ಕ್ಯಾ ನ್ಸರ್ ಪೀಡಿತಳಾಗಿ ನೋವುಂಡು, ಚಿಕಿತ್ಸೆ ಪಡೆದು ಮತ್ತೆ ಹಿಂದಿರುದ್ದೇನೆ. ನನ್ನ ಜೀವನಗಾಥೆಯನ್ನು ಸಾವಿರಾರು ಜನರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕೆಲವೊಮ್ಮೆ ನನಗೇ ಅನಿಸುತ್ತೆ, ‘ನಾನೇಕೆ ಇದನ್ನೆಲ್ಲಾ ಮಾಡಬೇಕು?’ ಎಂದು. ಕೆಲವೊಮ್ಮೆ ಭಯ ಉಂಟಾಗುತ್ತದೆ. ಆದರೂ ನಾನಂದುಕೊಂಡಿದ್ದನ್ನ ಮಾಡಿಯೇ ಮಾಡುತ್ತೇನೆ. ಏಕೆಂದರೆ ಭಯಕ್ಕೆ ನನ್ನ ಜೀವನದಲ್ಲಿ ಹೆಚ್ಚು ಜಾಗವಿಲ್ಲ. ನನಗೆ ನೆನಪಿದೆ ನನಗೇ ಭಯವೇ ಇರಲಿಲ್ಲ.

ಯಾವುದೇ ಪೂರ್ವಾಪರ ಗೊತ್ತಿಲ್ಲದೆ ಸಿನಿಮಾ ಇಂಡಸ್ಟ್ರಿಗೆ ಬಂದೆ. ಮಹಾರಾಷ್ಟ್ರದ ಮಧ್ಯಮವರ್ಗದ ಕುಟುಂಬ ನನ್ನದು. ಸಿನಿಮಾ ಹಿನ್ನೆಲೆಯಿದ್ದ ಯಾರೊಬ್ಬರೂ ನನಗೆ ಪರಿಚಯವಿರಲಿಲ್ಲ. ನೇರವಾಗಿ ಸಿನಿಮಾದಲ್ಲಿ ನಟಿಸುವ ಬಹುದೊಡ್ಡ ತೀರ್ಮಾನ ತೆಗೆದುಕೊಂಡೆ. ನನ್ನ ಕುಟುಂಬದವರು ಈ ವಿಷಯ ತಿಳಿದು ಆತಂಕಗೊಂಡಿದ್ದರು. ಆದರೆ ಯಾವುತ್ತು ಎಂದು ಸರಿಯಾಗಿ ನೆನಪಿಲ್ಲ,

ಬಹುಶಃ ನಾನು ತಾಯಿಯಾದಾಗ ನನಗೆ ನನ್ನೊಳಗೇ ಆತಂಕ, ಭಯ ಶುರುವಾಗಿತ್ತು. ಪತಿ ಗೋಲ್ಡೀ ಅವರೊಟ್ಟಿಗಿನ ಪಯಣವು ಭಯದಿಂದ ಹೇಗೆ ಆಚೆ ಬರಬೇಕೆಂದು ಕಲಿಸಿತು. ಜೀವನ ಹಾಗೇ ಮುಂದುವರೆದಿದೆ. ಅದರ ಅತ್ಯುತ್ತಮ ಭಾಗವೇ ನಾನು ಇಂದು ಜೀವಂತವಾಗಿರುವುದು ಮತ್ತು ನಿಮ್ಮೆದುರಿಗೆ ನಿಂತು ಮಾತನಾಡುತ್ತಿರುವುದು

