ಎಂಬಿಎ ಓದಿ ಪ್ರಸಿದ್ಧ ಶಿಲ್ಪಿಯಾಗಿದ್ದು ಹೇಗೆ? ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರೊಂದಿಗೆ ಸಂವಾದ

ದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಪುತ್ಥಳಿ ಹಾಗೂ ಕೇದಾರನಾಥದಲ್ಲಿರುವ ಆದಿ ಗುರು ಶಂಕರಾಚಾರ್ಯ ಅವರ ಪ್ರತಿಮೆಯನ್ನು ಕೆತ್ತಿದ ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಕನ್ನಡಪ್ರಭದ ಸೋದರಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದರೊಂದಿಗೆ ತಮ್ಮ ಕುಟುಂಬ ಮುಂದುವರೆಸಿಕೊಂಡು ಬಂದ ಶಿಲ್ಪಕಲಾ ಪರಂಪರೆ, ರಾಷ್ಟ್ರಮಟ್ಟದಲ್ಲಿ ವಿಗ್ರಹಗಳ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ ಖ್ಯಾತ ಶಿಲ್ಪಿಅರುಣ್‌ ಯೋಗಿರಾಜ್‌, 

How to study MBA and become a famous sculptor

ಭಾವನಾ ನಾಗಯ್ಯ

ನೀವು ಕೆತ್ತನೆ ಮಾಡಿರುವ ಪುತ್ಥಳಿಗಳ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ. ಈ ಬಗ್ಗೆ ನಿಮಗೆ ಏನು ಅನಿಸುತ್ತದೆ?

ಶಿಲ್ಪಕಾರ ಕುಟುಂಬದಲ್ಲಿ ಜನಸಿದ್ದಕ್ಕೆ ನನಗೆ ಹೆಮ್ಮೆಯಿದೆ. ನನ್ನ ತಾತ ಹಾಗೂ ತಂದೆಯ ಮೂಲಕವೇ ನಾನು ಶಿಲ್ಪಕಲೆ ತರಬೇತಿ ಪಡೆದುಕೊಂಡಿದ್ದೇನೆ. ಕಲ್ಲಿನಲ್ಲಿ ಜೀವ ತುಂಬುವ ಕಲೆಯನ್ನು ಅವರು ನನಗೆ ಕಲಿಸಿಕೊಟ್ಟಿದ್ದಾರೆ. ನಮ್ಮ ಕೇಂದ್ರ ಸರ್ಕಾರ ಹಾಗೂ ಸಂಸ್ಕೃತಿ ಸಚಿವಾಲಯವು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪುತ್ಥಳಿ ನಿರ್ಮಾಣಕ್ಕಾಗಿ ನನ್ನನ್ನು ಆಯ್ಕೆ ಮಾಡಿ ನನಗೆ ಅವಕಾಶವನ್ನು ಕೊಟ್ಟಿತ್ತು. ಅವರಿಗೆ ನಾನು ಆಭಾರಿಯಾಗಿದ್ದೇನೆ. ಪ್ರಧಾನಿ ಮೋದಿಯವರು ನಾನು ಕೆತ್ತಿದ ನೇತಾಜಿ ಪುತ್ಥಳಿಯನ್ನು ಅನಾವರಣಗೊಳಿಸಿದ್ದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ.

ಕಳೆದ 250 ವರ್ಷಗಳಿಂದಲೂ ನಿಮ್ಮ ಕುಟುಂಬ ಕೆತ್ತನೆ ಮಾಡಿಕೊಂಡು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿ.

ನನ್ನ ತಾತ ಬಿ.ಬಸವಣ್ಣ ಶಿಲ್ಪಿ ಅವರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು. ನನ್ನ ತಂದೆ ಹಾಗೂ ನನ್ನ ಗುರುವೂ ಆಗಿರುವ ಬಿ.ಎಸ್‌.ಯೋಗಿರಾಜ್‌ ಶಿಲ್ಪಿ ಕೂಡಾ ಶಿಲ್ಪ ಕೆತ್ತನೆಯನ್ನೇ ಮಾಡಿಕೊಂಡು ಬಂದವರು. 11 ವರ್ಷದಲ್ಲಿದ್ದಾಗಲೇ ನಾನು ಶಿಲ್ಪಕಲೆ ಬಗ್ಗೆ ತರಬೇತಿ ಪಡೆದುಕೊಳ್ಳಲು ಆರಂಭಿಸಿದೆ. ಎಂಬಿಎ ಮುಗಿಸಿದ ಬಳಿಕ 2008ರಲ್ಲಿ ಪೂರ್ಣಾವಧಿ ಶಿಲ್ಪಿಯಾಗಬೇಕೆಂದು ನಿರ್ಧರಿಸಿದೆ. ಹಲವಾರು ತಲೆಮಾರುಗಳಿಂದ ನಮ್ಮ ಕುಟುಂಬದಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸುವ ಅವಕಾಶ ನನಗೆ ಈಗ ಸಿಕ್ಕಿದ್ದು ನನ್ನ ಭಾಗ್ಯ.

ಬೇರೆ ಉದ್ಯೋಗ ಮಾಡುವ ಅವಕಾಶಗಳಿದ್ದರೂ ನೀವು ಶಿಲ್ಪಕಲೆಯನ್ನೇ ಆಯ್ದುಕೊಂಡಿದ್ದೇಕೆ?

ಬಾಲ್ಯದಿಂದಲೇ ನಾನು ಕಲ್ಲು ಕೆತ್ತನೆ ಕೆಲಸ ನೋಡುತ್ತಾ ಬಂದಿದ್ದೆ. 11 ವರ್ಷದವನಾಗಿದ್ದಾಗ ಸರಿಯಾದ ತರಬೇತಿ ಪಡೆಯಲು ಆರಂಭಿಸಿದೆ. ಹೀಗಾಗಿ ನನ್ನ ಶಿಕ್ಷಣ ಹಾಗೂ ಶಿಲ್ಪಕಲೆ ತರಬೇತಿ ಒಟ್ಟಿಗೇ ಸಾಗುತ್ತಿತ್ತು. ಬಿಡುವಿನ ಅವಧಿಯಲ್ಲಿ ತಂದೆಗೂ ಕೆತ್ತನೆ ಕಾರ್ಯದಲ್ಲಿ ನೆರವಾಗುತ್ತಿದ್ದೆ. ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಎ ಮುಗಿಸಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಬಳಿಕ ನನಗೆ ನನ್ನ ನಿಜವಾದ ಸಂತೋಷ ಶಿಲ್ಪಕಲೆಯಲ್ಲಿಯೇ ಅಡಗಿದೆ ಎಂದು ಅರಿವಾಯಿತು. ಮನೆಯಲ್ಲಿ ಇದನ್ನು ತಿಳಿಸಿದಾಗ ನನ್ನ ತಾಯಿ ಒಪ್ಪಲಿಲ್ಲ. ಏಕೆಂದರೆ ನನ್ನ ತಂದೆ ಧೂಳಿನಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಅವರು ಕಂಡಿದ್ದರು. ಸುಮಾರು 2 ವರ್ಷ ಕಾಲ ನಾನು ಅವರ ಮನವೊಲಿಸಲು ಪ್ರಯತ್ನಿಸುತ್ತಲೇ ಇದ್ದೆ. ಬಳಿಕ ನನ್ನ ತಂದೆ ಹೊರಗಿನಿಂದ ಪುತ್ಥಳಿಗಳನ್ನು ಕೆತ್ತಿಸಿ ಮಾರಾಟ ಮಾಡಬಾರದು. ಕೇವಲ ಹಣ ಗಳಿಸುವುದಕ್ಕಾಗಿ ಮಾತ್ರವಲ್ಲ ಕಲೆಗೆ ಕೊಡುಗೆ ನೀಡಲು ನೀನು ಶಿಲ್ಪಿಯಾಗಲು ಬಯಸಿದ್ದರೆ ಮಾತ್ರ ನಿನಗೆ ಇದಕ್ಕೆ ಅವಕಾಶ ನೀಡುತ್ತೇನೆ ಎಂಬ ಷರತ್ತು ವಿಧಿಸಿದರು. ಅದನ್ನು ಒಪ್ಪಿ, ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಶಿಲ್ಪಿಯಾದೆ.

ಕೇದಾರನಾಥದಲ್ಲಿ ಆದಿ ಗುರು ಶಂಕರಾಚಾರ್ಯರ ಪುತ್ಥಳಿ ನಿರ್ಮಾಣದ ಬಗ್ಗೆ ಹೇಳುತ್ತೀರಾ?

