ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದು, ಕಾರಣ ಇಲ್ಲಿದೆ.
ಚಿಕ್ಕಮಗಳೂರು (ಅ.26): ತಾಲೂಕು ಮಲ್ಲೇನಹಳ್ಳಿಯ ಬಿಂಡಿಗ ಗ್ರಾಮದಲ್ಲಿ ಆದಿಶಕ್ತ್ಯಾತ್ಮಕ ಶ್ರೀದೇವಿರಮ್ಮ ಅವರ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮತ್ತು ಸಾರ್ವಜನಿಕರು ಆಗಮಿಸಲಿದೆ.
ಕೆಲವರು ಮದ್ಯಪಾನ ಮಾಡಿ, ಶಾಂತಿಯನ್ನು ಕದಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ಸಾರ್ವಜನಿಕರ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಚಿಕ್ಕಮಗಳೂರು ತಾಲ್ಲೂಕು, ಮಲ್ಲೇನಹಳ್ಳಿ ಮತ್ತು ಹೊಸಪೇಟೆ ಗ್ರಾಮ ಸೇರಿದಂತೆ ಸುತ್ತಮುತ್ತ 10 ಕೀ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿಗಳನ್ನು ಅ.26 ರಂದು ಮಧ್ಯಾಹ್ನ 2 ಗಂಟೆಯಿಂದ ಅ.27ರಂದು ಮಧ್ಯಾಹ್ನ 2 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಮದ್ಯ, ಬೀಯರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.