ಕಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಟ ವಿಜಯ್ ಸೇತುಪತಿ ಯಾರಿಗೆ ಕಷ್ಟ ಎಂದು ಗೊತ್ತಾದರೂ ಮೊದಲು ಮುಂದೆ ಹೋಗಿ ಸಹಾಯ ಮಾಡುತ್ತಾರೆ. ಸಪೋರ್ಟಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯ್‌ಗೆ ತೆರೆ ಮೇಲೆ ನಟನಾಗಿ ಮಿಂಚಲು ಸಹಾಯ ಮಾಡಿದ್ದ ನಿರ್ದೇಶಕರಲ್ಲಿ ಎಸ್‌.ಪಿ.ಜನನಾಥನ್‌ ಕೂಡ ಒಬ್ಬರು.

ಮಾರ್ಚ್ 14ರಂದು ಜನನಾಥನ್‌ ಹೃದಯಾಘಾತದಿಂದ ಕೊನೆ ಉಸಿರೆಳೆದರು. ಅವರ ಇಡೀ ಆಸ್ಪತ್ರೆ ಖರ್ಚು ವೆಚ್ಚಗಳನ್ನು ವಿಜಯ್ ಸೇತುಪತಿಯೇ ನೋಡಿಕೊಂಡರು ಎನ್ನಲಾಗಿದೆ. ವಿಜಯ್‌ ಆರಂಭದ ದಿನಗಳಲ್ಲಿ ಅವಕಾಶ ನೀಡಿ, ಬೆಳಸಿದ ಗುರು ಜನನಾಥನ್ ಒಂದು ಸಮಯದಲ್ಲಿ ನಿರ್ದೇಶನ ಮಾಡಲು ಬಂಡವಾಳ ಹಾಕದವರು ಇಲ್ಲದೇ ಕಂಗಾಲಾಗಿದ್ದರು.  ಆಗಲೂ ವಿಜಯ್ ಸೇತುಪತಿ ಮುಂದೆ ಬಂದು ಬಂಡವಾಳ ಹಾಕಿ ಸಿನಿಮಾ ನಿರ್ದೇಶನ ಮುಂದುವರಿಸಲು ಸಹಾಯ ಮಾಡಿದರು. 

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಜನನಾಥನ್‌ ಇನ್ನಿಲ್ಲ

ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಜನನಾಥನ್‌ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಸಹಾಯ ಮಾಡಿದ ವಿಚಾರಗಳ ಬಗ್ಗೆ ಮಾತನಾಡಿದ್ದರು. ಜನನಾಥನ್ ಅಂತಿಮ ಯಾತ್ರೆಯಲ್ಲಿ ಆಪ್ತ ಕುಟುಂಬಸ್ಥರಂತೆ ವಿಜಯ್ ಪಾಲ್ಗೊಂಡರು. ಇಡೀ ಕುಟುಂಬಕ್ಕೆ  ಆರ್ಥಿಕ ನೆರವು ನೀಡಿ, ವಿಜಯ್ ಜೊತೆಗೆ ನಿಲ್ಲುವುದಾಗಿ ಮಾತು ನೀಡಿದ್ದಾರೆ.