ಕೇದಾರನಾಥದಲ್ಲಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣಕ್ಕಾಗಿ ಇಡೀ ದೇಶಾದ್ಯಂತ ಶಿಲ್ಪಿಗಳಿಗಾಗಿ ಹುಡುಕಾಟ ನಡೆದಿತ್ತು. ಹಂಪಿ ವಿಶ್ವವಿದ್ಯಾಲಯದ ದೃಶ್ಯಕಲೆ ವಿಭಾಗದ ಮುಖ್ಯಸ್ಥ ಮೋಹನ್‌ ಪಾಂಚಾಲ್‌ ಅವರು ನನಗೆ ಈ ಬಗ್ಗೆ ತಿಳಿಸಿ, ನಾನು ಹಿಂದೆ ನಿರ್ಮಿಸಿದ ಪ್ರತಿಮೆಗಳ ಫೋಟೋ ಕಳಿಸಲು ತಿಳಿಸಿದರು. ಪ್ರತಿ ರಾಜ್ಯದಿಂದಲೂ ಹೀಗೆ ಶಿಲ್ಪಕಾರರನ್ನು ಆಹ್ವಾನಿಸಲಾಗಿತ್ತು. ನಾನು ಕರ್ನಾಟಕದಿಂದ ಆಯ್ಕೆಯಾಗಿದ್ದೆ. ಅಲ್ಲಿ ನಮಗೆಲ್ಲ ಆದಿ ಶಂಕರಾಚಾರ್ಯರ ಚಿಕ್ಕ ಪ್ರತಿಮೆಯನ್ನು 20 ದಿನಗಳಲ್ಲಿ ಕೆತ್ತುವಂತೆ ತಿಳಿಸಿದರು. ಇದನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲು ಕೆತ್ತಬೇಕು ಎಂದು ತಿಳಿಸಿದರು. ಬಳಿಕ ನಾನು ಶೃಂಗೇರಿ ಮಠದವರನ್ನು ಸಂಪರ್ಕಿಸಿ ಶಂಕರಾಚಾರ್ಯರ ಜೀವನ, ದೇಹದ ಆಕಾರ, ಅವರು ದೇಶದ ಪ್ರವಾಸ ಕೈಗೊಂಡಾಗ ಅವರ ವಯಸ್ಸು ಎಷ್ಟಾಗಿತ್ತು ಎಂಬ ಮಾಹಿತಿಯನ್ನು ಕಲೆಹಾಕಲು ಆರಂಭಿಸಿದೆ. ನನ್ನ ಬಳಿ ಆದಿ ಶಂಕರಾಚಾರ್ಯರ ಒಂದು ಫೋಟೋ ಇತ್ತು. ನನಗೆ 360 ಡಿಗ್ರಿ ಕೋನದಲ್ಲಿ ಅವರ ಚಿತ್ರ ಬೇಕಾಗಿದ್ದರಿಂದ ನಾನು ಅದೇ ಮಾದರಿಯಲ್ಲಿ ಬಟ್ಟೆಧರಿಸಿ ಪ್ರತಿಯೊಂದು ಕೋನದಲ್ಲಿ ಯಾವ ರೀತಿ ಕೆತ್ತನೆ ಮಾಡಬೇಕು ಎಂಬುದನ್ನು ಅಧ್ಯಯನ ಮಾಡಿ ಪುತ್ಥಳಿ ನಿರ್ಮಿಸಿಕೊಟ್ಟಿದ್ದೆ. ದೇಶದ ವಿವಿಧ ಭಾಗಗಳಿಂದ ಇದೇ ರೀತಿ 8 ಮೂರ್ತಿಗಳನ್ನು ಪ್ರಧಾನಿಯವರಿಗೆ ಕಳುಹಿಸಿಕೊಡಲಾಯಿತು. ಬಳಿಕ ನನಗೆ ಪ್ರಧಾನಿ ಕಚೇರಿಯಿಂದ ಕರೆ ಬಂತು. ನನ್ನ ಮಾದರಿ ಆಯ್ಕೆಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಬೇಕಾಗಿಲ್ಲ ಎಂದು ತಿಳಿಸಲಾಯಿತು. ಅದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ಕೇದಾರದ ಆದಿ ಶಂಕರರ ಮೂರ್ತಿ ಕೆತ್ತನೆಗೆ ಕೃಷ್ಣಶಿಲೆಯನ್ನು ಬಳಸಲಾಗಿದೆ. 12 ಅಡಿ ಎತ್ತರದ ಮೂರ್ತಿಯನ್ನು ಕೆತ್ತಬೇಕು ಎಂದು ನಿರ್ದೇಶನ ನೀಡಲಾಗಿತ್ತು. ವಾಯುಪಡೆಯು ಈ ಮೂರ್ತಿಯನ್ನು ಕೇದಾರನಾಥಕ್ಕೆ ಸಾಗಿಸಬೇಕಾಗಿದ್ದರಿಂದ ಪುತ್ಥಳಿಯ ಭಾರದ ಮಿತಿ ಬಗ್ಗೆಯೂ ನಿರ್ದೇಶನ ನೀಡಲಾಗಿತ್ತು. ಅದರಂತೇ ನಾನು ಪುತ್ಥಳಿಯನ್ನು ನಿರ್ಮಾಣ ಮಾಡಿದೆ. ಇಡೀ ಭಾರತವೇ ಇದನ್ನು ಮೆಚ್ಚಿಕೊಂಡಿದ್ದು ನನಗೆ ತೃಪ್ತಿ ನೀಡಿದೆ.

ಪುತ್ಥಳಿಗಳನ್ನು ನಿರ್ಮಾಣ ಮಾಡಲು ಯಾವ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ?

ಪುತ್ಥಳಿ ನಿರ್ಮಾಣ ಕಾರ್ಯಕ್ಕೂ ಮೊದಲು ಸಾಕಷ್ಟುಸಂಶೋಧನೆ ಹಾಗೂ ಅಧ್ಯಯನ ಅಗತ್ಯ. ಉದಾ: ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ ಮಾಡುವಾಗ ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಕಲ್ಲಿನಲ್ಲಿ ಜೀವಂತಿಕೆ ತುಂಬಬೇಕಾದರೆ ಇದನ್ನು ಮಾಡಲೇಬೇಕು. ಜನರು ಪ್ರತಿಮೆಯನ್ನು ನೋಡಿದಾಗ ಅದನ್ನು ಅನುಭವಿಸಿದ್ದಾರೆ. ಪ್ರತಿ ಬಾರಿಯೂ ಪುತ್ಥಳಿಯನ್ನು ನಿರ್ಮಾಣ ಮಾಡುವಾಗ 180 ಡಿಗ್ರಿ ಕೋನದ ಫೋಟೋವನ್ನು ನೀಡಲಾಗುತ್ತದೆ. ಆದರೆ ನಾವು ಅದನ್ನು ಬಳಸಿ 360 ಡಿಗ್ರಿ ಕೋನದ ಪ್ರತಿಮೆಯನ್ನು ನಿರ್ಮಾಣ ಮಾಡುತ್ತೇವೆ. ಸಾಂಪ್ರದಾಯಿಕ ದೇವ, ದೇವತೆಯರ ಮೂರ್ತಿಗಳನ್ನು ಕೆತ್ತುವುದಕ್ಕೂ ವ್ಯಕ್ತಿಯೊಬ್ಬರ ಪುತ್ಥಳಿ ನಿರ್ಮಿಸುವುದಕ್ಕೂ ಭಾರೀ ವ್ಯತ್ಯಾಸವಿದೆ. ಇದಕ್ಕೆ ವ್ಯಕ್ತಿಯೊಬ್ಬನ ಅಂಗ ರಚನಾ ಶಾಸ್ತ್ರವನ್ನು ಅಧ್ಯಯನ ಮಾಡಬೇಕಾಗುತ್ತದೆ. ವಯಸ್ಸಾದಂತೆ ತಲೆ ಬುರುಡೆ, ಮುಖದ ಸ್ನಾಯುಗಳಲ್ಲಿ ಸಾಕಷ್ಟುಬದಲಾವಣೆಗಳಾಗುತ್ತವೆ. ಇವುಗಳ ಅರಿವೂ ಶಿಲ್ಪಿಗಿರಬೇಕು. ಕಲ್ಲು ಕೆತ್ತನೆ ಮಾಡುವಾಗ ನಿಮಗೇ ಒಂದೇ ಅವಕಾಶ ಸಿಗುತ್ತದೆ. ಒಂದು ಸಣ್ಣ ತಪ್ಪು ಆಗದಂತೆ ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿರುತ್ತದೆ.

ರಾಷ್ಟ್ರಮಟ್ಟದಲ್ಲಿ ಪುತ್ಥಳಿಗಳನ್ನು ನಿರ್ಮಾಣ ಮಾಡುವಾಗ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ?

