ಗರಿಷ್ಠ ಮಾರಾಟವಾದ ಟಾಪ್ 10 ಕಾರು, ಅಗ್ರಸ್ಥಾನದಲ್ಲಿ ವ್ಯಾಗನರ್, ನೆಕ್ಸಾನ್!
- ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಪ್ರಕಟ
- ಮಾರುತಿ ