Asianet Suvarna News Asianet Suvarna News

10 ವರ್ಷದ ಸಂಭ್ರಮ;ಸೋತು ಕೂತಿದ್ದ ಹುಡುಗ ಗೆದ್ದು ಬೀಗಿದ ಸ್ಫೂರ್ತಿ ಕಥೆ!

ರಂಗಭೂಮಿಗೆ ಕಾಲಿಟ್ಟು ಸಿನಿಮಾ ರಂಗಕ್ಕೆ ಸೇರಿ,ನಟಿಸಿದ ಬಹುತೇಕ ಸಿನಿಮಾಗಳು ಕೈಕೊಟ್ಟು ಐರನ್ ಲೆಗ್ಗು ಅನ್ನಿಸಿಕೊಂಡವರು ಧನಂಜಯ್. ಭರವಸೆ ಇಟ್ಟುಕೊಂಡಿದ್ದವರು ಕೂಡ ಸೋತು ಹೋದ ಈ ಹುಡುಗ ಅಂತಂದುಕೊಳ್ಳುವಷ್ಟರಲ್ಲಿ ಛಲ, ಪ್ರತಿಭೆ ಮಾತ್ರದಿಂದಲೇ ಫೀನಿಕ್ಸಿನಂತೆ ಎದ್ದು ಬಂದು ಗೆದ್ದ ನಿಜವಾದ ಸ್ಟಾರ್ ಈತ. ಧನಂಜಯ್ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಆಗಿದೆ. ಕಣ್ಣಲ್ಲಿ ಬದುಕು ಕಲಿಸಿದ ವಿಶ್ವಾಸ ಕಾಣಿಸುತ್ತದೆ. ಗೆಲುವು ಕೈ ಹಿಡಿದು ನಡೆಸುತ್ತಿದೆ. ಈ ಹೊತ್ತಲ್ಲಿ ಧನಂಜಯ್ ಮನಸ್ಸಲ್ಲಿ ಏನೇನಿದೆ...

 

Kannada actor Dhananjay 10 years cine journey exclusive interview
Author
Bangalore, First Published Jan 10, 2020, 2:25 PM IST
  • Facebook
  • Twitter
  • Whatsapp

ದೇಶಾದ್ರಿ ಹೊಸ್ಮನೆ

ಸೋಲು, ನಿರಾಸೆ, ಹತಾಶೆ, ಅವಮಾನ, ಕೊನೆಗೆ ಸಂಭ್ರಮ

2010, ಜನವರಿ 7. ನಟನಾಗಲು ಬೆಂಗಳೂರಿಗೆ ಬಂದ ದಿನ. ಇದು 10 ವರ್ಷದ ಪ್ರಯಾಣ. ಈ ಕ್ಷಣದಲ್ಲಿ ನೆನಪಿಸಿಕೊಂಡ್ರೆ, ಎಷ್ಟು ಬೇಗ ಹತ್ತು ವರ್ಷ ಜಾರಿ ಹೋಯಿತು ಅಂತೆನಿಸುತ್ತೆ, ಆದ್ರೆ ಅಲ್ಲಿಂದ ಇಲ್ಲಿ ತನಕ ಸಾಗಿ ಬಂದ ಜರ್ನಿ ಮಾತ್ರ ರೋಮಾಂಚಕ. ಅದೊಂದು ಕಲ್ಲು ಮುಳ್ಳಿನ ಹಾದಿ. ಸೋಲು, ಹತಾಶೆ, ನಿರಾಸೆ, ಬೇಸರ, ಅವಮಾನ, ಕೊನೆಗೆ ಸಂಭ್ರಮ.. ಎಲ್ಲವನ್ನೂ ಈ ಹತ್ತು ವರ್ಷ ನನಗೆ ನೀಡಿದೆ. ಅಂತೂ ಗೆದ್ದೆ ಅಂತ ಖುಷಿ ಪಡುವ ಹೊತ್ತಿಗೆ ಹಾದು ಬಂದ ದಿನಗಳು ಮಾತ್ರ ಘೋರವಾಗಿದ್ದವು. ಸೋಲು ಎನ್ನುವುದು ಇಲ್ಲಿ ದೊಡ್ಡ ಅವಮಾನ. ಒಂದೊಮ್ಮೆ ಒಬ್ಬ ಮ್ಯೂಸಿಕ್ ಡೈರೆಕ್ಟರ್ ಮನೆಯಿಂದ ಅಳುತ್ತಾ ಬಂದಿದ್ದೆ. ಒಂದ್ ಸೆಟ್‌ನಲ್ಲಿ ಆ ಬೋಳಿಮಗನ್ನ ಕರೀರೋ ಅಂತ ನಿರ್ಮಾಪಕರಿಂದ ಬೈಯ್ಸಿಕೊಂಡಿದ್ದು ಈಗಲೂ ಕಿವಿಯಲ್ಲಿದೆ. ಕಲಾವಿದರಿಗೆ ಸಮಸ್ಯೆ ಅಂದ್ರೆ ಗೆಲುವು. ಒಬ್ಬ ಕಲಾವಿದ ಗೆದ್ದಾಗ ಅವನ ಸುತ್ತಲೂ ಉದ್ಯಮ ಇರುತ್ತೆ. ಅದೇ ಸೋತಾಗ ಆತನನ್ನು ಟ್ರೀಟ್ ಮಾಡುವ ರೀತಿ ಮಾತ್ರ ಸಹಿಸೋದು ಕಷ್ಟ.

