ನಟಿ ಐಶ್ವರ್ಯಾ ರೈ ಬಚ್ಚನ್ ಅವರು 4 ಕೋಟಿ ರೂಪಾಯಿ ತೆರಿಗೆ ವಿವಾದದಲ್ಲಿ ಜಯ ಸಾಧಿಸಿದ್ದಾರೆ. 2022-23ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಆದಾಯ ತೆರಿಗೆ ಇಲಾಖೆ ವಿಧಿಸಿದ್ದ ಹೆಚ್ಚುವರಿ ತೆರಿಗೆಯನ್ನು ರದ್ದುಗೊಳಿಸಿ, ಅವರ ಪರವಾಗಿ ತೀರ್ಪು ನೀಡಿದೆ.
ದೆಹಲಿ: ನಟಿ ಐಶ್ವರ್ಯಾ ರೈ ಬಚ್ಚನ್ ತೆರಿಗೆ ವಿವಾದದಲ್ಲಿ ಜಯ ಸಾಧಿಸಿದ್ದಾರೆ. ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) 4 ಕೋಟಿ ರೂಪಾಯಿ ತೆರಿಗೆ ಕಡಿತವನ್ನು ತಿರಸ್ಕರಿಸಿ ಅವರ ಪರವಾಗಿ ತೀರ್ಪು ನೀಡಿದೆ. ಈ ಪ್ರಕರಣವು 2022-23ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ಮುಕ್ತ ಆದಾಯಕ್ಕೆ ಸಂಬಂಧಿಸಿದ ವೆಚ್ಚಗಳ ಲೆಕ್ಕಾಚಾರಕ್ಕೆ ಸಂಬಂಧಿಸಿದೆ. ಈ ಸಾಲಿನ ತೆರಿಗೆ ಲೆಕ್ಕಾಚಾರದಲ್ಲಿ ಆದಾಯ ತೆರಿಗೆ ಇಲಾಖೆ ವಿಧಿಸಿದ್ದ 4 ಕೋಟಿ ರೂಪಾಯಿಗಳ ಹೆಚ್ಚುವರಿ ತೆರಿಗೆಯನ್ನು ನ್ಯಾಯಮಂಡಳಿ ರದ್ದುಗೊಳಿಸಿದೆ. ತೆರಿಗೆ ವಿನಾಯಿತಿ ಆದಾಯಕ್ಕೆ ಸಂಬಂಧಿಸಿದ ಖರ್ಚುಗಳ ವಿವಾದ ಇದಾಗಿತ್ತು.
ಈ ಸಂಪೂರ್ಣ ವಿವಾದವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 14A ಗೆ ಸಂಬಂಧಿಸಿದೆ. ಈ ವಿಭಾಗದ ಅಡಿಯಲ್ಲಿ, ತೆರಿಗೆಗೆ ಒಳಪಡದ ಆದಾಯದ ಮೇಲೆ ವೆಚ್ಚಗಳನ್ನು ಕಡಿತಗೊಳಿಸಲಾಗುವುದಿಲ್ಲ. ಐಶ್ವರ್ಯಾ ರೈ ಬಚ್ಚನ್ 2022-23ನೇ ಸಾಲಿಗೆ ಒಟ್ಟು 39.33 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದಾರೆ. ಇದರಲ್ಲಿ 2.14 ಕೋಟಿ ರೂಪಾಯಿ ತೆರಿಗೆ ರಹಿತ ಆದಾಯವಾಗಿತ್ತು. ತೆರಿಗೆ ರಹಿತ ಆದಾಯ ಗಳಿಸಲು ತಾನು ಯಾವುದೇ ನೇರ ವೆಚ್ಚ ಮಾಡಿಲ್ಲ ಎಂದು ತಿಳಿಸಿ 49.08 ಲಕ್ಷ ಕಡಿತವನ್ನು ಅವರು ಕೋರಿದ್ದರು. ಇದೀಗ ಅವರಿಗೆ ಜಯ ಸಿಕ್ಕಿದೆ
ವಿವಾದ ಆರಂಭವಾಗಿದ್ದು ಹೀಗೆ..
ಮೌಲ್ಯಮಾಪನ ಅಧಿಕಾರಿ ಅವರು ನಿಯಮ 8D ಯನ್ನು ಬಳಸಿಕೊಂಡು 4.60 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನಟಿಯ ಒಟ್ಟು ಆದಾಯ 43.44 ಕೋಟಿ ರೂಗೆ ಏರಿತು. ಆದಾಯ ತೆರಿಗೆ ಕಾನೂನಿನ ಸೆಕ್ಷನ್ 14A ಮತ್ತು ನಿಯಮ 8D ಯನ್ನು ಸರಿಯಾಗಿ ಅನ್ವಯಿಸಲಾಗಿದೆ ಎನ್ನುವುದು ಅವರ ವಾದ. ಆದರೆ ಐಶ್ವರ್ಯ ಪರ ವಕೀಲರು ನಟಿಯ ವಿವರವಾದ ವಾದಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ವಾದಿಸಿದ್ದರು. ಒಟ್ಟು ಖರ್ಚು 2.48 ಕೋಟಿ ರೂ. ಮಾತ್ರ ಎಂದು ಅವರು ಗಮನಸೆಳೆದರು, ಆದರೆ 4.60 ಕೋಟಿ ರೂ ಕಟ್ ಆಗಿರುವುದಾಗಿ ವಿವರಿಸಿದರು.
ಮೇಲ್ಮನವಿ ನ್ಯಾಯಮಂಡಳಿ ಹೇಳಿದ್ದೇನು?
ಐಶ್ವರ್ಯ ರೈ ಬಚ್ಚನ್ ಅವರ ಸ್ವಂತ ಕಡಿತಕ್ಕಿಂತ ಈಗ ಕಡಿತಗೊಂಡಿರುವುದುದ ಸರಿಯಲ್ಲ ಎಂದು ನ್ಯಾಯಮಂಡಳಿ ಹೇಳಿದೆ. ಈ ವಿಷಯಕ್ಕೆ ಅನುಗುಣವಾಗಿ, ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ತೆರಿಗೆ ಮುಕ್ತ ಆದಾಯವನ್ನು ಗಳಿಸುವ ಹೂಡಿಕೆಗಳ ಮೇಲೆ ಮಾತ್ರ ಐಶ್ವರ್ಯಾ ರೈ ಬಚ್ಚನ್ ಗಮನಹರಿಸಿದ್ದಾರೆ ಎಂದು ನ್ಯಾಯಮಂಡಳಿ ಗಮನಿಸಿದೆ. ಇದು ವೀರತ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ವಿಶೇಷ ಪೀಠದ ತೀರ್ಪಿಗೆ ಅನುಗುಣವಾಗಿದೆ. ಎಲ್ಲಾ ಲೆಕ್ಕಾಚಾರ ಹಾಕಿ ಈಗ ನಟಿಗೆ ಗೆಲುವು ಸಿಕ್ಕಿದೆ.
