ಮುಂಬೈ(ಡಿ.30): ಬಾಲಿವುಡ್‌ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾದ ಅಕ್ಷಯ್‌ ಕುಮಾರ್‌ ಒಂದು ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆಯನ್ನು 100ರಿಂದ 135 ಕೋಟಿ ರು.ಗೆ ಏರಿಸಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎನಿಸಿಕೊಂಡಿದ್ದಾರೆ. ದುಬಾರಿ ಸಂಭಾವನೆ ಪಡೆಯುವ ಬಾಲಿವುಡ್‌ ನಟರ ಪೈಕಿ ಸಲ್ಮಾನ್‌ ಖಾನ್‌ ಒಂದು ಚಿತ್ರಕ್ಕೆ 50ರಿಂದ 60 ಕೋಟಿ ರು. ಪಡೆಯುತ್ತಿದ್ದರೆ, ಅಮೀರ್‌ ಖಾನ್‌ 50 ಕೋಟಿ ರು. ಸ್ವೀಕರಿಸುತ್ತಿದ್ದಾರೆ.

ಲಾಕ್‌ಡೌನ್‌ ವೇಳೆ ಒಪ್ಪಿಕೊಂಡ ಚಿತ್ರಗಳಿಗೆ ಅಕ್ಷಯ್‌ ಕುಮಾರ್‌ ತಮ್ಮ ಸಂಭಾವನೆಯನ್ನು 99 ಕೋಟಿ ರು.ನಿಂದ 108 ಕೋಟಿ ರು.ಗೆ ಏರಿಸಿಕೊಂಡಿದ್ದರು. ಇತ್ತೀಚೆಗೆ ಸಹಿ ಹಾಕಿದ ಚಿತ್ರಕ್ಕೆ ಅಕ್ಷಯ್‌ ಕುಮಾರ್‌ 117 ಕೋಟಿ ರು. ಸಂಭಾವನೆ ಪಡೆದುಕೊಂಡಿದ್ದಾರೆ. 2022ರಲ್ಲಿ ತೆರೆ ಕಾಣಲಿರುವ ಪ್ರತಿ ಚಿತ್ರಕ್ಕೆ ಅಕ್ಷಯ್‌ ಕುಮಾರ್‌ 135 ಕೋಟಿ ರು. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ಷಯ್‌ ಕುಮಾರ್‌ ವರ್ಷಕ್ಕೆ ಮೂರಿಂದ ನಾಲ್ಕು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಅವರ ಎಲ್ಲಾ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಬಹುತೇಕ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರು.ಗಿಂತ ಹೆಚ್ಚು ಹಣ ಗಳಿಸಿವೆ. ಸೂರ್ಯವಂಶಿ, ಬೆಲ್‌ಬಾಟಮ್‌, ಬಚ್ಚನ್‌ ಪಾಂಡೆ ಮುಂತಾದ ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಅಕ್ಷಯ್‌ ಕುಮಾರ್‌ ಚಿತ್ರಗಳು ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್‌ ಹಾಗೂ ಡಿಜಿಟಲ್‌ ಹಕ್ಕುಗಳ ಮಾರಾಟದಿಂದ 80ರಿಂದ 90 ಕೋಟಿ ರು.ಗಳಿಸುತ್ತಿವೆ. ಚಿತ್ರ ನಿರ್ಮಾಣಕ್ಕೆ 185ರಿಂದ 195 ಕೋಟಿ ರು. ವೆಚ್ಚ ಮಾಡಿದರೂ ನಿರ್ಮಾಪಕರ ಪಾಲಿಗೆ ಅಕ್ಷಯ್‌ ಕುಮಾರ್‌ ಗೆಲ್ಲುವ ಕುದುರೆ ಆಗಿದ್ದಾರೆ.