ಡಾಲಿ ಧನಂಜಯ್ ಇದೀಗ ಪೊಲೀಸ್ ; ಖಡಕ್ ಲುಕ್‌ ಆಯ್ತು ವೈರಲ್

ರಂಗಭೂಮಿ ಎಂಬ ಅಯಸ್ಕಾಂತ

ಒಂದನೇ ಕ್ಲಾಸ್‌ನಲ್ಲಿ ಡಾನ್ಸ್ ಮಾಡಿದ್ದೆ. ಸ್ಕೂಲ್ ಫಂಕ್ಷನ್‌ಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದೆ. ಹಂಗೇ ಶುರುವಾಗಿದ್ದು ನಟನಾ ಬದುಕು. ಆದ್ರೆ ಅದಕ್ಕೊಂದು ರೂಪ ಅಂತ ಸಿಕ್ಕಿದ್ದು ಮೈಸೂರಿಗೆ ಬಂದ್ಮೇಲೆ. ಮೈಸೂರು ನನ್ನ ಬದುಕಿನ ಇನ್ನೊಂದು ಮಹತ್ವದ ತಾಣ. ಅಲ್ಲಿದ್ದಾಗ ರಂಗಭೂಮಿ ನಂಟು ಬೆಳೆಯಿತು. ಅದೊಂದು ಅಯಸ್ಕಾಂತ. ಅಲ್ಲಿಯೇ ತೊಡಗಿಸಿಕೊಳ್ಳಬೇಕೆನ್ನುವಾಗ ಇಂಜಿನಿಯರಿಂಗ್ ಮುಗೀತು. ಇನ್ಫೋಸಿಸ್‌ಗೆ ಕೆಲಸಕ್ಕೆ ಸೇರಿದೆ. ಅದು ಕೂಡ ಸಾಕೆನಿಸಿತು. ವಾಪಾಸ್ ರಂಗಭೂಮಿಗೆ ಹೋದೆ. ಆ ದಿನಗಳಲ್ಲಿ ನನ್ನನ್ನು ನಟನಾಗಿಸಿದ್ದು ನಿರ್ದೇಶಕ ಗುರುಪ್ರಸಾದ್. ಅವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದೇ ಪರಿಚಯದೊಂದಿಗೆ ‘ಡೈರೆಕ್ಟರ್ ಸ್ಪೆಷಲ್’ ಸಿನಿಮಾ ಶುರುವಾಯಿತು. ಅದು ಬಂದು ಇನ್ನೇನೋ ಆಯಿತು ಎನ್ನುವ ಹೊತ್ತಿಗೆ ಖಾಲಿ ಕುಳಿತೆ.

