ಶೂಟಿಂಗ್ ವೇಳೆ ನಟ ವಿಶಾಲ್ ಕಾಲಿಗೆ ಗಾಯ ಲಾಠಿ ಚಿತ್ರದ ಶೂಟಿಂಗ್ ವೇಳೆ ಅವಘಡ ಕಳೆದ ತಿಂಗಳು ಕೈಗೆ ಗಾಯವಾಗಿ ಚಿಕಿತ್ಸೆ
ಚೆನ್ನೈ(ಜು.04): ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತಯರಾಗುತ್ತಿರುವ ಲಾಠಿ ಸಿನಿಮಾ ಶೂಟಿಂಗ್ ವೇಳೆ ಅವಘಡ ನಡೆದಿದೆ. ಚಿತ್ರದ ನಟ ವಿಶಾಲ್ ಕಾಲಿಗೆ ಗಾಯವಾಗಿದೆ. ಇದರಿಂದ ಲಾಠಿ ಸಿನಿಮಾ ಚಿತ್ರೀಕರಣ ರದ್ದು ಮಾಡಲಾಗಿದೆ. ವಿಶಾಲ್‌ಗೆ ಚಿಕಿತ್ಸೆ ನೀಡಲಾಗಿದೆ.
ಲಾಠಿ ಚಿತ್ರದ ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್‌ನಲ್ಲಿ ಈ ಅವಘಡ ಸಂಭವಿಸಿದೆ. ಆ್ಯಕ್ಷನ್ ಸೀನ್ ಚಿತ್ರೀಕರಣ ಮಾಡುವ ವೇಳೆ ಈ ಘಟನೆ ನಡೆದಿದೆ. ಅವಘಡದಲ್ಲಿ ವಿಶಾಲ್ ಕಾಲಿಗೆ ಗಾಯವಾಗಿದೆ. ತಕ್ಷಣವೇ ವಿಶಾಲ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಲಾಠಿ ಚಿತ್ರದಲ್ಲಿ ವಿಶಾಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳು ಇದೇ ಲಾಠಿ ಚಿತ್ರದ ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡಿದ್ದರು. ಕೈ ಹಾಗೂ ಬೆರಳು ಮೂಳೆ ಮುರಿತಗೊಂಡಿತ್ತು. ಹೀಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದಿದ್ದ ವಿಶಾಲ್ ಚೇತರಿಸಿಕೊಂಡು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದರು.
ಕೈಗೆ ಆಗಿದ್ದ ಗಾಯಕ್ಕೆ ಕೇರಳದ ಆಯುರ್ವೇದ ಚಿಕಿತ್ಸೆ ಪಡೆದಿದ್ದ ವಿಶಾಲ್, ವೇಗವಾಗಿ ಚೇತರಿಸಿಕೊಂಡಿದ್ದರು. ಬಳಿಕ ಹೈದರಾಬಾದ್‌ನಲ್ಲಿ ಲಾಠಿ ತಂಡವನ್ನು ಸೇರಿಕೊಂಡು ಚಿತ್ರೀಕರಣ ಮುಂದುವರಿಸಿದ್ದರು. ಇದೀಗ ಕಾಲಿಗೆ ಗಾಯವಾಗಿದ್ದು ವಿಶಾಲ್ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಲಾಠಿ ಚಿತ್ರ ತಂಡ ಹೇಳಿದೆ.
ಕ್ಲಮ್ಯಾಕ್ಸ್ ಹಂತದ ಆ್ಯಕ್ಷನ್ ಸೀನ್‌ಗಳನ್ನು ಖ್ಯಾತ ಸ್ಟಂಟ್ ಕೊರಿಯೋಗ್ರಾಫರ್ ಪೀಟರ್ ಹೈನ್ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
