ಖ್ಯಾತ ಗಾಯಕ ಮಿಕಾ ಸಿಂಗ್‌ ಅವರು ತಮ್ಮ ಇಚ್ಛೆಗೆ ವಿರುದ್ಧವಾಗಿ ಕಿಸ್‌ ಮಾಡಿದ್ದರು ಎಂದು ಆರೋಪಿಸಿ ರಾಖಿ ಸಾವಂತ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಇದಕ್ಕೆ ಕಾರಣವೇನು?

ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಆಗಾಗ್ಗೆ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. ಕೆಲವೊಮ್ಮೆ ರಾಖಿ ತಮ್ಮ ಸಂಬಂಧದಿಂದ ಮತ್ತೆ ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಸಾವಂತ್ ಹಾಗೂ ಖ್ಯಾತ ಗಾಯಕ ಮಿಕಾ ಸಿಂಗ್ ಕಿಸ್ಸಿಂಗ್‌ ಕೇಸ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ಅಸಲಿಗೆ ಈ ಘಟನೆ ನಡೆದಿದ್ದು 2006ರಲ್ಲಿ. ನಟಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಚುಂಬಿಸಿದ ಆರೋಪ ಗಾಯಕ ಮಿಕಾ ಸಿಂಗ್ ಮೇಲಿತ್ತು. ಮಿಕಾ ಅವರ ವಿರುದ್ಧ ರಾಖಿ 2006ರಲ್ಲಿ ದೂರು ನೀಡಿದ್ದರಿಂದ ಅವರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು. 2006ರ ಜೂನ್ 11ರಂದು ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಖಿ ಸಾವಂತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಿಕಾ ಸಿಂಗ್ ಬಲವಂತವಾಗಿ ಚುಂಬಿಸಿದ್ದರು ಎಂದು ರಾಖಿ ಕೆಂಡಾಮಂಡಲವಾಗಿ ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಿಕಾ ಸಿಂಗ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಇದೀಗ 17 ವರ್ಷಗಳ ಬಳಿಕ ಈ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ರಾಖಿ ಅವರು ದೂರು ದಾಖಲು ಮಾಡಿದ್ದ ಬಳಿಕ ಈ ಪ್ರಕರಣ ಬಾಂಬೆ ಹೈಕೋರ್ಟ್‌‌ವರೆಗೆ (Bombay High court) ಹೋಗಿತ್ತು. ಪ್ರಕರಣವನ್ನು ಈಗ ಹೈಕೋರ್ಟ್‌ ವಜಾ ಮಾಡಿದೆ. ಈ ಘಟನೆಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್ ಗಡ್ಕರಿ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಇದಕ್ಕೆ ಕಾರಣ, ಕಿಸ್ಸಿನಿಂದ ರೊಚ್ಚಿಗೆದ್ದಿದ ನಟಿ ರಾಖಿ ಈಗ ತಣ್ಣಗಾಗಿದ್ದು ಮಿಕಾ ಸಿಂಗ್‌ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆದಿದ್ದಾರೆ! ಈ ಕುರಿತು ಅವರು ಕೋರ್ಟ್‌‌ಗೆ ಅಫಿಡವಿಟ್ ಸಲ್ಲಿಸಿದ್ದರು. ರಾಖಿ ಮತ್ತು ಮಿಕಾ ಸಿಂಗ್ ಅವರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಿಕಾ ಸಿಂಗ್‌ ವಿರುದ್ಧ ಸಲ್ಲಿಸಲಾಗಿದ್ದ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಮದ್ವೆನೇ ಆಗಲ್ಲ ಎಂದಿದ್ದ ರಾಖಿಗೆ ಡಿವೋರ್ಸ್​ಗೂ ಮುನ್ನವೇ ಸಿಕ್ಕನಂತೆ ಮತ್ತೊಬ್ಬ- ಯಾರೀತ?

