ಚಿಕ್ಕಮಗಳೂರು [ಅ.26]:  ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ದೇವೀರಮ್ಮನ ಬೆಟ್ಟವನ್ನು ಶನಿವಾರ ರಾತ್ರಿವೇಳೆ ಹತ್ತುವುದು ಸುರಕ್ಷಿತವಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಈ ಬಗ್ಗೆ ಒಂದು ಸೂಚನಾ ಪತ್ರ ಹೊರಡಿಸಿದ್ದು, ಬಿಂಡಿಗಾ ದೇವೀರಮ್ಮ ದರ್ಶನಕ್ಕಾಗಿ ಪ್ರತಿ ದೀಪಾವಳಿಯಲ್ಲಿ ನರಕಚತುರ್ದಶಿ ಹಿಂದಿನ ದಿನ ರಾತ್ರಿಯಿಂದಲೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬೆಟ್ಟಹತ್ತಲು ಆರಂಭಿಸುವುದು ವಾಡಿಕೆ. ಆದರೆ ಈ ವರ್ಷ ಮಳೆ ನಿರಂತರವಾಗಿದ್ದು, ಜೊತೆಗೆ ಕಳೆದೆರಡು ದಿನಗಳಿಂದ ಗಾಳಿ ಸಹ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟವನ್ನು ಭಾನುವಾರ ಬೆಳಗ್ಗೆಯಿಂದ ಹತ್ತಬೇಕೆಂದು ಭಕ್ತರಲ್ಲಿ ವಿನಂತಿಸಿದ್ದಾರೆ.

ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಹಾಗೂ ಬೆಟ್ಟಅತ್ಯಂತ ಕಡಿದಾದ ಎತ್ತರವಾದ ಇಳಿಜಾರು ಪ್ರದೇಶ ಆಗಿರುವುದರಿಂದ ಜನಸಂದಣಿ ಹೆಚ್ಚಾಗಿ ಇಳಿಜಾರು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಂಭವವಿದೆ.

ಹಿರಿಯ ಭೂವಿಜ್ಞಾನಿಗಳು ಸಹ ಶುಕ್ರವಾರ ಸ್ಥಳ ತನಿಖೆ ನಡೆಸಿ ವರದಿ ನೀಡಿದ್ದು, ಅವರು ಸಹ ಈ ಅಂಶವನ್ನು ದೃಢೀಕರಿಸಿ ಬೆಟ್ಟದ ತಪ್ಪಲಿನಿಂದ ತುದಿಯವರೆಗೆ ಕಡಿದಾದ ದಾರಿಯಿದೆ. ಬಲಭಾಗದಲ್ಲಿ ಪ್ರಪಾತವಿದೆ. 400 ರಿಂದ 500 ಮೀ. ದೂರದವರೆಗೆ ಎರಡು ಕೈಗಳ ಸಹಾಯದಿಂದ ಬೆಟ್ಟಹತ್ತಬೇಕಾಗಿದೆ. ಇದರಿಂದ ಈ ಪರಿಸ್ಥಿತಿಯಲ್ಲಿ ಅದು ಸುರಕ್ಷಿತವಲ್ಲ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾಲುದಾರಿಯಲ್ಲಿ ಬೆಟ್ಟದಲ್ಲಿ ಸಾಗಬೇಕಾಗಿರುವುದರಿಂದ ಮಳೆ ನೀರಿನಿಂದ ಸಡಿಲಗೊಂಡು ಕುಸಿಯುವ ಸಂಭವವಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿ, ಭಾರಿ ಮಳೆ ಬರಲಿದೆ ಎಂದು ಹೇಳಿದ್ದು, ರಾತ್ರಿ ವೇಳೆಯಲ್ಲಿ ಬೆಟ್ಟಹತ್ತುವುದು ಸುರಕ್ಷಿತವಲ್ಲ ಎಂದು ತಿಳಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ಅವರು ಶನಿವಾರ ರಾತ್ರಿ ಕತ್ತಲಲ್ಲಿ ಬೆಟ್ಟಹತ್ತುವ ಬದಲು ಭಾನುವಾರ ಬೆಳಗಿನಿಂದ ಬೆಟ್ಟಹತ್ತಬೇಕೆಂದು ಮನವಿ ಮಾಡಿ, ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯಪೀಡಿತರು ಮತ್ತು ದೈಹಿಕ ಅಸಮರ್ಥರು ಬೆಳಗಿನ ಸಮಯದಲ್ಲು ಸಹ ಬೆಟ್ಟಹತ್ತುವುದನ್ನು ನಿಲ್ಲಿಸಬೇಕೆಂದು ವಿನಂತಿಸಿದ್ದಾರೆ.