Asianet Suvarna News Asianet Suvarna News

ಕನ್ನಡ ಸೇರಿ 13 ಭಾಷೆಗಳಲ್ಲಿ ಎಸ್‌ಎಸ್‌ಸಿ ಪರೀಕ್ಷೆ: ಕೇಂದ್ರದಿಂದ ಅಧಿಕೃತ ಆದೇಶ

11,400 ಕೇಂದ್ರ ಸರ್ಕಾರಿ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ನಡೆಯಲಿದ್ದು, ಇಂಗ್ಲೀಷ್‌, ಹಿಂದಿ ಜತೆ ಕನ್ನಡ ಸೇರಿ 13 ಭಾಷೆಗಳಲ್ಲಿ ಅವಕಾಶ ನೀಡಲಾಗಿದೆ. ಈ ಮೂಲಕ ಕನ್ನಡ ಹೋರಾಟಗಾರರ ಕೂಗಿಗೆ ಮೊದಲ ಯಶಸ್ಸು ಲಭಿಸಿದೆ. 

in a first ssc to conduct multi tasking staff exam in 13 languages ash
Author
First Published Jan 21, 2023, 9:14 AM IST

ನವದೆಹಲಿ: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದ (ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌) ವಿವಿಧ ಇಲಾಖೆಯ ಎಲ್ಲಾ ಪರೀಕ್ಷೆಗಳು ನಮ್ಮ ಮಾತೃಭಾಷೆಯಾದ ಕನ್ನಡದ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿವೆ. ಈ ಕುರಿತು ನರೇಂದ್ರ ಮೋದಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅಧಿಕೃತ ಘೋಷಣೆ ಮಾಡಿದ್ದಾರೆ.

ಪ್ರಲ್ಹಾದ ಜೋಶಿ (Pralhad Joshi) ಟ್ವೀಟ್‌ ಮಾಡಿ, ‘ಇನ್ನು ಮುಂದೆ ಎಸ್‌ಎಸ್‌ಸಿಯ (SSC) ಎಲ್ಲ ಪರೀಕ್ಷೆಗಳು (Exams) ನಮ್ಮ ಮಾತೃಭಾಷೆಯಾದ (Mother Tongue) ಕನ್ನಡದಲ್ಲಿಯೇ (Kannada) ನಡೆಯಲಿವೆ. ಈ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಯುಜಿಸಿ (UGC) ವ್ಯಾಪ್ತಿಯಲ್ಲಿ ಬರುವ ಎಲ್ಲ ವಿವಿ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು (Common Entrance Test) ಕನ್ನಡದಲ್ಲಿ ನಡೆಸಲಾಗುತ್ತಿದೆ. ಇದರಿಂದ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದಿದ್ದಾರೆ ಹಾಗೂ ಈ ನಿರ್ಣಯ ಕೈಗೊಂಡ ಪ್ರಧಾನಿಗೆ (Prime Minister) ಧನ್ಯವಾದ ತಿಳಿಸಿದ್ದಾರೆ.

ಇದನ್ನು ಓದಿ: SSC Exam In Kannada: 11,400 ಕೇಂದ್ರ ಸರ್ಕಾರಿ ಹುದ್ದೆಗೆ ಕನ್ನಡದಲ್ಲೂ ಪರೀಕ್ಷೆ

ಕಸಾಪ ಅಧ್ಯಕ್ಷ ಜೋಶಿ ಸ್ವಾಗತ

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ(ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.

ಕನ್ನಡವೂ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯುವುದಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕಾನೂನು ಕ್ರಮ ಸೇರಿದಂತೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದಿ, ಇಂಗ್ಲಿಷಲ್ಲಿ ಮಾತ್ರ ಎಸ್‌ಎಸ್‌ಸಿ: ಕನ್ನಡಿಗರ ವಿರೋಧ

ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಬಯಸುವ ಕನ್ನಡಿಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಬರೆಯುವುದು ಕಷ್ಟವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯಾ ಪ್ರಾದೇಶಿಕ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಬ್ಯಾಂಕಿಂಗ್‌ ಸೇರಿದಂತೆ ಇತರ ಪರೀಕ್ಷೆಗಳಿಗೂ ಕನ್ನಡ ಭಾಷೆಯಲ್ಲೇ ಬರೆಯಲು ಅವಕಾಶ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅರುಣ್‌ ಜಾವಗಲ್‌ ಸಂತಸ
ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಿರುವುದಕ್ಕೆ ಕನ್ನಡಪರ ಹೋರಾಟಗಾರ ಅರುಣ್‌ ಜಾವಗಲ್‌ ಸಂತಸ ವ್ಯಕ್ತಪಡಿಸಿದ್ದು, ಕನ್ನಡಪರ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇಂಗ್ಲಿಷ್‌, ಹಿಂದಿಯಲ್ಲಿ ಮಾತ್ರ ಇರುತ್ತಿದ್ದ ಪರೀಕ್ಷೆ ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 15 ಭಾಷೆಯಲ್ಲಿ ನಡೆಸಲಾಗುತ್ತಿದೆ. ಇದು ಮೊದಲ ಯಶಸ್ಸು. ಆಯಾ ರಾಜ್ಯದ ಹುದ್ದೆಗಳಿಗೆ ಆಯಾ ರಾಜ್ಯದವರನ್ನೇ ಆಯ್ಕೆ ಮಾಡಬೇಕು ಎನ್ನುವ ಹೋರಾಟವನ್ನು ಮುಂದುವರೆಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇವಲ 3% ಕನ್ನಡಿಗರಿಗಷ್ಟೇ ಐಎಎಸ್‌, ಐಪಿಎಸ್‌ ಹುದ್ದೆ..!

ಕನ್ನಡಪ್ರಭದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ, ಈ ಹಿಂದೆ ರೈಲ್ವೆ ಇಲಾಖೆಯಲ್ಲೂ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕಿತ್ತು. ಆ ನಂತರ ಕರವೇ ಹೋರಾಟದಿಂದ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತ್ತು. ಇದೀಗ ಕನ್ನಡ ಪರ ಹೋರಾಟಗಾರರ ಹೋರಾಟದ ದೆಸೆಯಿಂದ ಎಸ್‌ಎಸ್‌ಸಿಗೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಆದರೂ ಬ್ಯಾಂಕಿಂಗ್‌ ಸೇರಿದಂತೆ ಇತರೆ ಹುದ್ದೆಗಳಿಗೂ ಕೇಂದ್ರ ಸರ್ಕಾರ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಈ ಮೂಲಕ ಕನ್ನಡಿಗರಿಗೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹುದ್ದೆ ಗಳಿಸಲು ಸಹಕರಿಸಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios