ಚಿತ್ರದುರ್ಗ [ಅ.08] :  ಮೌಢ್ಯದಲ್ಲಿ ಮನುಷ್ಯರನ್ನು ಮುಳುಗಿಸುವುದು ಮಹಾಪರಾಧ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

ನಗರದ ಮುರುಘಾಮಠದ ಅಲ್ಲಮಪ್ರಭು ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಗಾಂಧೀವಾದದ ಪ್ರಸ್ತುತತೆ ಕುರಿತು ಮಾತನಾಡಿದ ಅವರು, ನಾನು ಎಲ್ಲರನ್ನೂ ಒಂದೇ ರೀತಿಯಿಂದ ನೋಡುವ ವ್ಯಕ್ತಿಯಲ್ಲ. ಕೆಲವು ವ್ಯಕ್ತಿಗಳನ್ನು ಕೆಲ ವಿಶಿಷ್ಟಕಾರಣಕ್ಕಾಗಿ ಗೌರವದಿಂದ ಕಾಣುತ್ತೇನೆ. ಮನುಷ್ಯನಿಗೆ ತಿಳಿವಳಿಕೆ ಕೊಡಬೇಕಾದದ್ದು ತಿಳಿವಳಿಕೆ ಇರುವ ಇನ್ನೊಬ್ಬ ಮನುಷ್ಯನ ಕರ್ತವ್ಯ ಎಂದರು.

ಗಾಂಧೀಜಿ ಒಬ್ಬರನ್ನೇ ಕುರಿತು ಚರ್ಚೆ ಮಾಡಿದರೆ ಅದು ವ್ಯರ್ಥ. ಮನುವಿನಿಂದ ಆರಂಭ ಮಾಡಬೇಕಿದೆ. ಮನುಸ್ಮೃತಿಯಲ್ಲಿ ಜಾತಿ ವ್ಯವಸ್ಥೆ ಆರಂಭದ ಉಲ್ಲೇಖಗಳಿದ್ದು, ಅದಕ್ಕೆ ನಾಲ್ಕೈದು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಮನುಸ್ಮೃತಿಯ 2500 ಶ್ಲೋಕಗಳಲ್ಲಿ ಬ್ರಾಹ್ಮಣರು, ಕ್ಷತ್ರಿಯರಿಗೆ ಸಿಂಹಪಾಲು ಇವೆ. ಒಂದೆರೆಡು ಶೂದ್ರರಿಗೆ ಸೇರಿದ್ದು, ಪಂಚಮರಿಗೆ ಪ್ರಸ್ತಾಪವೇ ಇಲ್ಲದಾಗಿದೆ ಎಂದು ಹೇಳಿದರು.

ಅರಮನೆಯಿಂದ ಹೊರಗಡೆ ಬಂದು ಮಾನವೀಯತೆಗೆ ಹೆಚ್ಚು ಒತ್ತು ಕೊಡುವ ನಿರ್ಣಯಗಳನ್ನು ಬುದ್ಧ ತೆಗೆದುಕೊಳ್ಳುವನು. 12ನೇ ಶತಮಾನದಲ್ಲಿ ಬಸಣ್ಣನವರು ಮನುಸ್ಮೃತಿಯ ತದ್ವಿರುದ್ಧ ನಿಯಮಗಳನ್ನು ತಾಳಿದರು. ತಮ್ಮ ವಚನ ಮಾತು ಕೃತಿಗಳಲ್ಲಿ ಜಾತಿಗಳ ಬಗ್ಗೆ, ಸ್ತ್ರೀ ಸಬಲೀಕರಣ, ಉಚ್ಚ-ನೀಚ ಜಾತಿ, ಕಾಯಕ, ಆಡಳಿತ, ಸಂಸದೀಯ ವ್ಯವಸ್ಥೆಯನ್ನು ಅಂದೇ ನೀಡಿದ್ದರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೈಗಂಬರ್‌ ನಾನು ದೇವರೆಂದು ಹೇಳದೆ ಪ್ರವಾದಿ ಎಂದು ಕೊಂಡು ಬದುಕಿನ ಕ್ರಮ ವಿವರಿಸಿದರು. ಮನುಸ್ಮೃತಿ ಹೇಳಿದ್ದು, ಪೈಗಂಬರ್‌ ಹೇಳಿದ್ದು ಬೇರೆಬೇರೆ. ಏಸುಕ್ರಿಸ್ತ ಜನರನ್ನು ಒಳ್ಳೆಯ ದಾರಿಗೆ ತರುವ ಬಗ್ಗೆ ಹೇಳುತ್ತಾನೆ. ಪೈಗಂಬರ್‌, ಏಸು, ಬಸವಣ್ಣನವರ ತರುವಾಯ ಗಾಂಧೀಜಿ ಬರುತ್ತಾರೆ. ಗಾಂಧೀ ಒಬ್ಬ ಮನೋವಿಜ್ಞಾನಿ. ಅರ್ಥಶಾಸ್ತ್ರದ ಪರಿಚಯವಿದ್ದ ವ್ಯಕ್ತಿ. ಮಾನವೀಯತೆ ಮತ್ತು ಸಮಾನತೆಯನ್ನು ಗೌರವಿಸುತ್ತಿದ್ದರು ಎಂದು ತಿಳಿಸಿದರು.