ಅನುಕಂಪ ಬೇಡ, ಅದರಲ್ಲಿ ನಂಬಿಕೆ ಇಲ್ಲ

ನಾನಿರುವ ಸಿನಿಮಾ ಪ್ರಪಂಚದಲ್ಲಿ ಲುಕ್ ತುಂಬಾ ಮುಖ್ಯ. ಕ್ಯಾನ್ಸರ್ ಇದೆ ಎಂದು ಗೊತ್ತಾದ ಮೊದಲ ದಿನ ಇಡೀ ರಾತ್ರಿ ಅತ್ತಿದ್ದೆ. ಮೊದಮೊದಲು ನನ್ನ ಕೂದಲುದುರಿದ ವಿಷಯ ಮುಚ್ಚಿಡಲು ಪ್ರಯತ್ನಿಸುತ್ತಿದ್ದೆ. ಬಳಿಕ ನಾನು ನನ್ನ ಬಗ್ಗೆಯೇ ಕೀಳರಿಮೆ ಹೊಂದಿದ್ದೇನೆ ಎಂಬ ಅರಿವಾಯಿತು. ಅನಂತರ ಎಂದಿಗೂ ಮುಚ್ಚಿಡಲು ಪ್ರಯತ್ನಿಸಲಿಲ್ಲ. ನನ್ನ ಬ್ಯೂಟಿಯ ನೈಜತೆಯನ್ನು ಒಪ್ಪಿಕೊಂಡೆ. ನನ್ನ ಮಿತಿ ನನಗೆ ಅರಿವಾಯಿತು. ನನ್ನ ದೇಹ ವಿಭಿನ್ನವಾಗಿರಬಹುದು. ಆದರೆ ಅದರೊಂದಿಗೇ ನಾನು ನನ್ನ ನೆಮ್ಮದಿ ಕಂಡುಕೊಳ್ಳಬೇಕೆನಿಸಿತು.

ನನ್ನ ವೃತ್ತಿ ಜೀವನದಲ್ಲಿ ಹಲವಾರು ಹೇರ್ ಪ್ರಾಡಕ್ಟ್‌ಗಳ ಬಳಕೆಗೆ ಸಲಹೆ ನೀಡಿದ್ದೇನೆ. ನಮ್ಮ ಸಮಾಜದಲ್ಲಿ ನೋಟಕ್ಕೆ ಬಹಳ ಪ್ರಾಮುಖ್ಯತೆ ಇದೆ. ಆದರೂ ನನಗೆ ಕ್ಯಾನ್ಸರ್ ಇದೆ ಎಂದು ನನ್ನ ಟೀಮ್ ಬಳಿ ಹೇಳಿಕೊಂಡೆ. ಆರೋಗ್ಯಕರ ಉತ್ಪನ್ನಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಿಗೆ ನಾನಿನ್ನು ಬ್ರ್ಯಾಂಡ್ ಆಗುವುದಿಲ್ಲ ಎಂದೆ.

ಅವರೆಲ್ಲಾ ನನ್ನೊಂದಿಗೆ ಇರುವುದಾಗಿ ಭರವಸೆ ನೀಡಿದರು. ಅವರ ಬಳಿ ನಾನು ಕೇಳಿಕೊಂಡಿದ್ದಿಷ್ಟೆ, ‘ನನಗೆ ಕರುಣೆ, ಅನುಕಂಪ ಬೇಡ. ಅದನ್ನು ಅನುಭವಿಸುವೆ, ಆದರೆ ಅದರಲ್ಲಿ ನನಗೆ ನಂಬಿಕೆ ಇಲ್ಲ’ ಎಂದು

ಮುಚ್ಚಿಡಲು ಪ್ರಯತ್ನಿಸೋದ್ಯಾಕೆ?

ಹೋದಲ್ಲೆಲ್ಲಾ ಎಲ್ಲರದ್ದೂ ಒಂದೇ ಪ್ರಶ್ನೆ,‘ನಿಮ್ಮ ಜೀವನ ಶೈಲಿ ಹೀಗಿರಲೇ ಇಲ್ಲ. ನಿಮಗೇನಾಯಿತು?’. ಆಗ ನಾನೇನಾದರೂ ತಪ್ಪು ಮಾಡಿದ್ದೇನಾ ಎಂಬ ಭಾವನೆ ಬರುತ್ತಿತ್ತು. ಹೀಗಾಗಿ ಒಮ್ಮೆ ನ್ಯೂಯಾರ್ಕ್ ನ ಮನಃಶಾಸ್ತ್ರಜ್ಞರ ಬಳಿ ಹೋದೆ. ನನಗೇನಾಗುತ್ತಿದೆ, ನಾನು ಭ್ರಮೆಯಲ್ಲಿದ್ದೇನಾ ಒಂದೂ ತಿಳಿಯುತ್ತಿರಲಿಲ್ಲ.

