ನಟಿ ಚೈತ್ರಾ, ಪತಿ ಮತ್ತು ಮಾವನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2006ರಲ್ಲಿ ನನ್ನ ಮದುವೆಯಾದ ಬಳಿಕ ನನ್ನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ನನಗೆ ಗೊತ್ತಿಲ್ಲದೇ ಆ ಅಕೌಂಟ್ ನಿಂದ ವ್ಯವಹಾರ ಮಾಡುತ್ತಿದ್ದಾರೆ. ಇದ್ಯಾವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಬ್ಯಾಂಕ್‌ಗೆ ಹೋದಾಗ ಈ ಎಲ್ಲಾ ವಿಚಾರಗಳು ಗೊತ್ತಾಗಿದೆ.

ನಟಿ ಚೈತ್ರಾ ಹಳ್ಳಿಕೇರೆ(Chitra Hallikeri)ತನ್ನ ಪತಿ ಮತ್ತು ಮಾವನ ವಿರುದ್ಧ ತನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿರುವ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಅನುಮತಿ ಇಲ್ಲದೆ ಗೋಲ್ಡ್ ಲೋನ್ ಪಡೆಯಲಾಗಿದೆ ಎಂದು ಪತಿ ಬಾಲಾಜಿ ಪೋತರಾಜ್ ಮತ್ತು ಮಾವ ಪೋತರಾಜ್ ವಿರುದ್ಧ ಚೈತ್ರಾ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟಿ ಚೈತ್ರಾ ಈ ಈ ಪ್ರಕರಣಕ್ಕೆ ಸಂಬಂಧಿಸಿ ಇಂದು (ಮೇ 24) ಪತ್ರಿಕಾಗೋಷ್ಠಿ(Pressmeet) ನಡೆಸಿದ್ದಾರೆ. ಮಾವ, ಪತಿ ಮತ್ತು ಬ್ಯಾಂಕ್ ಮ್ಯಾನೇಜರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

2006ರಲ್ಲಿ ನನ್ನ ಮದುವೆಯಾದ ಬಳಿಕ ನನ್ನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ನನಗೆ ಗೊತ್ತಿಲ್ಲದೇ ಆ ಅಕೌಂಟ್ ನಿಂದ ವ್ಯವಹಾರ ಮಾಡುತ್ತಿದ್ದಾರೆ. ಇದ್ಯಾವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಬ್ಯಾಂಕ್‌ಗೆ ಹೋದಾಗ ಈ ಎಲ್ಲಾ ವಿಚಾರಗಳು ಗೊತ್ತಾಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿದರೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಗೊತ್ತಾಯಿತು ನನ್ನ ಅಕೌಂಟ್ ನಲ್ಲಿ ಹಣ ವರ್ಗಾವಣೆಯಾಗಿದೆ ಎಂದು ಹೇಳಿದ್ದಾರೆ.

ಈ ಅಕೌಂಟ್ ನನ್ನ ಹೆಸರಿನಲ್ಲಿ ಇದೆ. ಆದರೆ ಫೋನ್ ನಂಬರ್ ನನ್ನದಿಲ್ಲ. ಹಾಗಾಗಿ ನನಗೆ ಯಾವುದೇ ಮಾಹಿತಿ ಗೊತ್ತಾಗುತ್ತಿರಲಿಲ್ಲ. ಬ್ಯಾಂಕ್ ಸ್ಟೇಟ್ ಮೆಂಟ್ ತೆಗೆಯಲು ಹೋದಾಗ ಬ್ಯಾಂಕ್ ಮ್ಯಾನೇಜರ್ ಒಂದಿಷ್ಟು ಪೇಪರ್ ಕೊಟ್ಟು ಸಹಿ ಮಾಡಲು ಹೇಳಿದರು. ಏನಿದು ಪೇಪರ್ ಎಂದು ಕೇಳಿದಾಗ ರಿನಿವಲ್ ಪೇಪರ್ ಎಂದು ಹೇಳಿದರು. ಅದರಲ್ಲಿ ನನ್ನ ಸಹಿ ಇರಲಿಲ್ಲ, ಅದನ್ನು ಕೇಳಿದಾಗ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಇದರಲ್ಲಿ ಬ್ಯಾಂಕ್ ನವರು ಕೂಡ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ ಸೋತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾತೆ ಇದೆ ಎಂದು ವಿವರಿಸಿದ್ದಾರೆ. ಸದ್ಯ ಪತಿ ಮತ್ತು ಮಾವನ ವಿರುದ್ಧ ದೂರು ನೀಡಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಪತಿ, ಮಾವನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಚೈತ್ರಾ ಹಳ್ಳಿಕೇರಿ; ದೂರು ದಾಖಲು

ನನ್ನ ಗೋಲ್ಡ್ ಎಲ್ಲಾ ಅತ್ತೆಯ ಬಳಿ ಇದೆ

ನಟಿ ಚೈತ್ರಾ ಪತಿಯ ವಿರುದ್ಧ ಹಲ್ಲೆ, ಕೌಟುಂಬಿಕ ದೌರ್ಜನ್ಯ ಆರೋಪ ಮಾಡುತ್ತಿದ್ದಾರೆ. ತನ್ನ ಬಳಿ ಇದ್ದ ಎಲ್ಲಾ ಗೋಲ್ಡ್ ಅತ್ತೆಯ ಬಳಿಯೇ ಇತ್ತು. ಇದನ್ನು ತಾನು ಹಾಕಿಕೊಳ್ಳಬೇಕು ಎಂದರೆ ಮೈಸೂರಿಗೆ ಹೋಗಿ ಅವರ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು ಎಂದು ಬಹಿರಂಗ ಪಡಿಸಿದ್ದಾರೆ.

2018ರಲ್ಲಿ ಪತಿ ವಿರುದ್ಧ ದೂರು ನೀಡಿದ್ದ ನಟಿ ಚೈತ್ರಾ

ನಟಿ ಚೈತ್ರಾ 2018ರಲ್ಲಿ ಪತಿ ವಿರುದ್ಧ ಹಲ್ಲೆ ಮಾಡಿದ ದೂರು ನೀಡಿದ್ದರು. ಬೆಂಗಳೂರಿನ ಬಸವನಗುಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪರಸ್ಪರರ ಒಪ್ಪಿಗೆ ಮೇರೆಗೆ ರಾಜಿ ಸಂದಾನ ನಡೆದು ಪ್ರಕರಣ ಮುಚ್ಚಿಹಾಕಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಚೈತ್ರಾ, ಆಗ ಬದಲಾಗುತ್ತಿದ್ದೀನಿ, ಮತ್ತೆ ನಿನ್ನ ಮೇಲೆ ಹಲ್ಲೆ ಮಾಡಲ್ಲ, ಕೈ ಮಾಡಲ್ಲ ಎಂದು ಹೇಳಿದರು. ಸುಖವಾಗಿ ಸಂಸಾರ ಮಾಡೋಣ ಅಂತ ನಂಬಿಸಿದ್ರು. ಸಂಸಾರ ಸರಿ ಆಗುತ್ತೆ ಅಂತ ಹೇಳಿದ್ರೆ ಕೇಸ್ ಕ್ಲೋಸ್ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ. ಆದರೀಗ ಸಂಸಾರ ಯಾವುದೇ ರೀತಿಯಲ್ಲೂ ಸರಿಯಾಗದೆ ಇರುವ ಸ್ಥಿತಿಗೆ ಹೋಗಿದೆ. ಯಾರಿಗೆ ಇಷ್ಟ ಆಗುತ್ತೆ ತಮ್ಮ ಸಂಸಾರದ ಬಗ್ಗೆ ಹೀಗೆ ಮಾತನಾಡೋಕೆ. ತುಂಬಾ ನೋವಾಗಿದೆ ಎಂದರು. ಇದೀಗ ಮತ್ತೆ 2018ರ ಪ್ರಕರಣವನ್ನು ರಿ ಓಪನ್ ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ.