ನನ್ನ ಮೇಲೆ ನನಗೇ ವಿಶ್ವಾಸ ಮೂಡಿಸಿದ ಕ್ಷಣ

‘ಡೈರೆಕ್ಟರ್ ಸ್ಪೆಷಲ್’ ಸಿನಿಮಾದ್ದು ಮೂರು ವರ್ಷದ ಜರ್ನಿ. ಅದಕ್ಕೆ ಗಡ್ಡ, ಕೂದಲು ಬಿಟ್ಟಿದ್ದೆ. ಆಗ ಊರಿಗೆ ಹೋಗ್ಬೇಕು ಅಂತ ಮೆಜೆಸ್ಟಿಕ್‌ಗೆ ಹೋದಾಗ, ಧರ್ಮಸ್ಥಳ, ಧರ್ಮಸ್ಥಳ ಅಂತ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಎಳ್ಕೊಂಡು ಹೋಗಿದ್ರು. ಒಮ್ಮೆ ರೈಲಿನಲ್ಲಿ ಹೋಗುವಾಗ ಒಂದಜ್ಜಿ ಮಗುವಿಗೆ, ನನ್ನ ಕಡೆ ಬೆರಳು ಮಾಡಿ, ನೋಡು ಅವ್ನಿಗೆ ಹಿಡ್ದುಕೊಡ್ತೀನಿ ಅಂತ ನನ್ನ ತೋರಿಸಿ ಹೇಳಿತ್ತು. ಆ ಗಡ್ಡ, ಕೂದ್ಲು ಲುಕ್ಕೇ ವಿಚಿತ್ರವಾಗಿತ್ತು. ಅದೇ ಕಾರಣಕ್ಕೆ ಸಿನಿಮಾ ಮೇಲೂ ನಿರೀಕ್ಷೆ ಇತ್ತು. ಆದ್ರೆ ಅದು ಅಷ್ಟಾಗಿ ಸಕ್ಸಸ್ ಆಗ್ಲಿಲ್ಲ. ಮುಂದೇನು ಅನ್ನೋವಾಗ ಬರವಣಿಗೆ ಶುರು ಮಾಡಿದೆ. ‘ಜಯನಗರ 4ನೇ ಬ್ಲಾಕ್’ ಕಿರುಚಿತ್ರ ಮಾಡಿದೆ. ಅದು ಬದುಕಿನ ಮತ್ತೊಂದು ತಿರುವು. ‘ರಾಟೆ’ ಸಿನಿಮಾ ಚಿತ್ರೀಕರಣಕ್ಕೆ ಅಂತ ಮಂಗಳೂರಿಗೆ ಹೋಗಿದ್ದೆವು. ಅಲ್ಲಿ ಅಪರಿಚಿತರೊಬ್ಬರು ಸಿಕ್ಕು, ನಿಮ್ಮ ಜಯನಗರ 4ನೇ ಬ್ಲಾಕ್ ಮೂವಿ ನೋಡಿದ್ವಿ, ತುಂಬಾ ಚೆನ್ನಾಗಿತ್ತು ಅಂತ ಫೋಟೋ ತೆಗೆದುಕೊಂಡ್ರು. ಫಸ್ಟ್ ಟೈಮ್ ನನಗೆ ಆತ್ಮ ವಿಶ್ವಾಸ ಮೂಡಿಸಿದ ಕ್ಷಣವದು.

FaceApp ಕೊಡ್ತು ಡಾಲಿ ಧನಂಜಯ್‌ಗೆ ರಗಡ್‌ ಲುಕ್!

ಹತ್ತು ವರ್ಷ,
ಹತ್ತಾರು ಪಾತ್ರ..

