ಚಿಕ್ಕಮಗಳೂರಲ್ಲೂ ಇದ್ದಾರಾ ಬಾಂಗ್ಲಾ ವಲಸಿಗರು?

ಚಿಕ್ಕಮಗಳೂರು ಜಿಲ್ಲೆಯ ಕಾಫಿತೋಟಗಳಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳ 5 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2016ರಲ್ಲಿ ಇಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬರ ಸುಳಿವು ಪತ್ತೆಯಾದ ಬಳಿಕ ಈ ರೀತಿ ವಲಸೆ ಬರುತ್ತಿರುವ ಕಾರ್ಮಿಕರ ಮೂಲದ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. 

Chikkamagaluru Also Give Shelter To Bangladeshi immigrants

ಆರ್‌.ತಾರಾನಾಥ್‌

ಚಿಕ್ಕಮಗಳೂರು [ನ.04]:  ಸ್ಥಳೀಯ ಕಾರ್ಮಿಕರ ಅಲಭ್ಯತೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕಾಫಿತೋಟಗಳಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳ 5 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2016ರಲ್ಲಿ ಇಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬರ ಸುಳಿವು ಪತ್ತೆಯಾದ ಬಳಿಕ ಈ ರೀತಿ ವಲಸೆ ಬರುತ್ತಿರುವ ಕಾರ್ಮಿಕರ ಮೂಲದ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಹೀಗೆ ಬಂದವರಲ್ಲಿ ಆಧಾರ್‌, ಮತದಾರರ ಚೀಟಿಗಳು ಇರುತ್ತವೆಯಾದರೂ ಅವುಗಳಲ್ಲಿ ಯಾವುದು ಅಸಲಿ, ಯಾವುದು ನಕಲಿ? ಇವರು ನಿಜಕ್ಕೂ ಈಶಾನ್ಯ ರಾಜ್ಯದವರೇ ಇಲ್ಲಾ ಅಕ್ರಮವಾಗಿ ಬಾಂಗ್ಲಾದಿಂದ ಬಂದವರೇ ಎಂದು ಗುರುತಿಸುವುದೇ ಕಷ್ಟಕರವಾಗಿ ಪರಿಣಮಿಸಿದೆ.

ಬಾಂಗ್ಲಾದಿಂದ ನುಸುಳುಕೋರರು ನೆರೆಯ ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ಬಂದು ಅಲ್ಲಿಂದ ನಮ್ಮ ದೇಶದ ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕಾಗಿ ತೆರಳುತ್ತಿದ್ದಾರೆ. 2016ರಲ್ಲಿ ಉಪ್ಪಳ್ಳಿ ಬಡಾವಣೆಯಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ವಾಸವಾಗಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆತನನ್ನು ವಾಪಸ್‌ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿತ್ತು. ಹೀಗಾಗಿ ಕಾಫಿನಾಡಿನಲ್ಲೂ ಬಾಂಗ್ಲಾ ನುಸುಳುಕೋರರ ಇರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಜಿಲ್ಲೆಯ ನೋಂದಾಯಿತ ಕಾಫಿತೋಟಗಳಲ್ಲಿ ಸುಮಾರು 14 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದ್ದಾರೆ. ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಳೆದ 3 ವರ್ಷಗಳಿಂದ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳಿಂದ ಕಾರ್ಮಿಕರು ವಲಸೆ ಬರುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಈಶಾನ್ಯ ರಾಜ್ಯಗಳಿಂದ ಕೂಲಿ ಕಾರ್ಮಿಕರು ಇಲ್ಲಿಗೆ ವಲಸೆ ಬರುತ್ತಿದ್ದಾರೆ. ಅಂದಾಜಿನ ಪ್ರಕಾರ ಈ ಸಂಖ್ಯೆ 5 ಸಾವಿರ ದಾಟಿರಬಹುದು. ಇವರಲ್ಲಿ ಹೆಚ್ಚಿನವರು ಅಸ್ಸಾಂ ರಾಜ್ಯದವರು.