ಚೈತ್ರಾ ಅವರದ್ದು ಲವ್ ಮ್ಯಾರೇಜ್

ನಟಿ ಚೈತ್ರಾ ಮತ್ತು ಬಾಲಾಜಿ ಪೋತರಾಜ್ ಇಬ್ಬರದ್ದು ಲವ್ ಮ್ಯಾರೇಜ್. ಮನೆಯವರ ಒಟ್ಟಿಗೆ ಮೇರೆಗೆ ಮದುವೆಯಾದವರು. 2006ರಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಪತಿ-ಪತ್ನಿಯ ನಡುವೆ ದಾಂಪತ್ಯ ಕಲಹ ಶುರುವಾಗಿದೆ. ಅಂದಹಾಗೆ ಚೈತ್ರಾ ದಂಪತಿಗೆ ಇಬ್ಬರು ಮಕ್ಕಳು. 2020ರ ವರೆಗೂ ಚೈತ್ರಾ ಪತಿಯ ಜೊತೆಯಲ್ಲೇ ಇದ್ದರು. ಬಳಿಕ ಇಬ್ಬರು ದೂರ ದೂರ ಆಗಿದ್ದಾರೆ. ಇದೀಗ ಚೈತ್ರಾ ಮತ್ತು ಬಾಲಾಜಿ ವಿಚ್ಛೇದನ ಪ್ರಕರಣ ಕೋರ್ಟ್ ನಲ್ಲಿದೆ.

ಮತ್ತೆ ಕೆಲಸ ಮಾಡಲು ನಿರ್ಧರಿಸಿದ ನಟಿ ಚೈತ್ರಾ

ಇದೀಗ ಚೈತ್ರಾ ಮತ್ತೆ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಜೀವನಕ್ಕಾಗಿ ಇಬ್ಬರ ಮಕ್ಕಳ ಸಲುವಾಗಿ ಮತ್ತೆ ಕೆಲಸ ಪ್ರಾರಂಭಿಸುತ್ತೇನೆ. ಚಿತ್ರರಂಗದಲ್ಲಿ ಉತ್ತಮ ಅವಕಾಶ ಸಿಕ್ಕರೆ ಬಣ್ಣದ ಲೋಕದಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

ಚೈತ್ರಾ ಅವರ ಸಿನಿಮಾ ಜರ್ನಿ ಬಗ್ಗೆ

ನಟಿ ಚೈತ್ರಾ ಖುಷಿ, ಶಿಷ್ಯ, ಗುನ್ನ ಸೇರಿದಂತೆ ಇನ್ನು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಚೈತ್ರಾ ನಟನೆಯ ಅನೇಕ ಸಿನಿಮಾಗಳ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ. ಸಿನಿಮಾರಂಗದಲ್ಲಿ ಆಕ್ಟೀವ್ ಆಗಿರುವಾಗಲೇ ಚೈತ್ರಾ ಬಾಲಾಜಿ ಪೋತರಾಜ್ ಜೊತೆ ಹಸೆಮಣೆ ಏರಿದರು. ಮದುವೆ ಬಳಿಕ ನಟನೆ ಬಿಡಬೇಕು ಎನ್ನುವ ಷರತ್ತು ಹಾಕಿದ್ದರು. ಅದನ್ನು ಒಪ್ಪಿಕೊಂಡೆ ಎಂದು ಹೇಳಿದರು. ಮದುವೆ ಬಳಿಕ ಪತಿಯ ಒಪ್ಪಿಗೆ ಪಡೆದು ಧಾರಾವಾಹಿ ನಿರ್ಮಾಣ ಮಾಡಿದ್ದರು ಮತ್ತು ಅಡುಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.