ನಾನು ನೆಗೆಟಿವ್ ಪರ್ಸನ್ ಅಲ್ಲ, ಧನಾತ್ಮಕವಾಗಿಯೇ ಯೋಚಿಸುತ್ತೇನೆ. ಆದರೆ ವಾಸ್ತವವಾಗಿ ನನ್ನಲ್ಲೇ ಋಣಾತ್ಮಕ ಯೋಚನೆಗಳಿದ್ದವು. ಆದರೆ ಅದನ್ನು ನನ್ನ ಆತ್ಮಸಾಕ್ಷಿ ಒಪ್ಪುತ್ತಿರಲಿಲ್ಲ. ಹಾಗಾಗಿ ನನಗೇನಾಗುತ್ತಿದೆ ಎಂದು ನಾನು ತಿಳಿದುಕೊಳ್ಳಬೇಕಿತ್ತು.

ಡಾಕ್ಟರ್ ಹೀಗೆ ಹೇಳಿದರು, ‘ಸೊನಾಲಿ ಕ್ಯಾನ್ಸರ್ ಆನುವಂಶಿಕವಾಗಿ ಅಥವಾ ವೈರಸ್ ಮೂಲಕ ಬರಬಹುದು. ನಮ್ಮ ಯೋಚನೆಗಳೇ ಕ್ಯಾನ್ಸರ್ ಹರಡಬಹುದು ಅಥವಾ ಗುಣಪಡಿಸಬಹುದಾಗಿದ್ದರೆ ನಾನು ಈ ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿಯಾಗಿರುತ್ತಿದ್ದೆ. ಏಕೆಂದರೆ ಯೋಚನೆಗಳ ಮೂಲಕವೇ ಅದನ್ನು ಡೀಲ್ ಮಾಡುತ್ತಿದ್ದೆ’ ಎಂದರು. ತೂಕ ಕಮ್ಮಿಯಾಗುತ್ತಿತ್ತು.

ನಾನೇನು ತಪ್ಪು ಮಾಡಿದೆ ಎಂದು ಪದೇ ಪದೇ ಯೋಚಿಸಿದೆ. ಆದರೆ ಕ್ಯಾನ್ಸರ್ ಬರಲು ನಾವೇನು ತಪ್ಪು ಮಾಡಬೇಕಿಲ್ಲ ಎಂದು ಅರಿವಾಯಿತು. ಆದರೆ ಜನರೇಕೆ ಇದನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ, ಮಾತನಾಡಲು ಹಿಂಜರಿಯುತ್ತಾರೆ, ನನಗೆ ಗೊತ್ತಿಲ್ಲ. ನಾನು ಹಾಗೆ ಮಾಡಲಿಲ್ಲ, ಕ್ಯಾನ್ಸರ್ ಇದೆ ಎಂದು ಗೊತ್ತಾದಾಗಲೇ ಎಲ್ಲರಿಗೂ ಹೇಳಿದೆ. ಏಕೆಂದರೆ ಅಸ್ಪಷ್ಟತೆ ಅಥವಾ ವದಂತಿಗಳು ನನಗೆ ಇಷ್ಟವಿಲ್ಲ. ಅನಂತರದ ಪ್ರತಿಕ್ರಿಯೆಗೆ ಪದಗಳೇ ಇಲ್ಲ.

ಒಬ್ಬರ ಹೋರಾಟ ಅಲ್ಲ

ಕ್ಯಾನ್ಸರ್ ಕೇವಲ ಒಬ್ಬರ ಹೋರಾಟ ಅಲ್ಲ. ಕುಟುಂಬ, ಸುತ್ತಲಿನ ಸಮಾಜದ ಪ್ರತಿಕ್ರಿಯೆಗಳೂ ಅದನ್ನು ಗುಣಪಡಿಸಬಲ್ಲವು! ಹೌದು, ನನಗೆ ಕ್ಯಾನ್ಸರ್ ಇದೆ ಎಂದು ತಿಳಿಯುತ್ತಿದ್ದಂತೇ ಎಲ್ಲರೂ ನನ್ನ ಪರ ವಾಗಿ, ನನ್ನೊಂದಿಗೆ ನಿಂತರು. ಅಭೂತಪೂರ್ವ ಸಪೋರ್ಟ್ ದೊರೆ ಯಿತು. ಮಗ ರಣವೀರ್ ಬಳಿ ಪ್ರಾಮಾಣಿಕವಾಗಿ ಈ ವಿಷಯ ಹೇಳಿದೆ. ವಿಷಯ ತಿಳಿದು ಸುಮ್ಮನಾದ ಮಗ, ‘ನಾನು ಮತ್ತು ಮಮ್ಮಾ ಪುಸ್ತಕದಲ್ಲಿ ಓದಿದ್ದೇವೆ. ಇದು ಕಷ್ಟಕಾಲ, ನಾವೆಲ್ಲರೂ ಒಟ್ಟಾಗಿರಬೇಕು’ ಎಂದ.