ಅಷ್ಟಕ್ಕೂ ಆಗಿದ್ದೇನೆಂದರೆ, 2006ರಲ್ಲಿ ರಾಖಿ ಸಾವಂತ್‌ ಅವರ ಹುಟ್ಟುಹಬ್ಬದ ಸಮಯದಲ್ಲಿ ಗಾಯಕ ಮಿಕಾ ಸಿಂಗ್ (Mika Singh) ಅವರನ್ನೂ ಆಹ್ವಾನಿಸಲಾಗಿತ್ತು. ಅದು ಜೂನ್‌ 11ರ ರಾತ್ರಿ. ಆ ದಿನ ನಟಿಯನ್ನು ನೋಡಿದ್ದ ಮಿಕಾ ಉದ್ವೇಗಗೊಂಡು ತನ್ನನ್ನು ತಬ್ಬಿ ದೀರ್ಘವಾಗಿ ಚುಂಬಿಸಿದ್ದರು ಎನ್ನುವುದು ನಟಿ ರಾಖಿಯ ವಾದ. ಇದೇ ಹಿನ್ನೆಲೆಯಲ್ಲಿ, ಮಿಕಾ ಸಿಂಗ್‌ ವಿರುದ್ಧ ರಾಖಿ, ಐಪಿಸಿಯ ಸೆಕ್ಷನ್ 354 (ದೌರ್ಜನ್ಯ) ಮತ್ತು 323 (ಹಲ್ಲೆ) ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಆದರೆ ಅಂತಿಮವಾಗಿ 17 ವರ್ಷಗಳ ನಂತರ ರಾಖಿ ಸಾವಂತ್ ಮಿಕಾ ಸಿಂಗ್ ಅವರನ್ನು ಕ್ಷಮಿಸಿದ್ದಾರೆ.

ಈ ಕೇಸ್‌ ನಡೆಯುತ್ತಿರುವಾಗಲೇ ಇ-ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ನಟಿ ರಾಖ ಸಾವಂತ್‌ ಅವರು, ಮಿಕಾ ಸಿಂಗ್‌ ನನ್ನ ಹಿತೈಷಿಯಾಗಿದ್ದಾರೆ. ಅವರು ನನ್ನ ಸ್ನೇಹಿತ ಕೂಡ. ಅವರು ನನ್ನನ್ನು ಕರೆದು ನನ್ನೊಂದಿಗೆ ತುಂಬಾ ಚೆನ್ನಾಗಿ ಮಾತನಾಡಿದರು. ನಾವು ಎಷ್ಟು ದಿನ ಹೀಗೆ ಸುಮ್ಮನೆ ಜಗಳವಾಡುವುದು. ನಮಗೆ ಇನ್ನೂ ಬೇಕಾದಷ್ಟು ದೊಡ್ಡ ಜೀವನವಿದೆ. ಹೀಗೆ ಕಿತ್ತಾಟ ಸರಿಯಲ್ಲ. ಅಷ್ಟೇ ಅಲ್ಲದೇ, ಜನರೊಂದಿಗೆ ಘರ್ಷಣೆಯ ಭಾರದಿಂದ ಸಾಯಲು ನಾನು ಬಯಸುವುದಿಲ್ಲ.ನಾನು ಮುಂದೆ ಹೋಗಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಅವರನ್ನು ಕ್ಷಮಿಸಲು ಮುಂದಾಗಿದ್ದೇನೆ ಎಂದಿದ್ದರು. 

Drama Queen ರಾಖಿ ಸಾವಂತ್​ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು

ಇದಾದ ಬಳಿಕ ರಾಖಿ ಸಾವಂತ್ ಅವರು ತಮ್ಮ ವಕೀಲ ಆಯುಷ್ ಪಾಸ್ಬೋಲಾ (Ayush Pasbola) ಅವರ ಮೂಲಕ ಅಫಿಡವಿಟ್‌ ಕಳುಹಿಸಿದ್ದರು. ’ಸಮಯ ಕಳೆದಂತೆ, ನಾನು ಮತ್ತು ಅರ್ಜಿದಾರರು ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ಪರಿಹರಿಸಿದ್ದೇವೆ ಮತ್ತು ಇಡೀ ವಿವಾದವು ನಮ್ಮ ಮೇಲಿನ ತಪ್ಪು ತಿಳುವಳಿಕೆ ಮತ್ತು ತಪ್ಪು ಕಲ್ಪನೆಯ ಪರಿಣಾಮವಾಗಿದೆ ಎಂದು ನಾವು ಅರಿತುಕೊಂಡಿದ್ದೇವೆ. ಆದ್ದರಿಂದ ದೂರನ್ನು ವಾಪಸ್‌ ಪಡೆಯಲು ಬಯಸಿದ್ದೇನೆ’ ಎಂದಿದ್ದರು. ಇದನ್ನು ಕೋರ್ಟ್‌ ಮಾನ್ಯ ಮಾಡಿದೆ.