ಸಿನಿಮಾದವರು ಎಂದರೆ ಪರದೆಯ ಮೇಲೆ ಮಾತ್ರ ಆದರ್ಶದ ಕತೆ ಹೇಳುವವರು ಎನ್ನುವ ಭಾವ ಎಲ್ಲರಲ್ಲಿಯೂ ಇದೆ. ಅದು ತಪ್ಪಲ್ಲ. ಆದರೆ ಯಾವುದೇ ರಾಜಕೀಯ ಫಲಾಪೇಕ್ಷೆಗಳಿರದೆ ತಾವು ಕೂಡ ಹೇಗೆ ಸಮಾಜದ ಧ್ವನಿಯಾಗಬಲ್ಲೆವು ಎನ್ನುವ ಮಾದರಿ ಹಾಕಿಕೊಟ್ಟವರು ಡಾ.ರಾಜ್‌ಕುಮಾರ್. ಕೋವಿಡ್‌19 ಕಾಡುತ್ತಿರುವ ಈ ಸಂದರ್ಭದಲ್ಲಿ ಚಿತ್ರರಂಗದ ಒಂದು ಸಮೂಹವನ್ನೇ ಸೇರಿಸಿಕೊಂಡು ಸಮಾಜ ಸೇವೆಗೆ ಮುಂದಾಗಿರುವ ಕವಿರಾಜ್‌ ಕೂಡ ಅದೇ ರಾಜಮಾರ್ಗದಲ್ಲೇ ಇದ್ದಾರೆ ಎನ್ನಬಹುದು. `ಉಸಿರು' ಎನ್ನುವ ಹೆಸರಿಟ್ಟುಕೊಂಡು ಉಸಿರಾಟದಷ್ಟೇ ನಿಶ್ಶಬ್ದವಾಗಿ ತಮ್ಮ ಕೆಲಸ ಮಾಡುತ್ತಿರುವ ಕವಿರಾಜ್ ತಂಡದ ಕಾರ್ಯವೈಖರಿ ಪ್ರಶಂಸನೀಯ. ಉಸಿರು ತಂಡ ಹುಟ್ಟಿದ್ದು ಹೇಗೆ ಮತ್ತು ಇಂದು ನಾಡಿಗೆ ಹೇಗೆ ಉಸಿರಾಗಿದೆ ಎನ್ನುವ ಕುರಿತಾದ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಪ್ರಶ್ನೆಗಳಿಗೆ ಕವಿರಾಜ್ ನೀಡಿರುವ ಉತ್ತರಗಳು ಇಲ್ಲಿವೆ.

 -ಶಶಿಕರ ಪಾತೂರು

`ಕೋವಿಡ್‌19' ಬಾಧಿತರಿಗೆ ಸಹಾಯ ಮಾಡಲೇಬೇಕು ಎನ್ನುವ ತುಡಿತ ಮೂಡಿದ್ದು ಹೇಗೆ?
ಬಹುಶಃ ಅಂಥದೊಂದು ತುಡಿತ ಎಲ್ಲರಲ್ಲಿಯೂ ಇರುತ್ತದೆ. ಆದರೆ ಅದು ನಿರ್ಧಾರವಾಗಲು ನಾನು ಬೆಳೆದು ಬಂದ ರೀತಿಯೇ ಕಾರಣವಿರಬಹುದು. ಬಹಳ ವರ್ಷಗಳಿಂದ ಸ್ವಾಮಿ ವಿವೇಕಾನಂದರ ಒಂದು ಮಾತು ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ. 'ಎಲ್ಲಿಯವರೆಗೆ ಈ ಪ್ರಪಂಚದಲ್ಲಿ ಕಟ್ಟಕಡೆಯ ಮನುಷ್ಯ ಹಸಿವಿನಿಂದ ನರಳುತ್ತಿರುತ್ತಾನೆಯೋ ಅಲ್ಲಿಯವರೆಗೆ ಭೋಗ ಜೀವನ ನಡೆಸುವ ಎಲ್ಲರೂ ಅಪರಾಧಿಗಳೇ' ಎನ್ನುವುದು ಅವರ ಮಾತಾಗಿತ್ತು. ಹತ್ತು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹವಾದಾಗ ಕೂಡ ಸಿನಿಮಾ ಬರಹಗಾರರೆಲ್ಲ ಸೇರಿ ಎರಡು ಲಾರಿಗಳ ತುಂಬ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದೆವು. ಕೊಡಗು ದುರಂತದ ಸಂದರ್ಭದಲ್ಲಿ, ಪುನಃ ಉತ್ತರಕರ್ನಾಟಕದಲ್ಲಿ ದುರಂತವಾದಾಗಲೂ ನಾವು ನಮ್ಮ ಸೇವೆ ನೀಡಿದ್ದೆವು. ಸುತ್ತಮುತ್ತ ಇಂಥ ಘಟನೆಗಳು ನಡೆಯುವಾಗ ಮನೆಯಲ್ಲಿ ಕುಳಿತು ಸುಮ್ಮನೇ ನೋಡುತ್ತಿದ್ದೇವೆ ಎನ್ನುವಾಗಲೇ ಪಾಪ ಪ್ರಜ್ಞೆ ಕಾಡಲು ಶುರು ಮಾಡಿತ್ತು. ಜೊತೆಗೆ ನನ್ನ ಪತ್ನಿ ಕೂಡ ನನ್ನದೇ ಮನಸ್ಥಿತಿಯವಳೇ. ಹಾಗಾಗಿ ಉಸಿರು ಎನ್ನುವ ಸಂಘಟನೆಯ ಮೂಲಕ ಸೇವೆ ಶುರು ಮಾಡಿದ್ದೇವೆ. ಸಂಘಟನೆಯ ಹೆಸರಿಗೆ ತಕ್ಕಂತೆ ಕೋವಿಡ್‌ನಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುವವರಿಗೆ `ಆಕ್ಸಿಜನ್ ಕಾನ್ಸಂಟ್ರೇಟರ್' ತಲುಪಿಸುತ್ತಿದ್ದೇವೆ.