ಗಾಂಧೀಜಿ ಅಸ್ಪೃಶ್ಯತೆಯನ್ನು ಘೋರವಾದದು ಎಂದು ಕೊಂಡಿದ್ದರು. ಅಂಬೇಡ್ಕರ್‌ ಅವರು ಎಂದೂ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡಲಿಲ್ಲ. ಗಾಂಧೀಜಿ ಮತ್ತು ಅಂಬೇಡ್ಕರರ ಆಲೋಚನೆಗಳು ಒಂದೇ ಆಗಿದ್ದವು. ಧರ್ಮದ ಹೆಸರಿನಲ್ಲಿ ಆಗುತ್ತಿರುವ ಶೋಷಣೆಯ ಬಗ್ಗೆ ಅವರು ಹೇಳಿದರು. ಇಂದು ಗಾಂಧೀ ತತ್ವ ಗಾಳಿಗೆ ಹೋಗುತ್ತಿದೆ. ಆದರೆ ಗಾಂಧೀ ಪ್ರತಿಮೆಗಳು ಜಾಸ್ತಿಯಾಗುತ್ತವೆ. ಮಂತ್ರ ಹೆಚ್ಚಾದಂತೆಲ್ಲ ಉಗುಳು ಜಾಸ್ತಿಯಾಗುತ್ತದೆ ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ.ವೀರಭದ್ರಪ್ಪ ಮಾತನಾಡಿ, ಕಸ್ತೂರಿ ರಂಗನ್‌ ಅವರ ಅಧ್ಯಕ್ಷತೆಯಲ್ಲಿ 2019ರಲ್ಲಿ ಹೊಸ ಶಿಕ್ಷಣ ನೀತಿ ನಮ್ಮ ಕೈಗೆ ಬಂದಿದ್ದು, ಹೊಸ ಕ್ರಾಂತಿಯನ್ನು ಮಾಡಲಾಗಿದೆ. ಪಾಶ್ಚಿಮಾತ್ಯರು ನೂರಕ್ಕೆ ನೂರರಷ್ಟುಉನ್ನತ ಶಿಕ್ಷಣ ಪಡೆಯುತ್ತಾರೆ. ನಮ್ಮ ದೇಶದಲ್ಲಿ ಶೇ.14.8 ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎಂದರು.

ಕರ್ನಾಟಕದಲ್ಲಿ 64 ವಿಶ್ವವಿದ್ಯಾನಿಲಯಗಳಿವೆ. ಆದರೆ ಇನ್ನು 60 ವಿಶ್ವವಿದ್ಯಾನಿಲಯಗಳು ಬೇಕಿದೆ. ಕಸ್ತೂರಿರಂಗನ್‌ ಅವರು ಎಲ್ಲಾ ವಿಶ್ವವಿದ್ಯಾನಿಲಯಗಳ ಕೋರ್ಸ್‌ಗಳು ಸಂಯೋಜಿತವಾಗಿ ಬರಬೇಕು ಎಂದಿದ್ದಾರೆ. ಶಿಕ್ಷಣ ಸಮಾಜದ ಗತಿಯನ್ನು ಬದಲಾಯಿಸುತ್ತದೆ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ವಾಯತ್ತೆ ಕೊಡಬೇಕು. 2030ರ ವೇಳೆಗೆ ಎಲ್ಲ ಶಿಕ್ಷಣ ಕ್ಷೇತ್ರಗಳು ಒಂದಾಗಬೇಕು ಎಂಬುದು ಕಸ್ತೂರಿರಂಗನ್‌ ಅವರ ಅಭಿಲಾಷೆ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ ಮಾತನಾಡಿ, ಮುರುಘಾವಠದ ಪರಂಪರೆಯಲ್ಲಿ ಶ್ರೀಸಾಮಾನ್ಯ ಜನರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಇನ್ನೂ ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಪ್ರೇರಣೆಯಾಗಲಿದೆ. ಬಸವ ತತ್ತ$್ವದ ಬಗ್ಗೆ ಸೈದ್ಧಾಂತಿಕ ಬದ್ಧತೆಯನ್ನು ಹೊಂದಿದ ಎಲ್ಲಾ ಸ್ವಾಮೀಜಿಗಳಿಗಿಂತ ಡಾ.ಶಿವಮೂರ್ತಿ ಮುರುಘಾಶರಣರು ಅಪರೂಪದವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಾಗತಿಕ ಪಟ್ಟಿಯಲ್ಲಿ ಲಿಂಗಾಯತ ಧರ್ಮ ಸೇರ್ಪಡೆಗೊಳ್ಳಲಿ ಎಂದು ಆಶಿಸಿದರು.

ಡಾ.ರೇಖಾ ನರಸಿಂಹಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಡಾ.ಶಿವಮೂರ್ತಿ ಮುರುಘಾ ಶರಣರು, ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ವರ್ತಕ ಗುರುಸ್ವಾಮಿ ಉಪಸ್ಥಿತರಿದ್ದರು. ಕೆ.ಎಂ. ವೀರೇಶ್‌ ಸ್ವಾಗತಿಸಿ, ಉಮಾಶಂಕರ್‌ ನಿರೂಪಿಸಿದರು.