತಾನೆ ಇದೆ. ಮಹಾವತಾರ ನರಸಿಂಹ, ಸಿನಿಮಾ ಮೇಲೆ ಭಾರತೀಯರಿಗಿರುವ ಅಭಿಪ್ರಾಯವನ್ನು ಬದಲಿಸಿದೆ. ಭಾರತದ ಪ್ರೇಕ್ಷಕರು ಸೂಪರ್ ಸ್ಟಾರ್ ನೆಚ್ಚಿಕೊಂಡು ಸಿನಿಮಾ ನೋಡ್ತಿಲ್ಲ. ಕಥೆಯನ್ನು ಇಷ್ಟಪಡ್ತಿದ್ದಾರೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷ ಸಿಕ್ಕಂತಾಗಿದೆ.