ಈ ಹತ್ತು ವರ್ಷದಲ್ಲಿ ಸಾಕಷ್ಟು ಸಲ ಸೋತಿರಬಹುದು, ಆದರೆ ಹತ್ತಾರು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು. ಅದಕ್ಕಾಗಿ ನಾನು ನನ್ನ ನಿರ್ದೇಶಕರು, ನಿರ್ಮಾಪಕರಿಗೆ ಚಿರಋಣಿ. ಹಾಗೆಯೇ ಒಂದು ಗೆಲುವು ಹೇಗೆಲ್ಲ ಎಕ್ಸ್‌ಪೋಸ್‌ಗೆ ಕಾರಣ ಆಗುತ್ತೆ ಎನ್ನುವ ಅನುಭವವೂ ಆಗಿದೆ. ಟಗರು ಸಿನಿಮಾ ಮೂಲಕ ರಾಮ್‌ಗೋಪಾಲ್ ವರ್ಮ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಪ್ರಶಸ್ತಿ, ಸನ್ಮಾನ ಅಂತ ಹತ್ತಾರು ವೇದಿಕೆ ಏರುವ ಅವಕಾಶ ಕೊಟ್ಟಿತು. ಸೋಲು ನೂರೆಂಟು ಬಗೆಯ ಪಾಠ ಕಲಿಸಿದರೆ, ಗೆಲುವು ಹತ್ತಾರು ಬಗೆಯಲ್ಲಿ ಅನುಭವ ನೀಡುತ್ತದೆ.

ಪಾಪ್‌ ಕಾರ್ನ್‌ ಮಂಕಿ ಟೈಗರ್ 

ಪಾಪ್ ಕಾರ್ನ್ ಮಂಕಿ ಟೈಗರ್ ಅಂದ್ರೆ ಅದು ಮತ್ತೊಂದರ ಹುಡುಕಾಟ. ಸೂರಿ ಇರುವುದೇ ಹಾಗೆ. ಅವರು ನಿರಂತರ ಹುಡುಕಾಟದಲ್ಲೇ ಇರುತ್ತಾರೆ. ಟಗರು ಒಂಥರ ಸಿನಿಮಾವಾದರೆ, ಇದು ಇನ್ನೊಂದು ಬಗೆಯ ಸಿನಿಮಾ. ಟಗರು ಶೈಲಿಯಲ್ಲೇ ಕ್ಲಾಸ್‌ಗೂ, ಮಾಸ್‌ಗೂ ಇಷ್ಟವಾಗುವ ಸಿನಿಮಾ. ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದೇವೆ. ಈಗಾಗಲೇ ಟೀಸರ್ ಬಂದಿದೆ. ಹಸಿಹಸಿಯಾದ ದೃಶ್ಯಗಳಿದ್ದರೂ ಸಿನಿಮಾದೊಳಗಿನ ಕತೆ ಅದೆಲ್ಲವನ್ನು ಮರೆಸಿ, ಹೊಸ ಬಗೆಯ ಅನುಭವ ನೀಡಲಿದೆ. ಇದು ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಡಾಲಿಯ ಹಾಗೆ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಖುಷಿಯಿದೆ.

ಗೆಲುವಷ್ಟೇ ಅದು, ಅಹಂಕಾರ ಅಲ್ಲ...