ಶಿವಣ್ಣನ ಬಗ್ಗೆ ರಾಕೇಶ್ ಮಯ್ಯ ಮಾತು

ಯೋಜನೆ ಕಾರ್ಯರೂಪಗೊಳಿಸಲು ಕಷ್ಟವಾಯಿತೇ?
ನನ್ನ ಸ್ನೇಹಿತರೆಲ್ಲ ಸಮಾನ ಮನಸ್ಥಿತಿಯವರೇ ಆಗಿರುವ ಕಾರಣ ಅಂಥ ಕಷ್ಟವೇನೂ ಆಗಿಲ್ಲ. ಹಾಗಾಗಿ ಅವರೆಲ್ಲರ ಬಗ್ಗೆ ನಾನು ಹೇಳಲೇಬೇಕು. ಕನ್ನಡ ಚಿತ್ರಗಳ ವಿದೇಶೀ ಚಿತ್ರೀಕರಣವನ್ನೆಲ್ಲ ಹೆಚ್ಚಾಗಿ ನಿರ್ವಹಿಸುವವರು ನಮ್ಮ ಆತ್ಮೀಯರಾದ ಶಕ್ತಿ. ನನ್ನ ನಿರ್ದೇಶನದ `ಮದುವೆಯ ಮಮತೆಯ ಕರೆಯೋಲೆ' ಚಿತ್ರದ ನಿರ್ಮಾಪಕರಲ್ಲೊಬ್ಬರೂ ಆಗಿದ್ದಂಥ ಶಕ್ತಿಯವರೊಂದಿಗೆ ಮಾತನಾಡುತ್ತಾ ಈ ಬಗ್ಗೆ ಚರ್ಚಿಸಿದೆ. ನಾನು ಮತ್ತು ನನ್ನೊಂದಿಗೆ ಮತ್ತು ದಿನಕರ್ ತೂಗುದೀಪ ಅವರು ಕೂಡ ತಲಾ ಒಂದು ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸುವುದಾಗಿ ಹೇಳಿ ಮುಂದಾದೆವು. ಅಷ್ಟನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ; ಸಾಕಷ್ಟು ಮಂದಿ ಅವರಾಗಿಯೇ ಕರೆ ಮಾಡಿ ಇದನ್ನೊಂದು ಬೃಹತ್ ತಂಡವಾಗಿಸಲು ಸಹಾಯವಾದರು. ಈಗ ನಮ್ಮ ತಂಡದಲ್ಲಿ ಕವಿತಾ ಲಂಕೇಶ್, ಸಂಚಾರಿ ವಿಜಯ್, ಸುಂದರ್, ನೀತು ಶೆಟ್ಟಿ, ಅಕ್ಷತಾ ಪಾಂಡವಪುರ, ವಿನಯ್, ಚೈತನ್ಯ  ಸೇರಿದಂತೆ ಸಿನಿಮಾದವರೇ ಹೆಚ್ಚಾಗಿ ಇದ್ದಾರೆ. ಸಾಧು ಕೋಕಿಲ ಅವರು ಕೂಡ ನಮ್ಮೊಂದಿಗಿದ್ದಾರೆ. ಇವರೊಂದಿಗೆ ನನಗೆ ಪರಿಚಯವಿರುವ ಹೋರಾಟದ ಮನೋಭಾವವಿರುವ ಒಂದಷ್ಟು ಹುಡುಗರು ಸೇರಿಕೊಂಡಿದ್ದಾರೆ. ಕರುನಾಡಸೇವಕರ ಕಾರ್ಯದರ್ಶಿಯಾಗಿದ್ದಂಥ ಮಾದೇಶ್ ಗೌಡ ಸೇರಿದಂತೆ ಜ್ಞಾನೇಶ್ವರ್, ಪವನ್, ಶ್ರೀಕಾಂತ್ ಮೊದಲಾದವರು ಇದ್ದಾರೆ. ಇಲ್ಲಿ ನನಗಿಂತಲೂ ಅವರ ಮನೆಗೆ ನೇರವಾಗಿ ಹೋಗುವ ನಮ್ಮ ಹುಡುಗರ ತಂಡವನ್ನು ಗ್ರೇಟ್ ಎಂದು ಹೇಳಲೇಬೇಕು. ಅಂದಹಾಗೆ ನಮ್ಮ ತಂಡದಲ್ಲಿ ನರ್ಸ್ ಕೂಡ ಇದ್ದಾರೆ. ಸಮಾಲೋಚನೆ ಮಾಡಲು ಡಾಕ್ಟರ್ (ಸಂಗೀತ ನಿರ್ದೇಶಕ) ಕಿರಣ್ ತೋಟಂಬೈಲು ಕೂಡ ಇದ್ದಾರೆ. ಅವರು ಯಾವ ಸಂದರ್ಭದಲ್ಲಿಯೂ ಸಹಾಯಕ್ಕೆ ತಾವು ಸಿದ್ಧ ಎಂದು ಭರವಸೆ ನೀಡಿದ್ದಾರೆ.

ಬಿಗ್ ಬಾಸ್ ನನ್ನ ಮುಖವಾಡ ಕಳಚಿದೆ- ಪ್ರಶಾಂತ್ ಸಂಬರಗಿ

ಈಗ ಆಕ್ಸಿಜನ್ ಕಾನ್ಸಂಟ್ರೇಟರ್‌ಗೆ ಬೇಡಿಕೆ ಹೇಗಿದೆ?
ತುಂಬಾನೇ ಇದೆ. ಆರಂಭದಲ್ಲಿ ನಾವು ಕೊಳ್ಳುವಾಗ ತೊಂಬತ್ತು ಸಾವಿರ ಇತ್ತು. ರೆಮಿಡಿಸಿವರ್‌ ರೀತಿಯಲ್ಲೇ ಇದಕ್ಕೂ ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ. ಕೋವಿಡ್‌ ಇರದಿದ್ದರೂ ಒಂದಷ್ಟು ಶ್ರೀಮಂತರು ಇದನ್ನು ಮುನ್ನೆಚ್ಚರಿಕೆಗೆಂದು ಮೊದಲೇ ಕೊಂಡು ಮನೆಯಲ್ಲೇ ಇರಿಸಿಕೊಂಡಿದ್ದಾರೆ! ನಾವು ನೀಡುತ್ತಿರುವುದು ಒಂಬತ್ತು ಲೀಟರ್ ಆಕ್ಸಿಜನ್ ಕಾನ್ಸಂಟ್ರೇಟರ್. ಕೆಲವರು ಉಚಿತವಾಗಿದ್ದರೆ ನಮಗೂ ಒಂದಿರಲಿ ಎಂದು ಕೇಳುತ್ತಾರೆ. ಆದರೆ ನಮ್ಮ ಕಾನ್ಸೆಪ್ಟ್ ಪ್ರಕಾರ ಇದನ್ನು ಎಲ್ಲರಿಗೂ ನೀಡುವುದಿಲ್ಲ.


