Jacqueline Fernandez gets bail: ನಟಿ ಜಾಕ್ವೆಲಿನ್‌ ಫರ್ನಾಂಡೆಸ್‌ಗೆ ವಂಚನೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರಾಗಿದ್ದು ಬಂಧನ ಭೀತಿಯಿಂದ ಕೊಂಚ ರಿಲೀಫ್‌ ಸಿಕ್ಕಂತಾಗಿದೆ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ಕಡೆಯಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದ ಹಿನ್ನೆಲೆ ಅವರ ಮೇಲೆ ಜಾರಿ ನಿರ್ದೇಶನಾಲಯ ದೋಷಾರೋಪಪಟ್ಟಿ ಸಲ್ಲಿಸಿತ್ತು. 

ನವದೆಹಲಿ: 200 ಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಜಾಕ್ವೆಲಿನ್‌ ಫರ್ನಾಂಡೆಸ್‌ಗೆ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಕೊಂಚ ರಿಲೀಫ್‌ ಸಿಕ್ಕಂತಾಗಿದೆ. ಪ್ರಕರಣದಲ್ಲಿ ಹೊಸ ವಿಚಾರಗಳು ಬೆಳಕಿಗೆ ಬಂದ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಜಾಕ್ವೆಲಿನ್‌ ಫರ್ನಾಂಡೆಸ್‌ ಬಂಧನ ಭೀತಿಯಲ್ಲಿದ್ದರು. ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆಲಿಸಿದ ನ್ಯಾಯಾಲಯ ಮಧ್ಯಮಂತರ ಜಾಮೀನು ನೀಡಿದೆ. ದೆಹಲಿಯ ಪಟಿಯಾಲಾ ಕೋರ್ಟ್‌ ರೂ 50,000 ಭದ್ರತಾ ಬಾಂಡ್‌ ಪಡೆದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ನ್ಯಾಯಾಂಗ ಬಂಧನದಲ್ಲೇ ಮುಂದುವರೆದಿದ್ದಾರೆ. ಕಳೆದ ವಾರ ಜಾಕ್ವೆಲಿನ್‌ ಫರ್ನಾಂಡೆಸ್‌ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಆಗಸ್ಟ್‌ 17ರಂದು ಸಲ್ಲಿಸಿದ್ದ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಜಾಕ್ವೆಲಿನ್‌ರನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ ಪರಿಗಣಿಸಿತ್ತು. ಅದಾದ ನಂತರ ನಟಿಯ ಸ್ಟೈಲಿಸ್ಟ್‌ರನ್ನು ಕೂಡ ವಿಚಾರಣೆಗೊಳಪಡಿಸಲಾಗಿತ್ತು. 

ಆರೋಪಗಳ ಪ್ರಕಾರ ಜಾಕ್ವೆಲಿನ್‌ ಫರ್ನಾಂಡೆಸ್‌ ಸುಕೇಶ್‌ ಚಂದ್ರಶೇಖರ್‌ರಿಂ 7 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ಪಡೆದಿದ್ದರು. ದುಬಾರಿ ಬ್ಯಾಗ್‌, ಕಾರು, ಬಟ್ಟೆಗಳು, ವಾಚ್‌ ಮತ್ತಿತರ ವಸ್ತುಗಳನ್ನೂ ಉಡುಗೊರೆಯಾಗಿ ಪಡೆದಿದ್ದರು ಎನ್ನಲಾಗಿದೆ. ಜತೆಗೆ ಸುಕೇಶ್‌ ಚಂದ್ರಶೇಖರ್‌ ಮೋಸದ ದುಡ್ಡಿನಲ್ಲಿ ಈ ಉಡುಗೊರೆಗಳನ್ನು ಕೊಡುತ್ತಿರುವುದು ಗೊತ್ತಿದ್ದರೂ ನಟಿ ಉಡುಗೊರೆ ಸ್ವೀಕರಿಸಿದ್ದರು ಎಂಬುದೇ ಅವರ ಮೇಲಿರುವ ಗುರುತರ ಆರೋಪ. 

ಜಾರಿ ನಿರ್ದೇಶನಾಲಯಕ್ಕೆ ಜಾಕ್ವೆಲಿನ್ ಫರ್ನಾಂಡೆಸ್‌ ನೀಡಿರುವ ಹೇಳಿಕೆಯ ಪ್ರಕಾರ ಸುಕೇಶ್‌ ಚಂದ್ರಶೇಖರ್‌ ಸನ್‌ ಟಿವಿಯ ಮಾಲೀಕನೆಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಜತೆಗೆ ತಮಿಳುನಾಡಿನ ರಾಜಕೀಯ ಪಕ್ಷವೊಂದರ ಪ್ರಬಲ ಕುಟುಂಬದ ಸದಸ್ಯ ಎಂದು ಹೇಳಿಕೊಂಡಿದ್ದ. ಪ್ರತಿವಾರ ಲಿಮಿಟೆಡ್‌ ಎಡಿಷನ್‌ ಸುಗಂಧ ದ್ರೌವ್ಯಗಳು, ಹೂವು, ಡಿಸೈನರ್‌ ಬ್ಯಾಗ್‌ಗಳು, ಡೈಮಂಡ್‌ ಕಿವಿಯೋಲೆ, ಮಿನಿ ಕೂಪೆ ಕಾರುಗಳನ್ನು ಜಾಕ್ವೆಲಿನ್‌ ಫರ್ನಾಂಡೆಸ್‌ಗೆ ನೀಡಿದ್ದ. 

ಇದನ್ನೂ ಓದಿ: ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್‌ಗೆ ಹೆಚ್ಚಿದ ಸಂಕಷ್ಟ; ನಟಿಯ ಸ್ಟೈಲಿಸ್ಟ್‌ನಿಂದ ಹೊಸ ಮಾಹಿತಿ ರಿವೀಲ್‌

ವಿಚಾರಣೆಯಲ್ಲಿ ಕೇಳಿದ್ದೇನು?:
ಇಡಿ ಇಬ್ಬರಿಗೂ ಯಾವಾಗ ಮೊದಲ ಸಲ ಮಾತಾಡಿದ್ದು? ಎಂದು ಕೇಳಿದ ಪ್ರಶ್ನೆಗೆ ಬಗ್ಗೆ ಜಾಕ್ವೆಲಿನ್ ಅವರು 2021 ರ ಜನವರಿ ಕೊನೆಯ ವಾರದಲ್ಲಿ ಇಬ್ಬರೂ ಮೊದಲ ಬಾರಿಗೆ ಮಾತನಾಡಿದ್ದಾರೆ ಎಂದು ಹೇಳಿದರು. ಆದಾಗ್ಯೂ, ಈ ಪ್ರಶ್ನೆಗೆ ಉತ್ತರವಾಗಿ, ಚಂದ್ರಶೇಖರ್ ಅವರು ಡಿಸೆಂಬರ್ 2020 ರಲ್ಲಿ ಜಾಕ್ವೆಲಿನ್ ಅವರನ್ನು ಮೊದಲ ಬಾರಿಗೆ ಸಂಪರ್ಕಿಸಿರುವುದಾಗಿ ಹೇಳಿದ್ದರು. 

ಜಾಕ್ವೆಲಿನ್ ಸಹೋದರಿ ಜೆರಾಲ್ಡಿನ್ ಫರ್ನಾಂಡೀಸ್‌ಗಾಗಿ ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದೀರಾ ಎಂದು ಇಡಿ ಚಂದ್ರಶೇಖರ್‌ಗೆ ಕೇಳುತ್ತದೆ. ಈ ಪ್ರಶ್ನೆಗೆ ಉತ್ತರಿಸಿದ ಜಾಕ್ವೆಲಿನ್, ಈ ರೀತಿ ನಡೆದಿರುವುದನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಚಂದ್ರಶೇಖರ್, ತನಗೆ ನೆನಪಿಲ್ಲ ಎಂದಿದ್ದರು. ಅದೇ ಸಮಯದಲ್ಲಿ, ಇಡಿ ಅವರು ಯುಎಸ್‌ನಲ್ಲಿರುವ ಜೆರಾಲ್ಡಿನ್ ಫರ್ನಾಂಡಿಸ್ ಅವರ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಿದ್ದೀರಾ ಎಂದು ಚಂದ್ರಶೇಖರ್ ಅವರನ್ನು ಕೇಳಿದ್ದರು. ಚಂದ್ರಶೇಖರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ, ನನಗೆ ಇಂಥದ್ದೇನೂ ನೆನಪಿಲ್ಲ ಎಂದು ಉತ್ತರಿಸಿದರೆ, ಜಾಕ್ವೆಲಿನ್ ಅವರು $150,000 ಕಳುಹಿಸಿದ್ದಾರೆ ಎಂದು ಉತ್ತರಿಸಿದ್ದರು.

ಇದನ್ನೂ ಓದಿ: ಇಡಿ ಮುಂದೆ ಜಾಕ್ವೆಲಿನ್ ಮತ್ತು ಸುಕೇಶ್ ಪೂರ್ತಿ ಕಥೆ ಬಯಲು; ನಟಿಗೆ ಹೆಚ್ಚಿದ ಸಂಕಷ್ಟ

ಆಸ್ಟ್ರೇಲಿಯಾದಲ್ಲಿರುವ ಜಾಕ್ವೆಲಿನ್ ಸಹೋದರನ ಬ್ಯಾಂಕ್ ಖಾತೆಗೆ ಎಷ್ಟು ಹಣವನ್ನು ಕಳುಹಿಸಿದ್ದೀರಿ ಎಂದು ಇಡಿ ಚಂದ್ರಶೇಖರ್ ಅವರನ್ನು ಕೇಳಿದೆ. ಇದಕ್ಕೂ ಚಂದ್ರಶೇಖರ್ ತನಗೆ ಏನೂ ಗೊತ್ತಿಲ್ಲ, ನೆನಪಿಲ್ಲ ಎಂದು ಹೇಳಿದರೆ, ಜಾಕ್ವೆಲಿನ್ ತನ್ನ ಸಹೋದರನ ಖಾತೆಗೆ 15 ಲಕ್ಷ ರೂ ಕಳಿಸಿದ್ದಾರೆ ಎಂದಿದ್ದರು.

ಯಾವ ಮಾಧ್ಯಮದ ಮೂಲಕ ಇಬ್ಬರೂ ಪರಸ್ಪರ ಮಾತನಾಡುತ್ತಿದ್ದರು ಎಂಬ ಪ್ರಶ್ನೆಗೆ ಜಾಕ್ವೆಲಿನ್ ಅವರು ವಾಟ್ಸಾಪ್‌ನಲ್ಲಿ ಪರಸ್ಪರ ಮಾತನಾಡುತ್ತಿದ್ದರು ಎಂದು ಹೇಳಿದ್ದು, ಇದನ್ನು ಚಂದ್ರಶೇಖರ್ ಖಚಿತಪಡಿಸಿದ್ದರು.