ನನಗೆ ವಿಶೇಷವಾಗಿ ಸಾರ್ವಜನಿಕ ಪ್ರದರ್ಶನಕ್ಕಿಡುವ ಪುತ್ಥಳಿಗಳನ್ನು ನಿರ್ಮಾಣ ಮಾಡುವುದು ಇಷ್ಟ. ಏಕೆಂದರೆ ಸಾವಿರಾರು ಜನರು ನನ್ನ ಕಲೆಯನ್ನು ನೋಡಲು ಇದರಿಂದ ಸಾಧ್ಯವಾಗುತ್ತದೆ. ಆದರೆ ಇಂತಹ ಪುತ್ಥಳಿಗಳ ನಿರ್ಮಾಣದಲ್ಲಿ ಸಣ್ಣ ತಪ್ಪಾದರೂ ಅದು ಬಹಳ ದೊಡ್ಡದೆನಿಸುತ್ತದೆ. ಪುತ್ಥಳಿಗಳ ನಿರ್ಮಾಣದಲ್ಲಿ ನಡೆದ ತಪ್ಪುಗಳನ್ನು ಗುರುತಿಸಿ ಟೀಕಿಸುವವರೂ ಇದ್ದಾರೆ. ಟೀಕಾಕಾರರ ಸಲಹೆಗಳನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ತಪ್ಪುಗಳು ಮರುಕಳಿಸದಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ.

ಪ್ರಧಾನಿ ಮೋದಿಯವರನ್ನು ಭೇಟಿಯಾದ ಕ್ಷಣ ಹೇಗಿತ್ತು?

ಶಂಕರಾಚಾರ್ಯರರ ಪ್ರತಿಮೆಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ನನ್ನನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಪ್ರಧಾನಿ ಬಯಸಿದ್ದಾರೆ ಎಂದು ಅವರ ಕಚೇರಿ ತಿಳಿಸಿತ್ತು. ನಮ್ಮ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಕೂಡಾ ಪ್ರಧಾನಿ ಭೇಟಿಗೆ ನೆರವಾದರು. ಆದರೆ ಕಾರಣಾಂತರಗಳಿಂದ ಭೇಟಿಯು ಮುಂದೂಡಲ್ಪಟ್ಟಿತ್ತು. ಅದೇ ವೇಳೆ ಪ್ರಧಾನಿಯವರು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪುತ್ಥಳಿಯನ್ನು ನಿರ್ಮಿಸುವುದಾಗಿ ಘೋಷಿಸಿ, ಹಾಲೋಗ್ರಾಂ ಪ್ರತಿಮೆ ಅನಾವರಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ನೇತಾಜಿಯವರ ಚಿಕ್ಕ ಪ್ರತಿಮೆಯನ್ನು ನಿರ್ಮಿಸಿ ಪ್ರಧಾನಿಯವರಿಗೆ ಭೇಟಿಯಾದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. ಏಪ್ರಿಲ್‌ ತಿಂಗಳಲ್ಲಿ ಪ್ರಧಾನಿಯವರನ್ನು ಭೇಟಿಯಾದೆ. ಅವರು ನನ್ನನ್ನು ಭೇಟಿಯಾದ ಬಗ್ಗೆ ಟ್ವೀಟ್‌ ಕೂಡಾ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸುಭಾಷ್‌ ಚಂದ್ರ ಬೋಸ್‌ ಚಿಕ್ಕ ಪ್ರತಿಮೆಯನ್ನು ನೋಡಿ ಮೋದಿಯವರು ಮೆಚ್ಚಿಕೊಂಡಿದ್ದು, ನನಗೆ ಇನ್ನೊಂದು ಅವಕಾಶ ಹುಡುಕಿಕೊಂಡು ಬರಲು ಕಾರಣವಾಯಿತು.

ನೇತಾಜಿ ಪುತ್ಥಳಿಯ ನಿರ್ಮಾಣಕ್ಕೆ ನಿಮ್ಮನ್ನು ಆಯ್ಕೆ ಮಾಡಿಕೊಂಡಾಗ ಏನನ್ನಿಸಿತು?

