Duniya Vijay: ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ದುನಿಯಾ ವಿಜಯ್ ಗೆಟಪ್ ರಿವೀಲ್!
ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದು, ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಿದ್ದಾರೆ ಅಂತ ರಿವೀಲ್ ಆಗಿದೆ. ಈ ಲುಕ್ ನೋಡಿ ದುನಿಯಾ ವಿಜಯ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ (Duniya Vijay) ಅವರ ಈಗಾಗಲೇ ಟಾಲಿವುಡ್ (Tollywood) ಅಂಗಾಳಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಮಿಂಚಿದ್ದ ಅವರು ಇದೀಗ ತೆಲುಗಿನಲ್ಲಿ ತಮ್ಮ ನಟನೆಯನ್ನು ತೋರಿಸಲು ಸಜ್ಜಾಗಿದ್ದಾರೆ. ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಸಿನಿಮಾ ಸೆಟ್ಗೆ ದುನಿಯಾ ವಿಜಯ್ ಎಂಟ್ರಿಯಾಗಿದ್ದರು. ಇದೀಗ ಆ ಸಿನಿಮಾದಲ್ಲಿ ದುನಿಯಾ ವಿಜಯ್ ಯಾವ ಪಾತ್ರ ಮಾಡುತ್ತಿದ್ದಾರೆ ಅಂತ ರಿವೀಲ್ ಆಗಿದೆ. ಈ ಲುಕ್ ನೋಡಿ ದುನಿಯಾ ವಿಜಯ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಹೌದು! ನಂದಮೂರಿ ಬಾಲಕೃಷ್ಣ ನಟನೆಯ 107ನೇ (NBK 107) ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ತುಂಬ ರಗಡ್ ಆಗಿದೆ. ಗೋಪಿಚಂದ್ ಮಲಿನೇನಿ (Gopichand Malineni) ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ದುನಿಯ್ ವಿಜಯ್ ಅವರದ್ದು ಪವರ್ಫುಲ್ ಪಾತ್ರ ಎಂದು ಅವರು ಹೇಳಿದ್ದಾರೆ. ಗಡ್ಡ ಬಿಟ್ಟು, ಸಿಗರೇಟ್ ಸೇದುತ್ತ, ಖಡಕ್ ಲುಕ್‌ನಲ್ಲಿ ದುನಿಯಾ ವಿಜಯ್ ಪೋಸ್ ನೀಡಿದ್ದು, ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎಂಬ ಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಲಿದ್ದಾರೆ. ಸದ್ಯ ಈ ಪೋಸ್ಟರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
Duniya Vijay ನಟನೆ, ನಿರ್ದೇಶನದ ಹೊಸ ಚಿತ್ರ 'ಭೀಮ'
ದುನಿಯಾ ವಿಜಯ್ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ನಟನೆಯಲ್ಲಿ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಕಳೆದ ವರ್ಷ ತೆರೆಕಂಡ 'ಸಲಗ' (Salaga) ಚಿತ್ರಕ್ಕೆ ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಅದು ಅವರ ಮೊದಲ ನಿರ್ದೇಶನದ ಪ್ರಯತ್ನ. ಚೊಚ್ಚಲ ನಿರ್ದೇಶನದಲ್ಲೇ ಅವರಿಗೆ ಗೆಲುವು ಸಿಕ್ಕಿತು. 'ಸಲಗ' ಸಕ್ಸಸ್ ಬಳಿಕ ಅವರನ್ನುಹುಡುಕಿಕೊಂಡು ಬಂದಿದ್ದೇ ಟಾಲಿವುಡ್ ಅವಕಾಶ. ಖ್ಯಾತ ನಟ ನಂದಮೂರಿ ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳುವ ಚಾನ್ಸ್ ಪಡೆದಿರುವ ದುನಿಯಾ ವಿಜಯ್ ಅವರು ಈಗ ಫಸ್ಟ್‌ಲುಕ್ (Firstlook) ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪೂರ್ತಿ ಸಿನಿಮಾದಲ್ಲಿ ಅವರ ಪಾತ್ರ ಹೇಗೆ ಮೂಡಿಬರಬಹುದು ಎಂಬ ಕೌತುಕ ಅಭಿಮಾನಿಗಳಲ್ಲಿ ಇದೆ. ಪೋಸ್ಟರ್ ಕಂಡು ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
'ಸ್ಯಾಂಡಲ್‌ವುಡ್ ಸೆನ್ಸೇಷನ್ ದುನಿಯಾ ವಿಜಯ್ ಅವರನ್ನು ಒಂದು ಪವರ್ಫುಲ್ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ. ಈಗಾಗಲೇ ಹೇಳಿದಂತೆ ವಿಲನ್ ಎಂದರೆ ಏನು ಎಂಬುದನ್ನು ಅವರು ಮರು ವ್ಯಾಖ್ಯಾನ ಮಾಡಲಿದ್ದಾರೆ' ಎಂಬ ಕ್ಯಾಪ್ಷನ್ ಬರೆದು ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಫಸ್ಟ್‌ಲುಕ್ ಪೋಸ್ಟರನ್ನು ಹಂಚಿಕೊಂಡಿದ್ದು, ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎಂಬುದು ದುನಿಯಾ ವಿಜಯ್ ನಿಭಾಯಿಸಲಿರುವ ಪಾತ್ರದ ಹೆಸರು ಎಂದು ಕೂಡ ನಿರ್ದೇಶಕರು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಮೊದಲು ದುನಿಯಾ ವಿಜಯ್ ಅವರು NBK107 ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣದ ಸೆಟ್ಗೆ ತೆರಳಿದ್ದ ಅವರಿಗೆ ಚಿತ್ರತಂಡದಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆ ವಿಷಯವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು.
Duniya Vijay: ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾದ 'ಸಲಗ'
ಇನ್ನು ದುನಿಯಾ ವಿಜಯ್ ತಮ್ಮ ಪಾತ್ರದ ಫಸ್ಟ್‌ಲುಕ್ ಪೋಸ್ಟರನ್ನು ಟ್ವೀಟರ್‌ನಲ್ಲಿ (Twitter) ಶೇರ್ ಮಾಡಿಕೊಂಡಿದ್ದು, 'ಇಂಥ ಖಳನಾಯಕನ ಪಾತ್ರ ನೀಡಿರುವುದಕ್ಕೆ ನಿರ್ದೇಶಕ ಗೋಪಿಚಂದ್ ಅವರಿಗೆ ಧನ್ಯವಾದ. ಖಳನಾಯಕನ ಈ ನೋಟವೇ ಆ ಪಾತ್ರದ ಪೂರ್ಣ ವಿವರಣೆಯನ್ನು ನೀಡುತ್ತದೆ. ಪಾತ್ರ ಹಾಗೂ ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ನಾಯಕಿಯಾಗಿ ಶ್ರುತಿ ಹಾಸನ್ (Shruti Hassan) ಕಾಣಿಸಿಕೊಳ್ಳಲಿದ್ದಾರೆ. ರಾಯಲಸೀಮಾ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ.