ಭಾರತದಲ್ಲಿ ಸಬ್-4 ಮೀಟರ್ ಎಸ್‌ಯುವಿ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರಮುಖ ಕಂಪನಿಗಳು ಹೊಸ ಮಾಡೆಲ್‌ಗಳನ್ನು ತರುತ್ತಿವೆ. ಹ್ಯುಂಡೈ, ರೆನಾಲ್ಟ್, ಮಾರುತಿ, ಟಾಟಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಎಲೆಕ್ಟ್ರಿಕ್, ಸಿಎನ್‌ಜಿ ಹಾಗೂ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ.

ಭಾರತದಲ್ಲಿ ಸಬ್-4 ಮೀಟರ್ ಎಸ್‌ಯುವಿ ಮಾರುಕಟ್ಟೆ ಸಿಕ್ಕಾಪಟ್ಟೆ ವೇಗವಾಗಿ ಬೆಳೆಯುತ್ತಿದೆ. ಸಿಟಿಯ ಟ್ರಾಫಿಕ್‌ನಲ್ಲಿ ಓಡಿಸಲು ಸುಲಭ, ಪಾರ್ಕಿಂಗ್‌ಗೆ ಕಡಿಮೆ ಜಾಗ ಸಾಕು, ಜೊತೆಗೆ ಬೆಲೆಯೂ ಕೈಗೆಟುಕುವಂತಿರುತ್ತದೆ. ಇದೇ ಕಾರಣಕ್ಕೆ ಜನ ಈ ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಟ್ರೆಂಡ್ ಕ್ಯಾಶ್ ಮಾಡಿಕೊಳ್ಳಲು ಪ್ರಮುಖ ಕಾರು ಕಂಪನಿಗಳು ಮುಂದಿನ ಒಂದು ವರ್ಷದಲ್ಲಿ ಹಲವು ಹೊಸ ಸಬ್-4 ಮೀಟರ್ ಎಸ್‌ಯುವಿಗಳನ್ನು ಮಾರುಕಟ್ಟೆಗೆ ತರುತ್ತಿವೆ. ಹ್ಯುಂಡೈ, ರೆನಾಲ್ಟ್, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.

ಹ್ಯುಂಡೈ HE1i

ಹ್ಯುಂಡೈ ಕಂಪನಿಯು ಭಾರತದಲ್ಲಿ ಹೊಸ ಸಣ್ಣ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಸದ್ಯಕ್ಕೆ 'HE1i' ಎಂಬ ಕೋಡ್ ಹೆಸರಿನಲ್ಲಿ ಈ ಕಾರಿನ ಟೆಸ್ಟಿಂಗ್ ಶುರುವಾಗಿದೆ. ಕಂಪನಿಯ E-GMP (K) ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಮೇಲೆ ಈ ಕಾರು ತಯಾರಾಗುವ ನಿರೀಕ್ಷೆಯಿದೆ. ಇದರಲ್ಲಿ 42kWh ಮತ್ತು 49kWh ಬ್ಯಾಟರಿ ಆಯ್ಕೆಗಳು ಸಿಗಬಹುದು. ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸುಮಾರು 500 ಕಿಲೋಮೀಟರ್ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಬ್ಯಾಟರಿ ಸಾಮರ್ಥ್ಯ ಮತ್ತು ರೇಂಜ್ ಬಗ್ಗೆ ಕಾರು ಲಾಂಚ್ ಆಗುವಾಗಷ್ಟೇ ಪಕ್ಕಾ ಮಾಹಿತಿ ಸಿಗಲಿದೆ.

ರೆನಾಲ್ಟ್ ಕೈಗರ್ ಸಿಎನ್‌ಜಿ

ರೆನಾಲ್ಟ್ ಕಂಪನಿಯು ತನ್ನ ಜನಪ್ರಿಯ 'ಕೈಗರ್' ಕಾರನ್ನು ಭಾರಿ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ತರುತ್ತಿದೆ. ಹಳೆಯ CMF-A+ ಪ್ಲಾಟ್‌ಫಾರ್ಮ್ ಬದಲು ಹೊಸ RGEP ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಕೈಗರ್ ತಯಾರಾಗಲಿದೆ. ಫ್ಯಾಕ್ಟರಿ ಫಿಟ್ಟೆಡ್ ಸಿಎನ್‌ಜಿ ಆಯ್ಕೆ ಈ ಕಾರಿನ ಅತಿ ದೊಡ್ಡ ಹೈಲೈಟ್. ಸಿಎನ್‌ಜಿ ಟ್ಯಾಂಕ್ ಅನ್ನು ಕಾರಿನ ಕೆಳಭಾಗದಲ್ಲಿ ಫಿಟ್ ಮಾಡುವ ಸಾಧ್ಯತೆಯಿದೆ. ಹಳೆಯ 1.0 ಲೀಟರ್ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳು ಹೊಸ ಕಾರಿನಲ್ಲೂ ಮುಂದುವರಿಯಲಿವೆ.