ಜನವರಿ ತಿಂಗಳಲ್ಲಿ ಸಾಂಸ್ಕೃತಿಕ ಸಚಿವಾಲಯದಿಂದ ದೇಶದ 7 ಶಿಲ್ಪಕಾರರಿಗೆ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಆಹ್ವಾನಿಸಲಾಗಿತ್ತು. ನೇತಾಜಿಯವರ ಮೂರ್ತಿಯನ್ನು ಕಪ್ಪು ಗ್ರಾನೈಟ್‌ನಲ್ಲಿ ಕೆತ್ತಲು ನಿರ್ಧರಿಸಲಾಗಿತ್ತು. ದಕ್ಷಿಣ ಭಾರತದಿಂದ ನಾನೊಬ್ಬನೇ ಆಯ್ಕೆಯಾಗಿದ್ದೆ. ಬಳಿಕ ಜೂನ್‌ನಲ್ಲಿ ಪ್ರಧಾನಿಯವರು ನೇತಾಜಿ ಪುತ್ಥಳಿಯ ನಿರ್ಮಾಣದ ಕಾರ್ಯಕ್ಕೆ ನನ್ನನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದರು. 6 ತಿಂಗಳಲ್ಲಿ ಪೂರ್ತಿ ವಿಗ್ರಹವನ್ನು ನಿರ್ಮಾಣ ಮಾಡಬೇಕಾಗಿತ್ತು. ಗ್ರಾನೈಟ್‌ ಅತ್ಯಂತ ಕಠಿಣವಾದ ಕಲ್ಲು. ಹೀಗಾಗಿ ಮೂರ್ತಿ ಕೆತ್ತನೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಕೊನೆಯ 2 ತಿಂಗಳಲ್ಲಿ ತಮಿಳ್ನಾಡು ಹಾಗೂ ರಾಜಸ್ಥಾನದ ಶಿಲ್ಪಕಾರರನ್ನೂ ಕೂಡಾ ನನ್ನೊಂದಿಗೆ ಕೈಜೋಡಿಸಲು ಆಹ್ವಾನಿಸಿದೆ. ಅವರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಈ ಕೆಲಸಕ್ಕೆ ಕೈಜೋಡಿಸಿದರು. ನಾನು ನೇತಾಜಿ ಪುತ್ಥಳಿ ನಿರ್ಮಾಣಕ್ಕೂ ಮುನ್ನ ಅವರ 600ಕ್ಕೂ ಹೆಚ್ಚು ಫೋಟೋಗಳನ್ನು ಸಂಗ್ರಹಿಸಿದ್ದೆ. ಅವರ ಅಂಗರಚನಾ ಶಾಸ್ತ್ರ , ಮುಖದ ರಚನೆಯ ಬಗ್ಗೆ ಸಾಕಷ್ಟುಅಧ್ಯಯನ ನಡೆಸಿದ್ದೆ. ಒಟ್ಟು 280 ಟನ್‌ ಕಲ್ಲು ಬಳಸಲಾಗಿತ್ತು. ಕಲ್ಲುಗಳನ್ನು ತಿರುಗಿಸಲು, ಸರಿಸಲು ಕ್ರೇನ್‌ಗಳನ್ನು ಬಳಸುತ್ತಿದ್ದೆವು. ಕೆತ್ತನೆಯ ಬಳಿಕ ನೇತಾಜಿ ಪುತ್ಥಳಿ 60 ಟನ್‌ನಷ್ಟುತೂಗುತ್ತದೆ. 75 ದಿನಗಳಲ್ಲೇ ನಾವು ಮೂರ್ತಿ ನಿರ್ಮಾಣ ಕಾರ್ಯ ಮುಗಿಸಿದ್ದೇವೆ.

ನಿಮ್ಮ ಪ್ರಕಾರ ದೇಶದ ಅತ್ಯುತ್ತಮ ಶಿಲ್ಪ ಕಲಾಕೃತಿ ಯಾವುದು?

ನನ್ನ ಪ್ರಕಾರ ಅತ್ಯುತ್ತಮ ಶಿಲ್ಪ ಕಲಾಕೃತಿಗಳು ಬೇಲೂರು, ಹಳೇಬೀಡಿನಲ್ಲಿವೆ. ಸಾವಿರಾರು ವರ್ಷಗಳ ಹಿಂದಿನ ಆ ಮೂರ್ತಿಗಳನ್ನು ನೋಡಿದಾಗ ನಾನಿನ್ನೂ ಕಲಿಯಬೇಕಾಗಿರುವ ಸೂಕ್ಷ್ಮತೆಗಳು ಸಾಕಷ್ಟಿವೆ ಎನಿಸುತ್ತದೆ.

Latest Videos
Follow Us:
Download App:
  • android
  • ios