ಚಾಮರಾಜನಗರ(ನ.13): ಹನೂರು ತಳಮಟ್ಟದ ಸೇತುವೆಗಳಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಬಂಡ್ ಕೊಚ್ಚಿ ಹೋಗಿದ್ದು, ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಗಳಿಂದ ಗ್ರಾಮಗಳಿಗೆ ತೆರಳಲು ಗಂಟೆಗಟ್ಟಲೇ ಕಾಯುವಂತ ಸ್ಥಿತಿ ನಿರ್ಮಾಣ ವಾಗಿದೆ. ಹಲವಾರು ವರ್ಷಗಳಿಂದ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ಮನವಿಗೆ ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಸಕ್ತಿ ಕೊರೆತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ತಳಮಟ್ಟದ ಸೇತುವೆಗಳು: ಹನೂರಿನ ವಿವಿಧ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆಗಳಲ್ಲಿ ಸಿಗುವ ಹಳೇ ಕಾಲದ ತಳಮಟ್ಟದ ಸೇತುವೆಗಳು ಅಳಿವಿ ನಂಚಿನಲ್ಲಿದ್ದು, ಹನೂರು ಪಟ್ಟಣದಿಂದ ಚಿಂಚಳ್ಳಿ ಗ್ರಾಮಕ್ಕೆ ತೆರಳಬೇಕಾದರೆ ಈ ಮಾರ್ಗದಲ್ಲಿ ಸಿಗುವ ಸ್ವಾಮಿಹಳ್ಳ, ಬರಹಳ್ಳ, ದೊಡ್ಡಳ್ಳ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಈ ಗ್ರಾಮ ಸೇರಿದಂತೆ ಚಂಗವಾಡಿ, ಮಣಗಳ್ಳಿ, ಬಂಡಳ್ಳಿ, ಶಾಗ್ಯ ಇನ್ನಿತರ ಗ್ರಾಮಗಳಿಗೆ ತೆರಳಲು ಸಿಗುವ ಮಾರ್ಗಮಧ್ಯೆದಲ್ಲಿ ಹಳೇ ಕಾಲದ ತಳಮಟ್ಟದ ಸೇತುವೆಗಳಿರುವುದರಿಂದ ಗ್ರಾಮಸ್ಥರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಪ್ಲಾಸ್ಟಿಕ್ ಕ್ಯಾನ್ ತ್ಯಾಜ್ಯದಿಂದ 'ಸುಲಭ್' ಶೌಚಾಲಯ

ಕೊಚ್ಚಿ ಹೋದ ಸೇತುವೆ ಬಂಡ್:

ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿದ ಹಳ್ಳಗಳು, ಚಿಂಚಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ಸಿಗುವ ಸ್ವಾಮಿಹಳ್ಳ ಸೇತುವೆ ಬಳಿ ಬಾರಿ ಕಂದಕ ನಿರ್ಮಾಣವಾಗಿದೆ. ಜೊತೆಗೆ ಇದೇ ಮಾರ್ಗವಾಗಿ ತೆರಳುವ ರಸ್ತೆಯಲ್ಲಿ ಬರಹಳ್ಳಕ್ಕೆ ನಿರ್ಮಾಣ ಮಾಡಿರುವ ಹಳೇ ಕಾಲ ಸೇತುವೆ ಮೇಲೆ ಇತ್ತೀಚೆಗೆ ಹಳ್ಳದ ನೀರಿನ ರಭಸಕ್ಕೆ ಸೇತುವೆ ಬಂಡ್‌ಗೆ ಹಾಕಲಾಗಿದ್ದ ಕಲ್ಲುಗಳು ಕೊಚ್ಚಿಹೋಗಿ ಕಂದಕ ನಿರ್ಮಾಣವಾಗಿದೆ.

ತುಂಬಿ ಹರಿಯುವ ಹಳ್ಳಗಳು:

ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಗಳಿಂದ ಈ ಭಾಗದ ವಿವಿಧ ಗ್ರಾಮಗಳಿಂದ ಹನೂರು ಪಟ್ಟಣ ಸೇರಿದಂತೆ ಕೆಲಸ ಕಾರ್ಯಗಳಿಗೆ ಬರುವ ಗ್ರಾಮಸ್ಥರು ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಗಳಿಂದ ಗ್ರಾಮಗಳಿಗೆ ತೆರಳ ಲಾಗದೇ ಗಂಟೆಗಟ್ಟಲೇ ಕಾಯುವಂತ ಸ್ಥಿತಿ ಉಂಟಾಗಿದೆ. ಜೊತೆಗೆ ಈ ಭಾಗದಲ್ಲಿ ಹರಿಯುವ ಹಳ್ಳಗಳು ತಳಮಟ್ಟದ ಸೇತುವೆಗಳಾಗಿವೆ. ಈ ಹಿಂದೆ ಮಣಗಳ್ಳಿ ಗ್ರಾಮದ ನಿವಾಸಿ ಚಂಗವಾಡಿ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಇಳಿಯದೇ ವಾಹನದಲ್ಲಿ ತೆರಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಆತನ ಮೃತದೇಹವು ಸಹ ಕುಟುಂಬಸ್ಥರಿಗೆ ಸಿಕ್ಕಿರುವುದಿಲ್ಲ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಳಮಟ್ಟದ ಸೇತುವೆಗಳನ್ನು ತೆಗೆದು ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿಗೆ ಸ್ಪಂದಿಸುದಿರುವುದಿಲ್ಲ ಎಂದು ಆರೋಪಿಸಿದ್ದಾರೆ.  

-ಜಿ. ದೇವರಾಜ್‌ನಾಯ್ಡು