ನಾಯಕ ನಟನೋ, ಖಳನಟನೋ, ನಾನೊಬ್ಬ ಕಲಾವಿದ ಮಾತ್ರ. ಹೀರೋ ಆಗ್ಬೇಕು ಎನ್ನುವುದಕ್ಕಿಂತ ನಾನು ಸಿನಿಮಾ ಮಾಡ್ಬೇಕು, ಅದನ್ನೇ ಉಸಿರಾಡಬೇಕು ಅಂತ ಬಂದವನು. ಹಾಗಾಗಿ ಅವತ್ತು ಸೂರಿ ವಿಲನ್ ಶೇಡ್ ಪಾತ್ರ ಮಾಡ್ತೀಯಾ ಅಂತ ಕೇಳಿದಾಗಲೂ ಬೇ ಅಂದಿರಲಿಲ್ಲ. ಇವತ್ತು ಕೂಡ ಅಷ್ಟೇ. ನಟನಾಗಿ ನಾನು ಗುರುತಿಸಿಕೊಳ್ಳುವುದಕ್ಕೆ ಆ ಪಾತ್ರದಲ್ಲಿ ಅವಕಾಶವಿದೆ ಅಂತಾದ್ರೆ, ಅದು ವಿಲನ್ ಪಾತ್ರವಾದರೂ ಸರಿ, ಪೋಷಕಪಾತ್ರವಾದರೂ ಸರಿ, ಬಣ್ಣ ಹಚ್ಚುವುದಕ್ಕೆ ನಾನ್ ರೆಡಿ. ಇಷ್ಟಕ್ಕೂ ನನಗೆ ಒಂದು ಗೆಲುವು ಕೊಟ್ಟಿದ್ದು ವಿಲನ್ ಪಾತ್ರ. ಆದ್ದರಿಂದ ನಾನು ನಟನೆಯನ್ನು ಗೌರವಿಸಬೇಕೇ ಹೊರತು, ದುರಂಹಕಾರಿ ಆಗಬಾರದು. ಗೆಲುವು ಮುಖ್ಯ ಆಗೋದಿಲ್ಲ ಅಂತಲ್ಲ. ಕೊನೆಗೂ ನನ್ನೆಲ್ಲ ನೋವಿಗೆ ಮುಲಾಮು ಆಗಿದ್ದು ಒಂದು ಗೆಲುವು.

ಯುವರತ್ನ ಪುನೀತ್‌ ಚಿತ್ರದಲ್ಲಿ ಧನಂಜಯ್‌ ವಿಲನ್‌!

ಸೋಲಿಗೆ ಕಾರಣ ನಟ ಮಾತ್ರ ಅಲ್ಲ!

‘ರಾಟೆ’ ಚಿತ್ರೀಕರಣದ ಹೊತ್ತಿನಲ್ಲೇ ನಾನು ಇಷ್ಟ ಪಡುವ ಒಬ್ಬ ನಟನ ಮನೆಗೆ ಹೋಗಿದ್ದೆ. ಏನ್ ಮಾಡ್ತಿದ್ದೀಯಾ ಅಂತ ಕೇಳಿದ್ರು. ಇಂಜಿನಿಯರಿಂಗ್ ಮುಗಿದಿದೆ. ಸಿನಿಮಾ ಮಾಡ್ಬೇಕು ಅನ್ಕೊಂಡಿದ್ದೇನೆ ಅಂದೆ. ನಮ್ಗೆ ಓದ್ಲಿಕ್ಕೆ ಆಗಿಲ್ಲ ಎನ್ನುವ ನೋವು. ನೀನು ಇಷ್ಟು ಓದಿ ಸಿನಿಮಾ ಮಾಡ್ತೀನಿ ಅಂತೀಯಾ, ಇಲ್ಲಿ ಗೆಲ್ಲೋ ಯೋಗ್ಯತೆ ಇದ್ರೆ ಇರ್ತೀವಿ, ಇಲ್ಲ ಅಂದ್ರೆ ಕಳ್ದು ಹೋಗ್ತೀವಿ ಅಂತ ಬುದ್ಧಿ ಹೇಳಿದ್ರು. ಆದ್ರೆ ನಾನು, ‘ಸರ್ ಗೆಲ್ಲಬೇಕೆಂದೇ ಬಂದಿದ್ದೇನೆ’ ಅಂತ ಹೇಳಿ ಬಂದಿದ್ದೆ. ಮುಂದೆ ಅವರಿಗೆ ಹಾಗೇಕೆ ಹೇಳಿ ಬಂದೆ ಅಂತೆನಿಸಿತು. ಸೋಲು ಬೆನ್ನು ಬಿದ್ದಿತ್ತು. ‘ರಾಟೆ’, ‘ಬಾಕ್ಸರ್’, ‘ಬದ್ಮಾಶ್’, ‘ಜೆಸ್ಸಿ’, ‘ಅಲ್ಲಮ’, ‘ಎರಡನೇ ಸಲ’ಹೀಗೆ ಒಂದರ ಹಿಂದೆ ಒಂದು ಸಿನಿಮಾ ಮಾಡುತ್ತಾ ಬಂದರೂ, ನಿರೀಕ್ಷಿತ ಗೆಲುವು ಸಿಗಲಿಲ್ಲ. ಕೆಲವು ನಿರ್ದೇಶಕರಿಂದ ಚುಚ್ಚುಮಾತುಗಳನ್ನು ಕೇಳಿಸಿಕೊಂಡೆ. ಧನಂಜಯ್ ಗೆಲ್ಲುವ ನಟ ಅಲ್ಲ, ಅವನನ್ನ ಹಾಕಿಕೊಂಡ್ರೆ ಅಧೋಗತಿ ಅಂದವರೂ ಇದ್ದರು. ಹಾಗಾದ್ರೆ ಈ ಸೋಲಿಗೆ ನಾನೊಬ್ಬನೇ ಕಾರಣವೇ? ನನ್ನನ್ನು ನಾನೇ ಪ್ರಶ್ನಿಸಿಕೊಂಡು ಸುಮ್ಮನಾದೆ. ನನಗೊಂದು ಗೆಲುವು ಕೊಟ್ಟು, ಅವರಿಗೊಂದು ಉತ್ತರ ನೀಡಲು ಟಗರು ಬರಬೇಕಾಯಿತು.ಅದು ನನ್ನ ಜೀವನದ ಮಹತ್ವದ ಘಟ್ಟ.

