ಶ್ಯಾಮ್ ಬೆನಗಲ್ ನನ್ನ ಅಣ್ಣನಂತಿದ್ದರು: ಅನಂತನಾಗ್
ನಿನ್ನೆಯಷ್ಟೇ ಅಗಲಿದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಅವರೊಂದಿಗಿನ ಒಡನಾಟವನ್ನು ಹಿರಿಯ ನಟ ಅನಂತನಾಗ್ ಅವರು ಸ್ಮರಿಸಿದ್ದಾರೆ.
1970 ಮತ್ತು 1980ರ ದಶಕದಲ್ಲಿ ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಹೆಸರಾಂತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ (90) ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕನ್ನಡ ಹಿರಿಯ ನಟ ಅನಂತ್‌ನಾಗ್ ಅವರು ಕೂಡ ಶ್ಯಾಮ್ ಬೆನಗಲ್ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿ ಅವರನ್ನು ಸ್ಮರಿಸಿದ್ದಾರೆ. ನನ್ನನು ಸಿನಿಮಾ ರಂಗಕ್ಕೆ ಶ್ಯಾಮ್ ಪರಿಚಯ ಮಾಡಿಕೊಟ್ಟದು. ನನ್ನ ರಂಗಭೂಮಿ ಗುರು ಸತ್ಯದೇವ್ ದುಬೆ. ನನ್ನನ್ನು ನೋಡಿದ ಕೂಡಲೇ ಅವರು ಆಯ್ಕೆ ಮಾಡಿದರು. ಅವರ ಮೊದಲ ಚಿತ್ರ ದಿಂದ ಹಿಡಿದು ಸತತವಾಗಿ 6 ಸಿನಿಮಾಗಳಲ್ಲಿ ನಟಿಸಿದೆ. ಬಹುಶಃ ಅವರ ಜೊತೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವನು ನಾನೇ ಇರಬೇಕು.
1973ರಲ್ಲಿ ಅಂಕುರ್ ಚಿತ್ರದಿಂದ ನಮ್ಮ ಒಡನಾಟ ಆರಂಭವಾಯಿತು. ನಂತರ ಗಿರೀಶ್ ಕಾರ್ನಾಡರೂ ನಮಗೆ ಜತೆಯಾದರು. ಹಿಂದಿ ಚಿತ್ರರಂಗಕ್ಕೆ ವಿಭಿನ್ನ ಚಿತ್ರ ಕೊಟ್ಟು, ಭಿನ್ನ ಹಾದಿ ತುಳಿದವರು ಶ್ಯಾಮ್. ಅವರು ಯಾವ ಆಮಿಷಗಳಿಗೂ ಮಣಿಯದೇ ತಮ್ಮದಾರಿಯಲ್ಲಿ ಹಟದಿಂದ ಸಾಗಿದರು. ಅವರಿಗೆ ಬೆಂಗಳೂರಿನಲ್ಲಿ ಬಂದು ವಾಸ ಮಾಡ ಬೇಕು ಅನ್ನುವ ಆಸೆ ಇತ್ತು. ಕೋರಮಂಗಲದಲ್ಲಿ ಅವರೊಂದು ಮನೆ ಕೊಂಡು ಮಾಡಿಸಿದ್ದರು. ಅದರ ಆರಂಭ ನನ್ನಿಂದಲೇ ಮಾಡಿಸಿದ್ದರು. ಆದರೆ 1 ದಿನವೂ ವಾಸ ಮಾಡಲಿಲ್ಲ. ನಂತರ ಮನೆ ಮಾರಿ ಮುಂಬಯಿಗೆ ಮರಳಿದರು.
ನಾನು ರಾಜಕೀಯ ಸೇರಿದಾಗ ತಕರಾರು ಎತ್ತಿದ್ದರು. ಆಮೇಲೆ ಸಿಕ್ಕಾಗ, ನನ್ನಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದ್ದು ನೀವು ಮತ್ತು ನಿಮ್ಮ ಸಿನಿಮಾಗಳು. ಈಗ ನೀವೇ ಹೀಗಂದರೆ ಹ್ಯಾಗೆ ಅಂತ ಕೇಳಿದ್ದೆ. ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿಯಿತ್ತು. ಪ್ರತಿ ಹುಟ್ಟುಹಬ್ಬಕ್ಕೂ ಅವರಿಗೆ ಶುಭಾಶಯ ಹೇಳುತ್ತಿದ್ದೆ. ಈ ಸಲ ಅವರು ಕಾಯಿಲೆ ಬಿದ್ದದ್ದು ಗೊತ್ತಾಗಿದ್ದರಿಂದ ಫೋನ್ ಮಾಡಿರಲಿಲ್ಲ. ಅವರು ನನ್ನ ಅಣ್ಣನ ಸ್ಥಾನದಲ್ಲಿದ್ದರು. ಅವರ ಮಾತನ್ನು ನಾನು ಮೀರಿರಲಿಲ್ಲ ಎಂದು ಅನಂತ್‌ನಾಗ್ ಹೇಳಿದ್ದಾರೆ.