ಗುರುತಿನ ಚೀಟಿ ಅಸಲಿ:

ಕೆಲಸ ಕೇಳಿಕೊಂಡು ಬರುವ ಇಂತಹ ವಲಸಿಗ ಕೂಲಿ ಕಾರ್ಮಿಕರ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಿ, ಅವುಗಳ ಜೆರಾಕ್ಸ್‌ ಪ್ರತಿಗಳು ಹಾಗೂ ಪೋಟೋ ಪಡೆದುಕೊಂಡು ಕೆಲಸ ಕೊಡಲಾಗುತ್ತಿದೆ. ಆದರೆ ಅಸ್ಸಾಂನಲ್ಲಿ ನಕಲಿ ಆಧಾರ್‌ ಕಾರ್ಡ್‌ಗಳ ಹಾವಳಿ ಅತಿಯಾಗಿದೆ. ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದು ಅಲ್ಲಿ ಕೆಲವು ದಿನ ವಾಸವಾಗಿ ನಕಲಿ ಆಧಾರ್‌ ಕಾರ್ಡ್‌ ಮಾಡಿಸಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕಾಗಿ ಬರುತ್ತಿದ್ದಾರೆ. ಆದುದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಬಂದಿರುವ ಎಲ್ಲರೂ ಅಸ್ಸಾಂ, ಪಶ್ಚಿಮ ಬಂಗಾಳದವರೇ ಎಂದು ಖಾತ್ರಿ ಪಡಿಸುವುದು ಕಷ್ಟದ ಕೆಲಸ.

ಜಿಲ್ಲೆಯ ಕಡೂರು ಹಾಗೂ ತರೀಕೆರೆ ತಾಲೂಕುಗಳು ಹೊರತುಪಡಿಸಿ ಇನ್ನುಳಿದ 5 ತಾಲೂಕುಗಳಲ್ಲಿರುವ ಕಾಫಿ ತೋಟಗಳ ಮಾಲಿಕರು ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಆಯಾಯ ಪೊಲೀಸ್‌ ಠಾಣೆಗೆ ನೀಡುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ವಲಸೆ ಕಾರ್ಮಿಕರು ಕೊಟ್ಟಿರುವ ಆಧಾರ್‌ ಕಾರ್ಡ್‌ಗಳಲ್ಲಿ 15 ಕಾರ್ಡ್‌ಗಳ ಬಗ್ಗೆ ಅನುಮಾನ ಬಂದಿದ್ದರಿಂದ ಅವುಗಳನ್ನು ಪರಿಶೀಲಿಸಲು ಅಸ್ಸಾಂಗೆ ಜಿಲ್ಲಾ ಪೊಲೀಸ್‌ ಇಲಾಖೆ ಕಳುಹಿಸಿಕೊಟ್ಟಿದ್ದು, ಅವುಗಳಲ್ಲಿ 7 ಕಾರ್ಡಗಳು ನಕಲಿ ಎಂಬುದು ಗೊತ್ತಾಗುತ್ತಿದ್ದಂತೆ ಅವರು ಜಿಲ್ಲೆಯನ್ನು ಬಿಟ್ಟು ಹೋಗಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಕಾಫಿ ತೋಟಗಳೇ ನೆಚ್ಚಿನ ತಾಣಗಳೇಕೆ?

ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗಗಳಲ್ಲಿರುವ ಕಾಫಿ ತೋಟಗಳಲ್ಲಿ ಕಾರ್ಮಿಕರ ಸಮಸ್ಯೆ ಇದೆ. ಸ್ಥಳೀಯವಾಗಿ ಕಾರ್ಮಿಕರು ಲಭ್ಯವಾಗುತ್ತಿಲ್ಲ. ಅಲ್ಲದೆ ಸಿಕ್ಕರೂ ಅವರು ಮನೆಯಿಂದ ಕಾಫಿತೋಟಕ್ಕೆ ಬರಲು ಸಮಯ ತಗಲುತ್ತದೆ. ಹೀಗಾಗಿ ಕಾಫಿ ತೋಟದ ಮಾಲಿಕರು ವಲಸಿಗ, ಗುಳೆ ಬಂದ ಕಾರ್ಮಿಕರನ್ನೇ ಹೆಚ್ಚು ನೆಚ್ಚಿದ್ದಾರೆ. ಸ್ಥಳೀಯ ಕಾರ್ಮಿಕರಿಗೂ ವಲಸಿಗರಿಗೂ ಕೂಲಿಯಲ್ಲೇನೂ ವ್ಯತ್ಯಾಸವಿಲ್ಲ. ಆದರೆ ವಲಸಿಗರು ಯಥೇಚ್ಛ ಸಂಖ್ಯೆಯಲ್ಲಿ ದೊರೆಯುವುದರೊಂದಿಗೆ ವಸತಿ ವ್ಯವಸ್ಥೆ ಮಾಡಿಕೊಟ್ಟರೆ ಹೆಚ್ಚು ಹೊತ್ತು ಕೆಲಸಕ್ಕೂ ಲಭ್ಯವಿರುತ್ತಾರೆ. ಹೀಗಾಗಿ ಕಾಫಿತೋಟದ ಮಾಲಿಕರು ತೋಟದೊಳಗೇ ಲೈನ್‌ ಮನೆಗಳನ್ನು ನಿರ್ಮಿಸಿಕೊಡುತ್ತಾರೆ. ಲೈನ್‌ಮನೆ ದೊರಕುವುದರಿಂದ ವಲಸಿಗರಿಗೆ ಉದ್ಯೋಗದೊಂದಿಗೆ ವಸತಿ ಸಮಸ್ಯೆಯೂ ನೀಗುತ್ತದೆ.

ಜಿಲ್ಲೆಯಲ್ಲಿ ಬಾಂಗ್ಲಾದೇಶದರೆಂದು ಹೇಳುವ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಇಲ್ಲಿನ ಕಾಫಿ ತೋಟಗಳಲ್ಲಿ ಕೆಲಸಕ್ಕೆ ಬರುತ್ತಿರುವ ಕೂಲಿ ಕಾರ್ಮಿಕರಿಂದ ಆಧಾರ್‌ ಕಾರ್ಡ್‌, ಗ್ರಾಮದ ವಾಸದ ದೃಢೀಕರಣ ಪತ್ರ ಹಾಗೂ ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ತೋಟಗಳ ಮಾಲಿಕರಿಗೆ ಸೂಚನೆ ನೀಡಲಾಗಿದೆ

- ಹರೀಶ್‌ ಪಾಂಡೆ, ಎಸ್ಪಿ

ಕಳೆದ 2 ವರ್ಷಗಳಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಅಸ್ಸಾಂ ರಾಜ್ಯದಿಂದ ಕಾರ್ಮಿಕರು ಬರುತ್ತಿದ್ದಾರೆ. ಅವರನ್ನು ಕೆಲಸಕ್ಕೆ ಸೇರಿಕೊಳ್ಳುವಾಗ ಬರೀ ಆಧಾರ್‌ ಕಾರ್ಡ್‌ ಮಾತ್ರವಲ್ಲ ಎನ್‌ಆರ್‌ಸಿ (ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌) ಕಾರ್ಡನ್ನು ಪರಿಶೀಲಿಸಿ ಅದರ ಜೆರಾಕ್ಸ್‌ ಪ್ರತಿ ಪಡೆದು, ಪಾಸ್‌ ಪೋರ್ಟ್‌ ಭಾವಚಿತ್ರ ತೆಗೆದುಕೊಳ್ಳಲಾಗುತ್ತಿದೆ.

- ಎಂ.ಎಸ್‌.ಭೋಜೇಗೌಡ, ಅಧ್ಯಕ್ಷರು, ಕಾಫಿ ಮಂಡಳಿ

Latest Videos
Follow Us:
Download App:
  • android
  • ios