ಬಾಲಿವುಡ್‌ ಮಾಸಿ- ಕ್ಲಾಸಿ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು (ಜುಲೈ 3) ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಗುರು ನಾನಕ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು.

"

2000 ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಸರೋಜ್‌ ಖಾನ್‌ ಅವರನ್ನು ಬಿ-ಟೌನ್‌ನಲ್ಲಿ ಎಲ್ಲರೂ 'ಮಾಸ್ಟರ್‌ಜಿ' ಎಂದೇ ಸಂಬೋಧಿಸುತ್ತಿದ್ದರು. ಸರೋಜ್‌ ಖಾನ್‌ಗೆ ಕೋವಿಡ್‌-19 ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು ಎಂದು ತಿಳಿದು ಬಂದಿದೆ. 

1948ರಲ್ಲಿ ಜನಿಸಿದ ಸರೋಜ್‌ ಖಾನ್‌ 3 ವರ್ಷದಲ್ಲೇ ನೃತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 80-90 ದಶಕದಲ್ಲಿ ಬಾಲಿವುಡ್‌ನ ಆಳಿದ ಸ್ಟಾರ್ ನಟ-ನಟಿಯರು ತಮ್ಮ ನೃತ್ಯಕ್ಕೆ ಸರೋಜ್‌ ಖಾನ್‌ ಅವರೇ ಸಂಯೋಜನೆ ಬೇಕೆಂದು ಡಿಮ್ಯಾಂಡ್‌ ಮಾಡುತ್ತಿದ್ದರಂತೆ. ಅದರಲ್ಲೂ ಹೆಚ್ಚಾಗಿ ಮಾಧುರಿ ದೀಕ್ಷಿತ್ ಹಾಗೂ ಶ್ರೀದೇವಿ ಜೊತೆ ಕೆಲಸ ಮಾಡಿದ ಅನುಭವ ಇವರಿಗಿತ್ತು.

ಸರೋಜ್ ಖಾನ್ ಸೂಪರ್ ಹಿಟ್‌ ಸಂಯೋಜನೆ ಸಿನಿಮಾಗಳೆಂದರೆ ನಾಗಿಣಿ, ತೇಜಬ್ ಮತ್ತು ಮಿಸ್ಟರ್ ಇಂಡಿಯಾ. ಸರೋಜ್‌ ಖಾನ್‌ ಕೊನೆಯ ಬಾರಿ ನೃತ್ಯ ಸಂಯೋಜನೆ ಮಾಡಿದ್ದು 2018ರಲ್ಲಿ ತೆರೆಕಂಡ 'ಕಲಾಂಕ್‌'ಗೆ.

ಖ್ಯಾತ ಬಾಲಿವುಡ್ ಕೊರಿಯಾಗ್ರಾಫರ್ ಸರೋಜ್ ಖಾನ್’ಗೆ ಕನ್ನಡದ ಮೇಲೆ ಅಭಿಮಾನ

ಬಾಲಿವುಡ್ ಸಹ ಈ ಮಹಾನ್ ನೃತ್ಯ ಕಲಾವಿದೆಯ ಸಾವಿಗೆ ಕಂಬನಿ ಮಿಡಿದಿದ್ದು, ಅಕ್ಷಯ್ ಕುಮಾರ್, 'ನೃತ್ಯ ಬಹಳ ಸುಲಭ, ಎಂದು ತೋರಿಸಿಕೊಟ್ಟವರು ಸರೋಜ್‌ಜೀ' ಎಂದು ಟ್ವೀಟ್ ಮಾಡಿದ್ದಾರೆ. 

 

ರಾಷ್ಟ್ರ ಪ್ರಶಸ್ತಿ ಸೇರಿ, ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಸರೋಜ್ ಮಡಿಲಿಗ ಸೇರಿದ್ದವು. ಧಕ್ ಧಕ್ ಕರನೇ ಲಗಾ, ಏಕ್ ದೋ ತೀನ್.., ಬರ್ಸೋ ರೇ, ಜರಾ ಸಾ ಝೂಮ್, ಕುಛ್ ನಾ ಕಹೋ, ಚಾಂದನಿ ಓ ಮೇರಿ ಚಾಂದನಿ....ಮುಂತಾದ ಹಾಡುಗಳಿಗೆ ನೃತ್ಯ ಸಂಯೋಜಿಸಿದ ಸರೋಜ್ ಖಾನ್ ಕಾರ್ಯಗಳು ಎಂದೆಂದಿಗೂ ಬಾಲಿವುಡ್ ಸಿನಿ ಪ್ರಿಯರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 

ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ ಸರೋಜ್ ಖಾನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.