ಮಾರುತಿ ಫ್ರಾಂಕ್ಸ್ ಫೇಸ್‌ಲಿಫ್ಟ್

ಮಾರುತಿ ಸುಜುಕಿಯ ಸೂಪರ್ ಹಿಟ್ ಕಾರು 'ಫ್ರಾಂಕ್ಸ್' ಶೀಘ್ರದಲ್ಲೇ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ಎಂಟ್ರಿ ಕೊಡಲಿದೆ. ಹೊರಗಿನ ಡಿಸೈನ್ ಬದಲಾಗುವುದರ ಜೊತೆಗೆ ಹಲವು ಹೊಸ ಫೀಚರ್‌ಗಳನ್ನು ಕಂಪನಿ ಸೇರಿಸುತ್ತಿದೆ. ದೊಡ್ಡ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಲೆವೆಲ್ 2 ADAS ತಂತ್ರಜ್ಞಾನ ಹೊಸ ಫ್ರಾಂಕ್ಸ್‌ನಲ್ಲಿ ಇರಲಿದೆ. ಎಂಜಿನ್‌ನಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಹಳೆಯ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಬದಲು ಹೊಸ 1.2 ಲೀಟರ್ Z-ಸೀರೀಸ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಬರಬಹುದು. 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೆಯೇ ಮುಂದುವರಿಯಲಿದೆ.

ಹೊಸ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ತನ್ನ ನೆಕ್ಸ್ಟ್ ಜನರೇಷನ್ 'ನೆಕ್ಸಾನ್' ಕಾರಿನ ಅಭಿವೃದ್ಧಿಯಲ್ಲಿ ಬ್ಯುಸಿಯಾಗಿದೆ. 'ಗರುಡ್' ಎಂಬ ಇಂಟರ್ನಲ್ ಕೋಡ್ ಹೆಸರಿನಲ್ಲಿ ತಯಾರಾಗುತ್ತಿರುವ ಈ ಹೊಸ ನೆಕ್ಸಾನ್ 2027ರಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಈಗಿರುವ ಮಾಡೆಲ್‌ಗಿಂತ ಹೆಚ್ಚು ರಗಡ್ ಮತ್ತು ಸ್ಟ್ರೈಟ್ ಡಿಸೈನ್ ಅನ್ನು ಹೊಸ ಕಾರು ಹೊಂದಿರಲಿದೆ. ಕ್ಯಾಬಿನ್ ಒಳಗೂ ದೊಡ್ಡ ಮಟ್ಟದ ಬದಲಾವಣೆ ಮತ್ತು ಹೊಸ ಟೆಕ್ನಾಲಜಿ ನಿರೀಕ್ಷಿಸಬಹುದು. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳು ಮುಂದುವರಿಯಲಿವೆ. ಆದರೆ, ಡೀಸೆಲ್ ಎಂಜಿನ್ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

ಫೋಕ್ಸ್‌ವ್ಯಾಗನ್ ಹೊಸ ಸಬ್-4 ಮೀಟರ್ ಎಸ್‌ಯುವಿ

ಭಾರತೀಯ ಮಾರುಕಟ್ಟೆಗಾಗಿಯೇ ಫೋಕ್ಸ್‌ವ್ಯಾಗನ್ ಹೊಸ ಸಬ್-4 ಮೀಟರ್ ಎಸ್‌ಯುವಿಯನ್ನು ಸಿದ್ಧಪಡಿಸುತ್ತಿದೆ. 2027ರಲ್ಲಿ ಈ ಕಾರನ್ನು ಅನಾವರಣ ಮಾಡಲು ಕಂಪನಿ ಪ್ಲಾನ್ ಮಾಡಿದೆ. ಭಾರತಕ್ಕಾಗಿಯೇ ವಿಶೇಷವಾಗಿ ಅಭಿವೃದ್ಧಿಪಡಿಸಿದ MQB-A0-IN ಪ್ಲಾಟ್‌ಫಾರ್ಮ್‌ನಲ್ಲಿ ಈ ಕಾರು ತಯಾರಾಗಲಿದೆ. ಇದರ ಉತ್ಪಾದನೆ ಕೂಡ ಭಾರತದಲ್ಲೇ ನಡೆಯಲಿದೆ. ಸ್ಕೋಡಾ ಕೈಲಾಕ್ ಕಾರಿನಲ್ಲಿರುವ ಹಲವು ಫೀಚರ್‌ಗಳು ಮತ್ತು ತಂತ್ರಜ್ಞಾನ ಫೋಕ್ಸ್‌ವ್ಯಾಗನ್‌ನ ಹೊಸ ಎಸ್‌ಯುವಿಯಲ್ಲೂ ಸಿಗುವ ಸಾಧ್ಯತೆಯಿದೆ. 1.0 ಲೀಟರ್ TSI ಟರ್ಬೊ ಪೆಟ್ರೋಲ್ ಎಂಜಿನ್ ಈ ಕಾರಿಗೆ ಶಕ್ತಿ ನೀಡಲಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿರಲಿವೆ.