ತುಂಬಾ ನೋವಾಗಿದೆ; 'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ ನಿರ್ದೇಶಕನ ವಿರುದ್ಧ ಇಸ್ರೇಲ್ ರಾಯಭಾರಿ ಕಿಡಿ
'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ, ಪ್ರಚಾರದ ಸಿನಿಮಾ ಎಂದ ಇಸ್ರೇಲ್ ನಿರ್ದೇಶಕ ನದಾವ್ ಲಾಪಿಡ್ ಹೇಳಿಕೆಗೆ ಇಸ್ರೇಲ್ ರಾಯಭಾರಿ ಕ್ಷಮೆಯಾಚಿಸಿದೆ.
'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ, ಪ್ರಚಾರದ ಸಿನಿಮಾ ಎಂದ IFFI 2022 (International Film Festival of India) ಜ್ಯೂರಿ ಮುಖ್ಯಸ್ಥ, ಇಸ್ರೇಲ್ ನಿರ್ದೇಶಕ ನದಾವ್ ಲಾಪಿಡ್ ಹೇಳಿಕೆಗೆ ಇಸ್ರೇಲ್ ರಾಯಭಾರಿ ಕ್ಷಮೆಯಾಚಿಸಿದೆ. ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ (ನವೆಂಬರ್ 28) ಅದ್ದೂರಿಯಾಗಿ ತೆರೆಬಿದ್ದಿದೆ. ಮುಕ್ತಾಯ ಸಮಾರಂಭದಲ್ಲಿ IFFI ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. 'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು' ಎಂದು ಹೇಳಿದ್ದರು. ನದಾಲ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ವಿವಾದದ ಬೆನ್ನಲ್ಲೇ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್, ನಿರ್ದೇಶಕ ನದಾವ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇಂಥ ಹೇಳಿಕೆಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಇಸ್ರೇಲ್ ರಾಯಭಾರಿ ಭಾರತೀಯರಿಗೆ ಕ್ಷಮೆಯಾಚಿಸಿದ್ದಾರೆ. 'ಐತಿಹಾಸಿಕ ಘಟನೆಗಳನ್ನು ಆಳವಾಗಿ ಅಧ್ಯಯನ ಮಾಡುವ ಮೊದಲು ಅವುಗಳ ಬಗ್ಗೆ ಮಾತನಾಡುವುದು ಸಂವೇದನಾಶೀಲವಲ್ಲ ಮತ್ತು ದುರಹಂಕಾರವಾಗಿದೆ. ಇದು ಭಾರತದಲ್ಲಿ ತೆರೆದ ಗಾಯವಾಗಿದೆ' ಎಂದು ಹೇಳಿದ್ದಾರೆ. 'ಇಂಡಿಯಾದ ಶಿಂಡ್ಲರ್ಸ್ ಲಿಸ್ಟ್ ಅನುಮಾನಿಸಿರುವ ನೀವು ನೀಡಿರುವ ಪ್ರತಿಕ್ರಿಯೆ ನೋಡಿ ತುಂಬಾ ನೋವಾಯಿತು' ಎಂದು ಹೇಳಿದ್ದಾರೆ.
'ನಾನು ಇಂಥ ಹೇಳಿಕೆಗಳನ್ನು ಖಂಡಿಸುತ್ತೇನೆ. ಇದರಲ್ಲಿ ಯಾವುದೇ ಸಮರ್ಥನೆ ಇಲ್ಲ. ಇಲ್ಲಿ ಕಾಶ್ಮೀರ ಸಮಸ್ಯೆಯ ಸೂಕ್ಷ್ಮತೆಯನ್ನು ತೋರಿಸುತ್ತದೆ' ಎಂದು ಹೇಳಿದರು. 'ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಯನ್ನು ದೇವರಂತೆ ಕಾಣುತ್ತಾರೆ. ಜ್ಯೂರಿ ಮುಖ್ಯಸ್ಥರಾಗಿ ಎಂದು ಭಾರತ ನೀಡಿದ ಆಹ್ವಾನ ಮತ್ತು ನಂಬಿಕೆ, ಗೌರವ, ಆತ್ಮೀಯ ಆತಿಥ್ಯವನ್ನು ದುರುಪಯೋಗ ಪಡಿಸಿಕೊಂಡರು ಎಂದು ನದಾವ್ ಅವರನ್ನು ತರಾಟೆ ತೆಗೆದುಕೊಂಡರು ಇಸ್ರೇಲ್ ರಾಯಭಾರಿ ನಾರ್ ಗಿಲೋನ್.
'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ IFFI ಜ್ಯೂರಿ ಮುಖ್ಯಸ್ಥ ನಾಡವ್; ತಿರುಗೇಟು ನೀಡಿದ ಅಗ್ನಿಹೋತ್ರಿ
ನದಾವ್ ಲಾಪಿಡ್ ಹೇಳಿದ್ದೇನು?
ಸೋಮವಾರ (ನವೆಂಬರ್ 28) ರಾತ್ರಿ ಗೋವಾದಲ್ಲಿ ನಡೆದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಈ ವರ್ಷದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್, 'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ' ಎಂದು ಅಸಮಾಧಾನ ಹೊರಹಾಕಿದರು. 'ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು.
ಜ್ಯೂರಿ ನಾಡಲ್ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಈ ವೇದಿಕೆಯಲ್ಲಿ ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಕ್ಕೆ ನಾನು ಆರಾಮಾಗಿ ಇದ್ದೀನಿ. ಈ ಉತ್ಸಾಹದಲ್ಲಿ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಖಂಡಿತವಾಗಿ ಸ್ವೀಕರಿಸಬಹುದು' ಎಂದು ಹೇಳಿದರು.
ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ಸತ್ಯವು ಅತ್ಯಂತ ಅಪಾಯಕಾರಿ ವಿಷಯ. ಇದು ಜನರನ್ನು ಸುಳ್ಳುಹೇಳುವಂತೆ ಮಾಡಬಹುದು' ಎಂದು ನದಾವ್ ಲಾಪಿಡ್ ಹೆಸರು ಹೇಳದೇ ತಿರುಗೇಟು ನೀಡಿದ್ದಾರೆ.