ಯೆಸ್ ನಾನು ಬದುಕಿಬಂದೆ ಎಲ್ಲಕ್ಕಿಂತಾ ಮುಖ್ಯವಾಗಿ, ನನ್ನ ಜೀವನದ ಹಾದಿ ಕಂಡುಕೊಳ್ಳುವವಳು ನಾನೇ. ಎಲ್ಲವನ್ನೂ ಸನ್‌ಶೈನ್ ಎಂದರೆ ನಾನು ಅಪ್ರಮಾಣಿಕಳಾಗುತ್ತೇನೆ. 6 ತಿಂಗಳು ಸಾಕಷ್ಟು ನೋವು ಅನುಭವಿಸಿದ್ದೇನೆ. ಸರ್ಜರಿಯ ನಂತರದ ದಿನಗಳು ನನ್ನ ಜೀವನದ ಅತಿ ಕಷ್ಟದ ದಿನಗಳಾಗಿದ್ದವು. 20 ಇಂಚುಗಳ ಗಾಯವಾಗಿತ್ತು. ಕಲೆಗಳು ಮೂಡಿದ್ದವು.

ನಾನು ಸರ್ಜರಿಗೆಂದು ನಡೆದು ಹೋಗುತ್ತಿರುವಾಗ ನನ್ನ ಸೋದರಿ ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಆಗ ನಾನು, ‘ನಾಟಕೀಯವಾಗಿ ವರ್ತಿಸಬೇಡ. ನಾನು ಮತ್ತೆ ವಾಪಸ್ ಬರುವೆ’ ಎಂದಿದ್ದೆ. ಶಸ್ತ್ರಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ವಾಪಸ್ ಬಂದಾಗ ತುಂಬಾ ಸಂತೋಷವಾಗಿತ್ತು. ಕಣ್ಣಲ್ಲಿ ನೀರು ತುಂಬಿ ಬಂದಿತ್ತು, ‘ ಯೆಸ್ ನಾನು ಬದುಕಿಬಂದೆ’ ಎಂದು ಖುಷಿಪಟ್ಟೆ.

ಕ್ಯಾನ್ಸರ್ ಇದ್ದ ಘಳಿಗೆಯಲ್ಲಿ ‘ನಾನು ತುಂಬಾ ಸಂತೋಷವಾಗಿದ್ದೇನೆ’ ಎಂದಾಗ ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಅದು ಸತ್ಯ. ನಾನಾಗ ತುಂಬಾ ಸಂತೋಷವಾಗಿದ್ದೆ. ನಿಜ, ನನಗಾಗ ನೋವಿತ್ತು, ಶಕ್ತಿಯೂ ಕುಗ್ಗಿತ್ತು. ಆದರೆ ಆಗ ನನಗೇನು ಇಷ್ಟವೋ ಅದನ್ನೇ ಮಾಡುತ್ತಿದ್ದೆ, ನನ್ನ ಪ್ರೀತಿಪಾತ್ರರೊಂದಿಗೆ ಸಮಯ ಕಳೆದೆ ಮತ್ತು ಖುಷಿ ಯಾಗಿದ್ದೆ. ಇತ್ತೀಚೆಗೆ ರೆಡಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ ನನ್ನ ಕೂದಲು ಬಾಚಲು ಸಮಯ ಹಿಡಿಯುತ್ತಿಲ್ಲ. ಬಾಲ್ಡ್ ಈಸ್ ಬ್ಯೂಟಿಫುಲ್.