ಬ್ಯಾಂಕ್ ಆಫ್ ಬರೋಡಾದ ಪ್ರೊಬೇಷನರಿ ಅಧಿಕಾರಿಯೊಬ್ಬರು ತಮ್ಮ 40 ದಿನಗಳ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದು, ಅದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ 98,745 ರೂ. ಸಂಬಳ ಮತ್ತು ಪೆಟ್ರೋಲ್ ಭತ್ಯೆ, ವಸತಿ ಸೌಲಭ್ಯದಂತಹ ಅನೇಕ ಸೌಲಭ್ಯಗಳ ವಿವರಗಳನ್ನು ನೀಡಿದ್ದಾರೆ.

ನವದೆಹಲಿ (ಏ.28): ಸಾರ್ವಜನಿಕ ವಲಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಇಂದಿಗೂ ಅನೇಕರ ಕನಸು. ಇದಕ್ಕೆ ಸಾಕ್ಷಿ ಎಂಬಂತೆ, ಬ್ಯಾಂಕ್ ಆಫ್ ಬರೋಡಾದ (BoB) ಪ್ರೊಬೇಷನರಿ ಆಫೀಸರ್ (PO) ಒಬ್ಬರು ತಮ್ಮ ಮೊದಲ ತಿಂಗಳ ವೇತನ ಮತ್ತು ಸಿಗುವ ಸೌಲಭ್ಯಗಳ ವಿವರವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಂಕಜ್ ಕುಮಾರ್ ದಾಸ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಬ್ಯಾಂಕ್ ಉದ್ಯೋಗದ ಆರ್ಥಿಕ ಭದ್ರತೆ ಮತ್ತು ವೈಭೋಗದ ಜೀವನಶೈಲಿಯನ್ನು ತೆರೆದಿಟ್ಟಿದ್ದಾರೆ.

ವೇತನದ ವಿವರ ಹೀಗಿದೆ

ಪಂಕಜ್ ದಾಸ್ ತಮ್ಮ 2025ರ ಮೇ ತಿಂಗಳ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಕೈಗೆ ಬಂದ ಒಟ್ಟು ಮೊತ್ತ (In-hand salary) 98,745 ರೂಪಾಯಿ. ಆದರೆ, ಈ ಮೊತ್ತವು ಕೇವಲ ಒಂದು ತಿಂಗಳದ್ದಲ್ಲ, ಬದಲಾಗಿ 40 ದಿನಗಳ ಕೆಲಸದ ಸಂಬಳ ಎಂದು ಅವರು ನಂತರ ಸ್ಪಷ್ಟಪಡಿಸಿದ್ದಾರೆ. ಸಂಬಳದ ಸ್ಲಿಪ್‌ನಲ್ಲಿ ಮೂಲ ವೇತನ (Basic Pay), ಮನೆ ಬಾಡಿಗೆ ಭತ್ಯೆ (HRA), ತುಟ್ಟಿಭತ್ಯೆ (DA) ಸೇರಿದಂತೆ ವಿವಿಧ ಕಡಿತಗಳ ನಂತರದ ವಿವರವಾದ ಅಂಕಿಅಂಶಗಳನ್ನು ನೀಡಲಾಗಿದೆ.

ಸೌಲಭ್ಯಗಳ ಸುರಿಮಳೆ

ಕೇವಲ ಸಂಬಳ ಮಾತ್ರವಲ್ಲದೆ, ಬ್ಯಾಂಕ್ ಅಧಿಕಾರಿಯಾಗಿ ತಮಗೆ ಸಿಗುವ ದೀರ್ಘಕಾಲದ ಸೌಲಭ್ಯಗಳ ಪಟ್ಟಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಪೆಟ್ರೋಲ್ ಭತ್ಯೆ, ದಿನಪತ್ರಿಕೆ ಭತ್ಯೆ, ಮನರಂಜನಾ ಭತ್ಯೆ (Entertainment allowance), ಉಪಾಹಾರ ಭತ್ಯೆ (Refreshment allowance) ಜೊತೆಯಲ್ಲಿ, ಮನೆ ನಿರ್ವಹಣೆ ವೆಚ್ಚ, ಮೊಬೈಲ್ ಮತ್ತು ರೀಚಾರ್ಜ್ ವೆಚ್ಚಗಳು, ವೈದ್ಯಕೀಯ ನೆರವು ಮತ್ತು ಕಣ್ಣಿನ ತಪಾಸಣೆಯ (Eye check-up) ಕವರೇಜ್ ಕೂಡ ಲಭ್ಯವಿದೆ.ಅದರೊಂದಿಗೆ ಲೀಸ್ ಆಧಾರಿತ ವಸತಿ ಸೌಲಭ್ಯ (Leased Accommodation), ಬಳಕೆಯಾಗದ ರಜೆಗಳ ನಗದೀಕರಣ (Leave Encashment) ಮತ್ತು ರಜಾದಿನಗಳಲ್ಲಿ ಬ್ಯಾಂಕ್‌ನ ಅತಿಥಿ ಗೃಹಗಳು ಹಾಗೂ ಹಾಲಿಡೇ ಹೋಮ್‌ಗಳನ್ನು ಬಳಸಿಕೊಳ್ಳುವ ಅವಕಾಶ ಕೂಡ ಇದರಲ್ಲಿದೆ.

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಡೆಸುವ ಪಿಒ (PO) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ದಾಸ್, ತಮ್ಮ ಬಯೋದಲ್ಲಿ ಆರ್‌ಆರ್‌ಬಿ ಸಿಎಸ್‌ಎ (RRB CSA) ಪರೀಕ್ಷೆಯನ್ನೂ ಪೂರ್ಣಗೊಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.

View post on Instagram

ಎಸ್‌ಬಿಐ ಅಧಿಕಾರಿಯ ಸಂಬಳವೂ ವೈರಲ್

ಇದೇ ಸಂದರ್ಭದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿಡಿಯೋ ಕೂಡ ಸದ್ದು ಮಾಡುತ್ತಿದೆ. ಆಕೆ 2.5 ವರ್ಷಗಳ ಸೇವೆ ಮತ್ತು 5 ಇನ್ಕ್ರಿಮೆಂಟ್ ಪಡೆದ ನಂತರ ತಿಂಗಳಿಗೆ ಸುಮಾರು 95,000 ರೂಪಾಯಿ ವೇತನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಜೈಬ್/ಕೈಬ್ (JAIIB/CAIIB) ಸರ್ಟಿಫಿಕೇಶನ್‌ಗಳು ಅವರ ವೇತನ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ. ಖಾಸಗಿ ವಲಯದ ಉದ್ಯೋಗಗಳಿಗೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಉದ್ಯೋಗಗಳು ಎಷ್ಟು ಲಾಭದಾಯಕ ಮತ್ತು ಸ್ಥಿರವಾಗಿವೆ ಅನ್ನೋದಕ್ಕೆ ಇವು ಸಾಕ್ಷಿ.