ಹಣ ಪಾವತಿ ಮಾಡದ ಬಳಕೆದಾರರ ಬ್ಲೂಟಿಕ್ ಅನ್ನು ಟ್ವಿಟರ್ ತೆಗೆದುಹಾಕಿದೆ. ನಟ ಅಮಿತಾಭ್ ಬಚ್ಚನ್ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ (Social Media) ಅನೇಕ ಸೆಲೆಬ್ರಿಟಿಗಳ ಟ್ವಿಟರ್ ಬ್ಲೂ ಕಿಟ್ ಏಕಾಏಕಿ ಕಣ್ಮರೆಯಾಗಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಈ ಬ್ಲೂ ಟಿಕ್ ವಿಶೇಷ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕರು, ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಇತರೆ ವಲಯಗಳಲ್ಲಿ ಹೆಸರು ಮಾಡಿದವರನ್ನು ಟ್ವಿಟ್ಟರ್ ಪರಿಶೀಲನೆ ಮಾಡುತ್ತದೆ. ಟ್ವಿಟ್ಟರ್‌ನಲ್ಲಿ ಈ ನೀಲಿ ಟಿಕ್ ಎಂದರೆ ನಿಮ್ಮ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಲಾಗಿದೆ ಮತ್ತು ನಕಲಿ ಅಲ್ಲ. ಅಂತಹವರ ನಿಜವಾದ ಖಾತೆಯ ಬಗ್ಗೆ ಜನರಿಗೆ ತಿಳಿಯುವಂತೆ ಮತ್ತು ಯಾವುದೇ ನಕಲಿ ಖಾತೆಯೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಲು ಈ ಬ್ಲೂ ಟಿಕ್ ನೀಡಲಾಗಿದೆ. ಅದಕ್ಕೆ ಇಂತಿಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಬ್ಲೂಟಿಕ್ ಪಡೆಯಲು ಶುಲ್ಕ ಪಾವತಿಸದ ಕಾರಣ ಬಹುತೇಕ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ. ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಕನ್ನಡದ ಸ್ಟಾರ್‌ಗಳಾದ ಸುದೀಪ್, ಯಶ್ ಸೇರಿದಂತೆ ಅನೇಕ ಕಲಾವಿದರ ಟ್ವಿಟ್ಟರ್ (Twitter) ಖಾತೆಯಿಂದ ಬ್ಲೂ ಟಿಕ್ ಕಣ್ಮರೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ ಖರೀದಿಸಿದ ಬಳಿಕ ಬ್ಲೂಟಿಕ್ ಹೊಂದಲು ಶುಲ್ಕ ವಿಧಿಸಲಾಗಿತ್ತು. ಇದೀಗ ಶುಲ್ಕ ಪಾವತಿಸದೆ ಇದ್ದವರ ಬ್ಲೂ ಟಿಕ್ ಮಾಯವಾಗಿದೆ ಎನ್ನಲಾಗುತ್ತಿದ್ದರೂ, ಹಲವು ನಟರು ತಾವು ಹಣವನ್ನು ಸಂದಾಯ ಮಾಡಿದ್ದರೂ ಬ್ಲೂಟಿಕ್ ಕಾಣೆ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ತಮ್ಮ ಪ್ರೊಫೈಲ್‌ನಿಂದ ಬ್ಲೂ ಟಿಕ್ ಅನ್ನು ತೆಗೆದುಹಾಕಿರುವ ಟ್ವಿಟರ್‌ನ ಕ್ರಮದಿಂದ ಅಮಿತಾಭ್ ಬಚ್ಚನ್ ನಿರಾಶೆಗೊಂಡಿದ್ದಾರೆ ಮತ್ತು ಅಸಮಾಧಾನಗೊಂಡಿದ್ದಾರೆ. ಅವರು ತಮ್ಮ ನೀಲಿ ಟಿಕ್ ಅನ್ನು ಹಿಂತಿರುಗಿಸುವಂತೆ ಟ್ವಿಟರ್‌ಗೆ ವಿನಂತಿಸಿದ್ದಾರೆ. ಬಿಗ್ ಬಿ ಕೇವಲ ಟ್ವೀಟ್ ಮೂಲಕವೇ ಟ್ವಿಟ್ಟರ್ ಮುಂದೆ ತಮ್ಮ ವಿಚಾರವನ್ನು ಇಟ್ಟಿದ್ದಾರೆ. ಅವರು ತಮ್ಮ ನೀಲಿ ಟಿಕ್ ಅನ್ನು ಹಿಂತಿರುಗಿಸುವಂತೆ ಕೈ ಮುಗಿದು ಟ್ವಿಟರ್‌ಗೆ ಮನವಿ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಈ ಟ್ವೀಟ್ ಬಹಳ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಅವರು ಮನವಿ ಮಾಡಿಕೊಂಡಿರುವ ರೀತಿ.
ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯ; ಸಿನಿ ಸೆಲೆಬ್ರಿಟಗಳ ರಿಯಾಕ್ಷನ್ ಹೀಗಿದೆ
80 ವರ್ಷದ ಅಮಿತಾಭ್ ಬಚ್ಚನ್ ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ, "ಓ ಟ್ವಿಟರ್ ಸಹೋದರ! ನೀವು ಕೇಳುತ್ತಿದ್ದೀರಾ? ಈಗ ದುಡ್ಡನ್ನೂ ನೀಡಿಯಾಗಿದೆ. ನಮ್ಮ ಎದುರು ಒಂದು ನೀಲಿ ಕಮಲ ಇರುತ್ತಿತ್ತು ಅಲ್ವಾ? ಅದನ್ನು ವಾಪಸ್ ಕೊಡಿ ಅಣ್ಣಾ, ಹೀಗೆ ಮಾಡಿದರೆ ನಾನು ಅಮಿತಾಭ್ ಬಚ್ಚನ್ ಎಂದು ಜನರಿಗೆ ತಿಳಿಯುತ್ತದೆ ಎಂದು ಹಾಸ್ಯಭರಿತವಾಗಿ ಬರೆದುಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಟ್ವೀಟ್‌ಗೆ ಜನರು ಕಾಮೆಂಟ್ ಮಾಡುವ ಮೂಲಕ ಸಾಕಷ್ಟು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಹಾಸ್ಯದ ಕಮೆಂಟ್ ಹಾಕುತ್ತಿದ್ದಾರೆ. ಸರತಿಯಲ್ಲಿ ನಿಲ್ಲಿ ಸರ್ಜೀ. ನೀವು ಎಲ್ಲೇ ನಿಂತರೂ ನಿಮ್ಮಿಂದಲೇ ಲೈನ್ ಆರಂಭವಾಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಬಳಕೆದಾರನೊಬ್ಬ ಬರೆದಿದ್ದರೆ, ಟ್ವಿಟರ್‌ಗೆ ಎಷ್ಟು ಧೈರ್ಯ, ಅಮಿತಾಭ್ ಬಚ್ಚನ್ ಅವರ ಟ್ವಿಟರ್ ಖಾತೆಗೆ ಕೈಹಾಕಲು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಮೊನ್ನೆಯಷ್ಟೇ ಅಮಿತಾಭ್ ಬಚ್ಚನ್ ಅವರು ಟ್ವೀಟ್ ಮಾಡಿ ಟ್ವಿಟ್ಟರ್ (Twitter) ನಲ್ಲಿ ಎಡಿಟ್ ಬಟನ್ ಗೆ ಬೇಡಿಕೆ ಇಟ್ಟಿದ್ದರು. "ಹೇ ಟ್ವಿಟರ್ ಮಾಲೀಕ ಸಹೋದರ, ದಯವಿಟ್ಟು ಟ್ವಿಟರ್‌ನಲ್ಲಿ ಎಡಿಟ್ ಬಟನ್ ಹಾಕಿ. ಪದೇ ಪದೇ ತಪ್ಪುಗಳು ಸಂಭವಿಸಿದಾಗ ಮತ್ತು ಹಿತೈಷಿಗಳು ನಮಗೆ ಹೇಳಿದಾಗ, ನಾವು ಸಂಪೂರ್ಣ ಟ್ವೀಟ್ ಅನ್ನು ಅಳಿಸಿ ಮತ್ತು ತಪ್ಪಾದ ಟ್ವೀಟ್ ಅನ್ನು ಸರಿಪಡಿಸಿ ಮರುಮುದ್ರಣ ಮಾಡಬೇಕು. ಇದು ಕಷ್ಟವಾಗುತ್ತದೆ ಎಂದಿದ್ದರು. ಆದರೆ ಈಗ ಬ್ಲೂ ಟಿಕ್ ತೆಗೆದಿರುವ ಕಾರಣ ಸಮಸ್ಯೆಯಾಗುತ್ತಿದೆ. ಅಂದಹಾಗೆ ಅಮಿತಾಭ್ ಬಚ್ಚನ್ (Amitabh Bhacchan) 2010 ರಿಂದ ಟ್ವಿಟರ್‌ನಲ್ಲಿದ್ದಾರೆ ಮತ್ತು ಸುಮಾರು 48.5 ಮಿಲಿಯನ್ ಜನರು ಅವರನ್ನು ಅನುಸರಿಸುತ್ತಿದ್ದಾರೆ.
ಧೂಮಪಾನ, ಮದ್ಯಪಾನ ಅಮಿತಾಭ್ ಬಿಟ್ಟಿದ್ದು ಹೇಗೆ? ನಟ ನೀಡಿದ್ರು ಅದ್ಭುತ ಟಿಪ್ಸ್
