ಶಾಸಕರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ಕೈಗೊಳ್ಳಿ: ಮಾಜಿ ಸಚಿವ ಜೀವರಾಜ್ ಆಗ್ರಹ
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು
ಶಾಸಕರಿಗೆ ಕೆಲವೇ ತಿಂಗಳಲ್ಲಿ 124 ಕೋಟಿ ರೂ. ಸಾಲ ತೀರಸಲು ಹಣ ಎಲ್ಲಿಂದ ಬಂತು
ಸ್ಥಳೀಯವಾಗಿ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ಕೈಗೊಳ್ಳುವಂತೆ ಮಾಜಿ ಸಚಿವ ಜೀವರಾಜ್ ಒತ್ತಾಯ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.23): ನೂರಾರು ಕೋಟಿ ರೂ. ಬೆಲೆ ಬಾಳುವ ಅಕ್ರಮ ಆಸ್ತಿ ಖರೀದಿ ಸಂಬಂಧ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರ ವಿರುದ್ಧ ಬೆಂಗಳೂರಿನ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವ ಡಿ.ಎನ್. ಜೀವರಾಜ್ ಆಗ್ರಹಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೇಹೊನ್ನೂರಿನ ಶಾಬಾನ್ ರಂಜಾನ್ ಟ್ರಸ್ಟ್ ಹೆಸರಿನಲ್ಲಿದ್ದ 211 ಎಕರೆಗೂ ಹೆಚ್ಚು ತೋಟ 27.12.2019 ರಂದು ರಾಜೇಗೌಡರ ಪತ್ನಿ ಹಾಗೂ ಮಗನ ಹೆಸರಿಗೆ ವರ್ಗಾವಣೆ ಆಗಿದೆ. ಹಿಂದೆ ಇದ್ದ 4 ಜನ ಟ್ರಸ್ಟಿಗಳು ನಿವೃತ್ತಾಗಿದ್ದಾರೆ. ಈ ಕಾರಣಕ್ಕೆ ಪತ್ನಿ ಮತ್ತು ಮಗ ಈಗ ಮಾಲೀಕರಾಗಿದ್ದಾರೆ. ಆದರೆ ಶಾಸಕ ಟಿ.ಡಿ.ರಾಜೇಗೌಡ ಅವರು ಲೋಕಾಯುಕ್ತ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವರ್ಷಕ್ಕೆ 35 ಲಕ್ಷ ರೂ. ತಮ್ಮ ಆದಾಯೆಂದು ಹೇಳಿದ್ದಾರೆ ಹಾಗಾದರೆ ಇಷ್ಟು ದೊಡ್ಡ ಮೊತ್ತದ ಆಸ್ತಿ ಖರೀದಿಸಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
Karnataka Assembly Election 2023: ಮೀಸಲಾತಿ ಹೆಚ್ಚಳ, ಕಾಫಿನಾಡಲ್ಲಿ ಹಳ್ಳಿಗೆ ಹಳ್ಳಿಯೇ ಬಿಜೆಪಿ ಸೇರ್ಪಡೆ!
ರಿಲೀಸ್ ಡೀಡ್ ಗೆ ಹಣ ಎಲ್ಲಿಂದ ಬಂತು?