ಉಸಿರಾಟದ ಸಮಸ್ಯೆ ಶುರುವಾಗಿ ಆಕ್ಸಿಜನ್ ಹುಡುಕಲು ಶುರು ಮಾಡಿರುತ್ತಾರಲ್ಲ? ಅವರಿಗೆ ಆಕ್ಸಿಜನ್ ಸಿಗುವವರೆಗೆ ಪ್ರಾಣ ಉಳಿಸಲು ಇದು ಸಹಾಯ ಮಾಡುತ್ತದೆ. ನಮಗೆ ಕರೆ ಮಾಡುವವರಲ್ಲಿ ಆಕ್ಸಿಜನ್ ಪ್ರಾಕ್ಸಿಮೀಟರ್ ಮೂಲಕ  ಆಕ್ಸಿಮೀಟರ್ ಎಷ್ಟಿದೆ ಎಂದು ವಿಚಾರಿಸುತ್ತೇವೆ. ಅದು ಎಂಬತ್ತಕ್ಕಿಂತ ಕಡಿಮೆ ಇದ್ದಾಗ ಅವರನ್ನು ಆಸ್ಪತ್ರೆಗೆ ದಾಖಲಿಸದೇ ನಮ್ಮ ಕಾನ್ಸಂಟ್ರೇಟರ್ ಮೂಲಕ ಬದುಕಿಸಲು ಸಾಧ್ಯವಿರದು. ಹಾಗಾಗಿ ಅಂಥವರು ನಮಗೆ ಕರೆ ಮಾಡುವ ಅಗತ್ಯ ಇರುವುದಿಲ್ಲ. ಅದೇ ರೀತಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆ ಸೇರಿಕೊಂಡು ಆಕ್ಸಿಮೀಟರ್‌ನಲ್ಲಿ ತೊಂಬತ್ತಕ್ಕಿಂತ ಹೆಚ್ಚು ದಾಖಲೆ ಇದ್ದರೆ ಅವರಿಗೂ ನಾವು ಕಾನ್ಸಂಟ್ರೇಟರ್ ನೀಡಲು ಬಯಸುವುದಿಲ್ಲ. ಇತರರ ಗಂಭೀರತೆಯನ್ನು ಊಹಿಸೋಕೂ ಸಾಧ್ಯವಿಲ್ಲ. ನಮಗೆ ಅಸಂಖ್ಯಾತ ಕರೆಗಳು ಬರುತ್ತಿವೆ. ಅದರಲ್ಲಿಯೂ ಮೂರು ದಿನದಲ್ಲಿ ನಾಲ್ಕು ಸಾವಿನ ಬಗ್ಗೆಯೂ ನಾವು ಹತ್ತಿರದಿಂದ ಅರಿಯುವಂತಾಯಿತು. ಅಂದರೆ ಕರೆ ಮಾಡಿದವರ ಬಳಿಗೆ ನಾವು ಇನ್ನೇನು ತಲುಪಬೇಕು ಎನ್ನುಷ್ಟರಲ್ಲಿ ಅವರಿಂದ ಮತ್ತೆ ಕರೆ ಬಂದಿರುತ್ತದೆ "ಅವರು ತೀರಿಹೋಗಿದ್ದಾರೆ" ಎಂದು!

ಈ ವಯಸ್ಸಲ್ಲಿ ನಾಗೇಂದ್ರ ಶಾನ್‌ಗೆ ಸಂಗೀತ ಪ್ರೇಮ

ನಿಮ್ಮ ಪ್ರಯತ್ನಕ್ಕೆ ಚಿತ್ರರಂಗದಿಂದ ಇತರರ ಪ್ರತಿಕ್ರಿಯೆ ಯಾವರೀತಿಯಲ್ಲಿದೆ?
ಚಿತ್ರರಂಗದಿಂದ ಮಾತ್ರವಲ್ಲ, ಎಲ್ಲ ಕಡೆಯಿಂದಲೂ ಸಕಾರಾತ್ಮಕವಾದ ಪ್ರತಿಕ್ರಿಯೆಯೇ ದೊರೆಯುತ್ತಿದೆ. ನಿನ್ನೆಯಷ್ಟೇ ನಿರ್ಮಾಪಕಿ ಶೈಲಜಾ ನಾಗ್ ಅವರು ಕೂಡ ಫೋನ್ ಮಾಡಿ ತಾವು ಒಂದು ಕಾನ್ಸಂಟ್ರೇಟ್ ಮೆಷಿನ್ ಕೊಡಿಸುವ ಭರವಸೆ ನೀಡಿದ್ದಾರೆ. ಇವೆಲ್ಲ ಅವರವರಾಗಿಯೇ ಸ್ವಯಂಸೇವಕರಾಗಿ ಮಾಡುತ್ತಿರುವ ಸೇವೆ. ಇದುವರೆಗೆ ನಾವಾಗಿ ಎಲ್ಲಿಯೂ ದುಡ್ಡು ಕೊಡಿ ಎಂದು ಕೇಳಿಲ್ಲ. ಅದನ್ನು ಕೇಳುವ ಪರಿಸ್ಥಿತಿ ಉಂಟಾಗಲಿದೆ. ಯಾಕೆಂದರೆ ಈಗಾಗಲೇ ನಮ್ಮ ಬಳಿ ಸುಮಾರು ಹದಿನಾರರಷ್ಟು ಮೆಶಿನ್ಸ್‌ ಇವೆ. ಅವುಗಳಲ್ಲಿ ಹತ್ತರಷ್ಟು ನಮ್ಮ ತಂಡವೇ ದುಡ್ಡು ಹಾಕಿಕೊಂಡಿರುವಂಥದ್ದು.