ಡಾಲಿ ಪ್ರತಿಯೊಬ್ಬ ಮನುಷ್ಯನೊಳಗಿನ ಇನ್ನೊಂದು ರೂಪ

ಸೂರಿ ಮತ್ತು ನಾನು ಒಂದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದೆವು. ಆಗ ಸೂರಿ ನನಗೆ ಈ ಸಿನಿಮಾದ ಬಗ್ಗೆ ಹೇಳಿದ್ರು. ವಿಲನ್ ಶೇಡ್ ಮಾಡ್ತೀರಾ ಅಂತ ಕೇಳಿದ್ರು. ನೀವು ಕೊಟ್ರೆ, ಖಂಡಿತಾ ಮಾಡ್ತೀನಿ ಅಂದಿದ್ದೆ. ಹಾಗೆ ಶುರುವಾಯಿತು ನನ್ನ ಅವರ ಜರ್ನಿ. ಮೊದಲು ಸಿನಿಮಾ ಸ್ಕ್ರಿಪ್ಟ್‌ಗೆ ಅಂತ ಹೋದಾಗ ಶಿವಣ್ಣ ಸಿಕ್ಕರು. ಬಿಗಿಯಾಗಿ ತಬ್ಬಿಕೊಂಡು ಆಲ್ ದಿ ಬೆಸ್ಟ್ ಅಂದ್ರು. ಅವರ ಆಶೀರ್ವಾದ ದೇವರು ಕೊಟ್ಟ ಪ್ರಸಾದವೇ ಆಗಿತ್ತು. ಪ್ರತಿ ಸೀನ್‌ಗೂ ಸೂರಿ ಅವರು,ಬೆಸ್ಟ್ ಹಾಗೇ ಮಾಡು, ನಿಂದೇ ಸ್ಟೈಲ್ ಬಳಸು ಅಂತಿದ್ರು. ಅಲ್ಲಿಯೇ ಒಂದು ಗೆಲುವಿನ ವೈಬ್ರೇಷನ್ ಇತ್ತು. ಆದ್ರೂ ವಿಲನ್ ಶೇಡ್ ಅಲ್ವಾ ಅಂತ ಚೂರು ಭಯ. ತ್ರಿವೇಣಿ ಥಿಯೇಟರ್ನಲ್ಲಿ ಫಸ್ಟ್ ಡೇ ಫಸ್ಟ್ ಶೋ. ಸಿನಿಮಾ ನೋಡಿ ಹೊರಬಂದೆ. ಥಿಯೇಟರ್‌ನಲ್ಲಿದ್ದ ಮುಕ್ಕಾಲು ಪಾಲು ಜನ ನನ್ನ ಬಳಿ ಬಂದು ಸೂಪರ್ ಆ್ಯಕ್ಟಿಂಗ್, ಅದ್ಭುತ ಡಾಲಿ ಅಂದ್ರು. ಅವತ್ತೇ ನಾನು ನನ್ನೊಳಗಿನ ಸೋಲಿನ ನೋವು ಮರೆತು ಬಿಟ್ಟೆ. ನನ್ನ ಗೆಳೆಯ ಒಂದು ಮಾತು ಹೇಳಿದ್ದ, ಒಂದು ವೃತ್ತಿ ಮೇಲೆ ಶ್ರದ್ಧೆಯಿಂದ ಶ್ರಮ ಹಾಕುವವನಿಗೆ ಗೆಲುವು ಒಂದಲ್ಲೊಂದು ದಿನ ಸಿಕ್ಕೇ ಸಿಗುತ್ತೆ. ತಡವಾಗಿದ್ದರೆ ಅದು ಏಳು ವರ್ಷಕ್ಕಾದರೂ ಸಿಗುತ್ತೆ. ಆಗದಿದ್ದರೆ 10 ವರ್ಷಕ್ಕಾದ್ರೂ ಸಿಕ್ಕೇ ಸಿಗುತ್ತೆ ಅಂದಿದ್ದ. ನನ್ನ ಜೀವನದಲ್ಲಿ ಅದು ನಿಜವಾಗಿದೆ. ಸುದೀರ್ಘವಾದ ಒಂದು ಸೋಲಿನ ಪಯಣ ‘ಟಗರು’ ಮೂಲಕ ಅಂತ್ಯ ಕಂಡಿತು.

