ಇಷ್ಟು ದಿನ ತೆಲುಗು ಚಿತ್ರರಂಗವನ್ನು ಕಾಡುತ್ತಿದ್ದ ಐಬೊಮ್ಮದ ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಹೊಸ ಸಿನಿಮಾಗಳನ್ನು ಪೈರಸಿ ಮಾಡಿ ಇಂಡಸ್ಟ್ರಿಗೆ ತಲೆನೋವಾಗಿದ್ದ ಐಬೊಮ್ಮ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ತೆಲುಗು ಚಿತ್ರರಂಗವನ್ನು ಬಹಳ ದಿನಗಳಿಂದ ಕಾಡುತ್ತಿರುವ ದೊಡ್ಡ ಸಮಸ್ಯೆ ಪೈರಸಿ. ಸಿನಿಮಾ ರಿಲೀಸ್ ಆದ ಮರುದಿನವೇ ಪೈರಸಿ ವರ್ಷನ್ ವೆಬ್‌ಸೈಟ್‌ಗಳಲ್ಲಿ ಬರುವುದರಿಂದ ಚಿತ್ರರಂಗಕ್ಕೆ ಭಾರೀ ನಷ್ಟವಾಗುತ್ತಿದೆ. ಅದರಲ್ಲೂ ಐಬೊಮ್ಮ ವೆಬ್‌ಸೈಟ್ ಟಾಲಿವುಡ್ ಸೇರಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿತ್ತು. ಸಿನಿಮಾಗಳನ್ನು ಪೈರಸಿ ಮಾಡಿ ಹೈಕ್ವಾಲಿಟಿಯಲ್ಲಿ ಉಚಿತವಾಗಿ ನೀಡುತ್ತಿತ್ತು. ಈ ಜಾಲದ ಮುಖ್ಯಸ್ಥ ಇಮ್ಮಡಿ ರವಿಯನ್ನು ಹೈದರಾಬಾದ್‌ನ ಕೂಕಟ್‌ಪಲ್ಲಿ ಸಿಸಿಎಸ್ ಪೊಲೀಸರು ಬಂಧಿಸಿದ್ದಾರೆ.

ಈತ ಕೆರಿಬಿಯನ್ ದ್ವೀಪಗಳಿಂದ ಈ ಪೈರಸಿ ಜಾಲವನ್ನು ನಡೆಸುತ್ತಿದ್ದ. ಈತನ ಬ್ಯಾಂಕ್ ಖಾತೆಯಲ್ಲಿದ್ದ ಮೂರು ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಟಾಲಿವುಡ್‌ನ ಪ್ರಮುಖರು ಈ ಹಿಂದೆ ಹಲವು ಬಾರಿ ಐಬೊಮ್ಮದ ಆಟ ನಿಲ್ಲಿಸಲು ಪ್ರಯತ್ನಿಸಿದ್ದರು. ಪೊಲೀಸರ ಜೊತೆ ಸೇರಿ ವಿಶೇಷ ಕಾರ್ಯಾಚರಣೆ ಕೂಡ ನಡೆಸಿದ್ದರು. ಆದರೆ ವಿದೇಶದಿಂದ ಈ ನೆಟ್‌ವರ್ಕ್ ನಡೆಸುತ್ತಿದ್ದರಿಂದ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ತೆಲಂಗಾಣ ಪೊಲೀಸರು ಮತ್ತು ಸೈಬರ್ ಕ್ರೈಂ ವಿಭಾಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಐಬೊಮ್ಮ ಮೇಲೆ ವಿಶೇಷ ಗಮನ ಹರಿಸಿದ್ದರು.

ಹಿಂದೆಲ್ಲಾ ಪೈರಸಿ ಸಿನಿಮಾಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಆದರೆ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಿದ್ದೇ ಐಬೊಮ್ಮ ಆ್ಯಪ್. ಇದು ಕಡಿಮೆ ಸಮಯದಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಯಿತು. ವಿದೇಶದಲ್ಲಿ ಕುಳಿತು, ಪೊಲೀಸರಿಗೆ ಸಿಗದಂತೆ ಸಿನಿಮಾಗಳನ್ನು ಪೈರಸಿ ಮಾಡಿ, ಉತ್ತಮ ಗುಣಮಟ್ಟದಲ್ಲಿ ಉಚಿತವಾಗಿ ನೀಡುತ್ತಿದ್ದರು. ಇವರನ್ನು ಹಿಡಿಯುವುದು ಪೊಲೀಸರಿಗೆ ಸವಾಲಾಗಿತ್ತು. ಕೆಲ ದಿನಗಳ ಹಿಂದೆ ಐಬೊಮ್ಮ ಟಾಲಿವುಡ್ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದೆ ಎಂದು ಕೆಲವು ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದವು.

ವಿದೇಶಗಳಲ್ಲಿ ಶೂಟಿಂಗ್ ಯಾಕೆ ಬೇಕು?

ನಿರ್ಮಾಪಕರು ದುಬಾರಿ ಸಂಭಾವನೆ ನೀಡಿ ಯಾಕೆ ಸಿನಿಮಾ ಮಾಡುತ್ತಾರೆ? ವಿದೇಶಗಳಲ್ಲಿ ಶೂಟಿಂಗ್ ಯಾಕೆ ಬೇಕು? ಎಂದು ಪ್ರಶ್ನಿಸಿರುವಂತೆ ಸ್ಕ್ರೀನ್‌ಶಾಟ್‌ಗಳಲ್ಲಿತ್ತು. ಐಬೊಮ್ಮ ಸಂಸ್ಥೆ ತೆಲಂಗಾಣ ಪೊಲೀಸರಿಗೆ ಎಚ್ಚರಿಕೆ ನೀಡಿದೆ ಎಂಬ ಪ್ರಚಾರ ಸುಳ್ಳು ಎಂದು ಏಷ್ಯಾನೆಟ್ ನ್ಯೂಸ್ ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ. ವೈರಲ್ ಆಗಿದ್ದ ಸ್ಕ್ರೀನ್‌ಶಾಟ್‌ಗಳು 2023ರದ್ದು. ಆಗಲೂ ಪೊಲೀಸರಿಗೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ. ಈಗ ಐಬೊಮ್ಮದ ಅಸಲಿ ಕಳ್ಳ ಸಿಕ್ಕಿಬಿದ್ದಿರುವುದರಿಂದ ಈ ಜಾಲದ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.