ಶಾಬಾನ್ ರಂಜಾನ್ ಟ್ರಸ್ಟ್ ಮೇಲೆ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನಲ್ಲಿ 58 ಕೋಟಿ ರೂ., ಬೆಂಗಳೂರು ಕೆಜಿ ರಸ್ತೆ ಬ್ಯಾಂಕ್ ಆಫ್ ಬರೋಡದಲ್ಲಿ 66 ಕೋಟಿ ರೂ. ಹಾಗೂ ಕರ್ನಾಟಕ ಬ್ಯಾಂಕ್ ಸೇರಿ ಒಟ್ಟು 124 ಕೋಟಿ ರೂ. ಸಾಲವಿದೆ. ಆದರೆ ಶಾಸಕರು ಮತ್ತು ಪತ್ನಿ ಹಾಗೂ ಮಗ ಪಾಲುದಾರರಾದ ಮೇಲೆ ಕಳೆದ ಫೆಬ್ರವರಿಯಲ್ಲಿ 124 ಕೋಟಿ ರೂ. ಸಾಲ ತೀರಿದೆ ಎಂದು ಎನ್ಆರ್ಪುರ ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ರಿಲೀಸ್ ಡೀಡ್ ಮಾಡಿಸಲಾಗಿದೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಶಾಸಕರು ಲೋಕಾಯುಕ್ತಕ್ಕೆ ಹಾಕಿರುವ ಪ್ರಮಾಣಪತ್ರದಲ್ಲಿ ಇದು ನಮಗೆ ಸೇರಿದ ಸಂಸ್ಥೆ ಎಂದಾಗಲಿ ನಮ್ಮ ಕುಟುಂಬದವರು ಇದರಲ್ಲಿ ಪಾಲುದಾರರಾಗಿದ್ದಾರೆ ಎನ್ನುವುದನ್ನಾಗಲಿ ತಿಳಿಸಿಲ್ಲ. ಮತ್ತು ಹಣದ ಮೂಲವನ್ನೂ ತೋರಿಸಿಲ್ಲ. ಅಲ್ಲದೆ ಪ್ರತಿ ವರ್ಷ 35 ಲಕ್ಷ ರೂ.ಇದ್ದ ಅದಾಯ ಶಾಸಕ ರಾದ ನಂತರ 1ವರ್ಷ 6 ತಿಂಗಲಲ್ಲಿ 124ಕೋಟಿ ರೂ. ನಷ್ಟು ಸಾಲ ತೀರಿಸಿದ್ದು ಹೇಗೆ? ಇದನ್ನು ಲೋಕಾಯುಕ್ತಕ್ಕೆ ಮುಚ್ಚಿಟ್ಟಿದ್ದು ಏಕೆ ಎಂದರು.
ಸರ್ಕಾರಕ್ಕೆ ತೆರಿಗೆ ವಂಚನೆ: ಈ 124 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕಟ್ಟಬೇಕಾದ ದೊಡ್ಡ ಮೊತ್ತದ ತೆರಿಗೆ ಕಟ್ಟದೆ ವಂಚಿಸಿರುವುದು ಕಂಡು ಬರುತ್ತದೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. 124 ಕೋಟಿ ರೂ. ಸಾಲವೇ ಇದ್ದರೆ ಅದು ಕನಿಷ್ಟ 200 ಕೋಟಿ ರೂ.ನ ಆಸ್ತಿ ಆಗಿಲ್ಲದೆ ಅಷ್ಟು ಸಾಲ ಸಿಗಲು ಸಾಧ್ಯವೂ ಇಲ್ಲ. ಈ ಕಾರಣದಿಂದಾಗಿ ಕ್ಷೇತ್ರಕ್ಕೆ ಬಿಡುಗಡೆ ಆಗದ ಅನುದಾನದಲ್ಲಿ ಭ್ರಷ್ಟಾಚಾರ ಮಾಡಿ ಗಳಿಸಿದ್ದೋ, ಇನ್ನಾವ ಮೂಲ ಎನ್ನುವುದನ್ನು ಹೇಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪದ ಸಿ.ಪಿ. ವಿಜಯಾನಂದ ಎಂಬುವವರು ಬೆಂಗಳೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಕ್ರಮವಾಗಿ ಆಸ್ತಿ ಖರೀದಿಸಿದ್ದೂ ಅಲ್ಲದೆ, ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ವಂಚಿಸಿರುವ ಆರೋಪದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ, ಸಹ ವಕ್ತಾರ ಕವಿತಾ ಶೇಖರ್ ಇದ್ದರು.