ಕೇರಳದಲ್ಲಿ ನಡೆದ ಒಂದು ಬಟ್ಟೆ ಅಂಗಡಿ ಉದ್ಘಾಟನಾ ಸಮಾರಂಭದಲ್ಲಿ ನಟಿ ಅನುಶ್ರೀ ಲಕ್ಕಿ ಡ್ರಾದಲ್ಲಿ ಬಹುಮಾನ ತಪ್ಪಿದ ವ್ಯಕ್ತಿಗೆ ತಮ್ಮ ಹಣದಿಂದ ಸಹಾಯ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನುಶ್ರೀಯವರ ದಯಾಳುತನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸಿನಿಮಾದ ನಟ-ನಟಿಯರು ಹೋಗುವ ವೇದಿಕೆ ಕಾರ್ಯಕ್ರಮ ಅಥವಾ ಯಾವುದಾದರೂ ಉದ್ಯಮ ಮಳಿಗೆಗಳ (ಜ್ಯೂವೆಲ್ಲರಿ ಶಾಪ್, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್ ಶೋ ರೂಮ್, ಮೊಬೈಲ್ ಮಳಿಗೆ ಇತ್ಯಾದಿ..) ಉದ್ಘಾಟನೆಗೆ ಬಂದಾಗ ಒಂದಷ್ಟು ಗೌರವಧನ ಅಥವಾ ಕಾಣಿಕೆಯನ್ನು ಪಡೆಯುತ್ತಾರೆ. ಆದರೆ, ಇಲ್ಲಿ ನಟಿ ಅನುಶ್ರೀ ಅವರು ಬಟ್ಟೆ ಅಂಗಡಿ ಉದ್ಘಾಟನೆಗೆ ಬಂದು ತಮ್ಮ ಕೈಯಿಂದಲೇ ಹಣವನ್ನು ಕೊಟ್ಟು ಬಂದಿದ್ದಾರೆ.
ಹೌದು ಈ ಘಟನೆ ನಡೆದಿರುವುದು ಕೇರಳದಲ್ಲಿ. ನಮ್ಮ ಕನ್ನಡದ ನಿರೂಪಕಿ ಅನುಶ್ರೀ ಮಾದರಿಯಲ್ಲಿಯೇ ಮಲೆಯಾಳಂನಲ್ಲಿ ನಟಿ ಅನುಶ್ರೀ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ನಟಿ ಆಗಿದ್ದಾರೆ. ಹಲವಾರು ಕಾರ್ಯಕ್ರಮಗಳಿಗೆ ಹೋಗುವ ನಟಿ ಅನುಶ್ರೀ, ತನ್ನ ಸಭ್ಯ ನಡತೆಯಿಂದ ಭಾರೀ ಅಭಿಮಾನಿಗಳನ್ನು ಕೂಡ ಗಳಿಸಿದ್ದಾರೆ. ಇದೀಗ ಈ ನಟಿ ಬಟ್ಟೆ ಅಂಗಡಿ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋದಾಗ ತನ್ನ ಕೈಯಿಂದಲೇ 10 ಸಾವಿರ ರೂ. ಹಣವನ್ನು ಕೊಟ್ಟು ಬಂದಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಲೆಯಾಳಂನಲ್ಲಿ ಡೈಮಂಡ್ ನೆಕ್ಲೆಸ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದ ಈ ನಟಿ ಅನುಶ್ರೀ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಸಕ್ರಿಯರಾಗಿದ್ದಾರೆ. ಅನುಶ್ರೀ ಹಾಕುವ ಪೋಸ್ಟ್‌ಗಳು ಜನಪ್ರಿಯವಾಗುತ್ತವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಳ್ಳುವ ಅನುಶ್ರೀಯನ್ನು ನೋಡಲು ಮಲಯಾಳಿಗಳಿಗೆ ತುಂಬಾ ಇಷ್ಟಪಡುತ್ತಾರೆ. ಅಂತಹ ಒಂದು ಉದ್ಘಾಟನಾ ಸಮಾರಂಭದಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಂದು ಬಟ್ಟೆ ಅಂಗಡಿಯ ಉದ್ಘಾಟನೆಗೆ ಅನುಶ್ರೀ ಬಂದಿದ್ದರು. ಅಲ್ಲಿ ಒಂದು ಲಕ್ಕಿ ಡ್ರಾ ಕೂಡ ನಡೆಯಿತು. ಲಕ್ಕಿ ಡ್ರಾ ನಡೆಯುವಾಗ ತನ್ನ ನಂಬರ್ ಬಂತು ಅಂತ ತಿಳ್ಕೊಂಡು ಒಬ್ಬ ಮಧ್ಯವಯಸ್ಕ ವ್ಯಕ್ತಿ ವೇದಿಕೆ ಮೇಲೆ ಬಂದರು. ಆದರೆ ವೇದಿಕೆ ಮೇಲೆ ಬಂದ ಮೇಲೆ ತನಗೆ 10,000 ರೂಪಾಯಿ ಬಹುಮಾನ ಬಂದಿಲ್ಲ ಅಂತ ಗೊತ್ತಾಗಿ, ಮತ್ತೆ ವೇದಿಕೆಯಿಂದ ಕೆಳಗೆ ಹೋದರು. ಅವರ ಬೇಸರ ನೋಡಿ ಅನುಶ್ರೀ ಕಣ್ಣಲ್ಲಿ ನೀರು ಬಂತು ಅಂತ ವಿಡಿಯೋದಲ್ಲಿ ನೋಡಬಹುದು. ಉದ್ಘಾಟನೆ ಮುಗಿದ ಮೇಲೆ ಆ ಮಧ್ಯವಯಸ್ಕ ವ್ಯಕ್ತಿಗೆ ಅನುಶ್ರೀ ತನ್ನ ಪರ್ಸಿನಿಂದ ತೆಗೆದು ಲಕ್ಕಿ ಡ್ರಾದಲ್ಲಿ ನಮೂದು ಮಾಡಲಾಗಿದ್ದಷ್ಟು ಹಣವನ್ನು ಕೊಟ್ಟರು. ಅಂಗಡಿಯ ಮಾಲೀಕರು ಕೂಡ ಹಣ ಕೊಟ್ಟರು. 'ಆ ಮನುಷ್ಯನಿಗೆ ಹಣ ಕೊಡದಿದ್ದರೆ ನನಗೆ ನಿದ್ದೆ ಬರಲ್ಲ' ಎಂದು ನಟಿ ಅನುಶ್ರೀ ಹೇಳಿದರು.
ಈ ವಿಡಿಯೋ ವೈರಲ್ ಆದ ಮೇಲೆ ಅನೇಕ ಜನ ಅನುಶ್ರೀಯನ್ನು ಶ್ಲಾಘನೆ ಮಾಡಿದ್ದಾರೆ. 'ಒಂದು ಸಣ್ಣ ಹೂವು ಸಿಗುತ್ತೆ ಅಂತ ವೇದಿಕೆ ಮೇಲೆ ಬಂದ ಆ ವ್ಯಕ್ತಿಗೆ ಹೂತೋಟನೇ ಕೊಟ್ಟು ಮನಸ್ಸು ತುಂಬಿಸಿದ ಅನುಶ್ರೀ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಅನುಶ್ರೀ ಕಣ್ಣಲ್ಲಿ ನೀರು ಬಂದಿದ್ದರೆ ಅವರು ತಮ್ಮ ತಂದೆ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆ ಇರಬೇಕು. ಎಲ್ಲರಲ್ಲೂ ಈ ಗುಣ ಇರಬೇಕು' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
