1.ನಿಮ್ಮ ಪರಿಚಯ ಹೇಳಿ

ಪೂರ್ತಿ ಹೆಸರು ರೀಷ್ಮಾ ನಾಣಯ್ಯ. ಮೂಲತಃ ಕೊಡಗಿನ ಹುಡುಗಿ. ಆದರೆ, ಇರೋದು ಬೆಂಗಳೂರಿನಲ್ಲಿ. ಸದ್ಯ ಈಗ ಪಿಯುಸಿ ಪರೀಕ್ಷೆ ಬರೆದಿರುವೆ. ಇನ್ನೊಂದು ಸಬ್‌ ಜೆಕ್ಟ್ ಇತ್ತು. ಕೊರೋನಾ ಭೀತಿಯಿಂದ ಪರೀಕ್ಷೆ ನಿಲ್ಲಿಸಿದ್ದಾರೆ. ಏಕ್‌ ಲವ್‌ ಯಾ ನನ್ನ ಮೊದಲ ಸಿನಿಮಾ. ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರೇಮ್‌ ಅವರು ನನ್ನ ನೋಡಿ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ದೊಡ್ಡ ನಿರ್ದೇಶಕರು, ದೊಡ್ಡ ಬ್ಯಾನರ್‌ ಮೂಲಕ ಮೊದಲ ಹೆಜ್ಜೆ ಇಟ್ಟಿರುವೆ. ನಾನು ಲಕ್ಕಿ ನಟಿ.

2.ಮೊದಲ ದಿನ, ಮೊದಲ ದೃಶ್ಯ ಹೇಗಿತ್ತು?

ಒಂದು ದೊಡ್ಡ ಬಿಲ್ಡಿಂಗ್‌. ಅದರ ಮೇಲಿಂದ ಜಂಪ್‌ ಮಾಡುವ ದೃಶ್ಯ. ಇದು ಮೊದಲ ದಿನದ ಶೂಟಿಂಗ್‌ ಸೀನ್‌. ಬಿಲ್ಡಿಂಗ್‌ ಮೇಲೆ ನಿಂತಿದ್ದೆ. ರೋಪ್‌ ಕಟ್ಟಿದ್ದರು. ಆದರೂ ಸ್ವಲ್ಪ ಭಯ ಶುರುವಾಯಿತು. ನಿರ್ದೇಶಕ ಪ್ರೇಮ್‌ ಅವರು ಧೈರ್ಯ ಹೇಳಿದ್ದರು. ಸಿನಿಮಾ ಎಂದ ಮೇಲೆ ಇಂಥ ಸಾಹಸಗಳು ಇದ್ದಿದ್ದೇ. ಎಂದು ಕಣ್ಣು ಮುಚ್ಚಿ ಒಮ್ಮೆ ನನ್ನ ಸಿನಿಮಾ ಕನಸುಗಳನ್ನು ನೆನಪಿಸಿಕೊಂಡು ಜಂಪ್‌ ಮಾಡಿದೆ. ನಿರ್ದೇಶಕರು ಓಕೆ ಅಂದ್ರು. ಆಗ ನನಗೆ ಸಿನಿಮಾಗಳಲ್ಲಿ ನಟಿಸುವ ವಿಶ್ವಾಸ ಮೂಡಿತು.

3. ಚಿತ್ರದಲ್ಲಿ ನಿಮ್ಮ ಪಾತ್ರ ನಿಭಾಯಿಸಲು ನಿಮಗೆ ಸಾಧ್ಯವಾಗಿದ್ದು ಹೇಗೆ?

ಸಹ ನಟ ರಾಣಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್‌ ಅವರು. ಯಾಕೆಂದರೆ ರಾಣಾ ಅವರಿಗೂ ಮೊದಲ ಸಿನಿಮಾ ಎನ್ನುವ ಧೈರ್ಯ ನನಗೆ ಇತ್ತು. ಜತೆಗೆ ನಿರ್ದೇಶಕ ಪ್ರೇಮ್‌ ಮತ್ತು ಅವರ ತಂಡ ನನಗೆ ಹೇಳಿಕೊಟ್ಟರೀತಿಯೇ ಮೊದಲ ಚಿತ್ರವಾದರೂ ತುಂಬಾ ಕಂಫರ್ಟ್‌ ಆಗಿ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಯಿತು.

4. ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ಅದ್ಭುತ ಪ್ರೇಮಿಯ ಪಾತ್ರ. ಪ್ರೀತಿ- ಪ್ರೇಮದ ಕತೆ ಎಂದ ಮೇಲೆ ನಾಯಕಿ ಸುತ್ತ ಎನೆಲ್ಲ ನಡೆಯುತ್ತವೆ ಎಂಬುದು ನನ್ನ ಪಾತ್ರದ ಸುತ್ತಲೂ ಆಗುತ್ತದೆ. ಆದರೆ, ಇಲ್ಲಿ ನನ್ನ ಜತೆಗೆ ರಚಿತಾ ರಾಮ್‌ ಅವರೂ ಇದ್ದರೆ. ಒಬ್ಬ ನಾಯಕ, ಇಬ್ಬರು ನಟಿಯರು. ಹೀಗಾಗಿ ನನ್ನ ಪಾತ್ರದಲ್ಲಿ ಕೊಂಚ ಸಸ್ಪೆನ್ಸ್‌ ಇರುತ್ತದೆ.

5. ಚಿತ್ರದ ಟೀಸರ್‌ ಬಂದಿದೆ. ನಿಮಗೆ ಏನನಿಸುತ್ತಿದೆ?

ದೊಡ್ಡ ಪರದೆ ಮೇಲೆ ನನ್ನ ನಾನೇ ನೋಡಿಕೊಂಡೆ. ಒಂದು ಕ್ಷಣ ಅಚ್ಚರಿ ಆಯ್ತು. ನಾವು ಮಾಡಿದ ದೃಶ್ಯಗಳು ಸಿನಿಮಾ ಆಗಿ ಹೀಗೆ ಬರುತ್ತವೆಯೇ ಎಂದು ಮತ್ತಷ್ಟುಕುತೂಹಲ ಮೂಡಿತು. ಇಡೀ ಸಿನಿಮಾ ಹೇಗಿರಬಹುದು ಎನ್ನುವ ಹತ್ತಾರು ಕಲ್ಪನೆಗಳು ಚಿತ್ರದ ಟೀಸರ್‌ ನನ್ನಲ್ಲಿ ಹುಟ್ಟು ಹಾಕಿದೆ.