ನಿರ್ಮಾಪಕ ಎನಿಸಿಕೊಳ್ಳುವುದು ಸುಲಭ ಅಲ್ಲ..

ರಂಗಭೂಮಿ, ಸಿನಿಮಾ ಗೆಳೆಯರೆಲ್ಲ ಸೇರಿ ಬಡವ ರಾಸ್ಕಲ್ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಇದು ಇನ್ನೊಂದು ರೂಪಾಂತರ. ಹಾಗಂತ ಇನ್ನೇನೋ ಸಂಪಾದಿಸಿಕೊಳ್ಳುವ ಹಪಾಹಪಿ ಅಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಸ್ವಭಾವ ನನ್ನದು. ನಿರ್ಮಾಣ ಎನ್ನುವುದು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಪ್ರಯತ್ನವಷ್ಟೇ. ಹಾಗಂತ ನಿರ್ಮಾಪಕನಾಗುವುದು ಅಷ್ಟು ಸುಲಭವಲ್ಲ. ನಾನು ಸೋಲಿನ ದಿನಗಳಲ್ಲಿ ಯಾಕೆ ನಿರ್ಮಾಪಕರು ನನ್ನನ್ನು ತಿರಸ್ಕರಿಸುತ್ತಿದ್ದರು ಅಂತ ಈಗ ಅರ್ಥವಾಗುತ್ತಿದೆ. ಗೆಲುವು ತುಂಬಾ ಪಾಠ ಕಲಿಸಿದೆ. ಸಿನಿಮಾ ಎನ್ನುವುದು ಇವತ್ತು ಬರೀ ಕಲೆ ಆಗಿ ಉಳಿದಿಲ್ಲ. ಉದ್ಯಮವಾಗಿದೆ. ಬಂಡವಾಳ ಹಾಕಿ ಸಿನಿಮಾ ಮಾಡುವ ನಿರ್ಮಾಪಕನಿಗೆ ಲಾಭ ಆಗುವುದು ಕೂಡ ಮುಖ್ಯ.

Follow Us:
Download App:
  • android
  • ios