ಕಲಾತ್ಮಕ ಚಿತ್ರಗಳ ಹರಿಕಾರ ಬೆನಗಲ್
ಕಲಾತ್ಮಕ ಚಿತ್ರಗಳ ಹರಿಕಾರರಲ್ಲಿ ಒಬ್ಬರು ಎಂದೇ ಹೆಸರಾಗಿದ್ದ ಶ್ಯಾಮ್ ಬೆನಗಲ್ ಹುಟ್ಟಿದ್ದು ಹೈದರಾಬಾದ್‌ನಲ್ಲಿ ಪ್ರಸಿದ್ಧ ಛಾಯಾಗ್ರಾಹಕರಾಗಿದ್ದ ಅವರ ತಂದೆ ಶ್ರೀಧರ್ ಬೆನಗಲ್ ಮೂಲತಃ ಕರ್ನಾಟಕದ ಬೆಣಗಲ್‌ನವರು. ಜಾಹೀರಾತು ಸಂಸ್ಥೆಯಲ್ಲಿ ಅಲೆಕ್ ಪದಮ್ ಜತೆ ಕೆಲಸ ಮಾಡಿದ ಶ್ಯಾಮ್, ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ದೇಶದ ಅತ್ಯುತ್ತಮ ನಿರ್ದೇಶಕರ ಸಾಲಲ್ಲಿ ಹೆಸರು ಪಡೆದರು. 1973ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಬೆನಗಲ್ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ನಿರ್ಮಿಸುತ್ತಲೇ ಹೋದರು. ಅಲ್ಲಿಯ ತನಕ ಬಾಲಿವುಡ್ ಪ್ರೇಮ, ವಿರಹ, ದ್ವೇಷಗಳ ಕತೆಯನ್ನೇ ನೆಚ್ಚಿಕೊಂಡಿತ್ತು. ಶ್ಯಾಮ್ ಬೆನಗಲ್ ಮೊದಲ ಬಾರಿಗೆ ಜನಸಾಮಾನ್ಯರ, ನೆಲಮೂಲದ ಮಂದಿಯ, ಆಧುನಿಕ ಮಧ್ಯಮವರ್ಗದವರ ಕತೆಗಳನ್ನು ತೆರೆಗೆ ತಂದರು.
ಮಹಾಭಾರತದ ಕತೆಯನ್ನಿಟ್ಟುಕೊಂಡು ಕಲಿಯುಗ್ ಚಿತ್ರ ನಿರ್ಮಿಸಿದರು. ಅವರು ನಿರ್ದೇಶಿಸಿದ ಅಂಕುಲ್, ನಿಶಾಂತ್, ಮಂಥನ್, ಭೂಮಿಕಾ, ಕೊಂಡೂರ, ಮಾ ಮೋ- ರಾಷ್ಟ್ರಪ್ರ ಶಸ್ತಿಗಳನ್ನು ತಂದುಕೊಟ್ಟವು. ಜುನೂನ್, ಮಂಡಿ, ತ್ರಿಕಾಲ್ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿ ದವು. ಹದಿನೆಂಟು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದ ಶ್ಯಾಮ್ ಕೊನೆಯ ತನಕವೂ ತಮ್ಮ ದಾರಿ ಬಿಟ್ಟು ಹೋಗಲಿಲ್ಲ. ಸತ್ಯ ಜಿತ್ ರೇಸಾಕ್ಷ ಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಶ್ಯಾಮ್, ನೆಹರೂ ಬರೆದ ಡಿಸ್ಕವರಿ ಆಫ್ ಇಂಡಿಯಾ ಆಧರಿಸಿ ಭಾರತ್ ಏಕ್ ಖೋಜ್ ಧಾರಾವಾಹಿಯನ್ನೂ ಡಿಡಿಗೆ ನಿರ್ಮಿಸಿದ್ದರು.
ಹೆಸರಾಂತ ಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ನಿಧನ
ಬೆನಗಲ್ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಸಂಜೆ 6:30ರ ಸುಮಾರಿಗೆ ಸಾವನ್ನಪ್ಪಿರುವ ಬಗ್ಗೆ ಅವರ ಪುತ್ರಿ ಪಿಯಾ ಬೆನೆಗಲ್ ಧೃಡಪಡಿಸಿದ್ದಾರೆ. ಅವರು ಪತ್ನಿನೀರಾಬೆನಗಲ್ ಮತ್ತು ಪುತ್ರಿ ಪಿಯಾ ಬೆನಗಲ್ ಅವರನ್ನು ಅಗಲಿದ್ದಾರೆ. ಬೆನೆಗಲ್ ಅವರು ಡಿ.14ರಂದು ತಮ್ಮ 90ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಅಂದು ಲವಲವಿಕೆಯಿಂದಲೇ ಫೋಟೋಗೆ ಪೋಸ್ ನೀಡಿದ್ದರು. ಆದರೆ ಅವರ ದಿಢೀರ್ ಸಾವು ಸುದ್ದಿ ಅಭಿಮಾನಿಗಳಿಗೆ ಆಘಾತ ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯರು, ಅಭಿಮಾನಿಗಳು ಅವರ ಸಾವಿನ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.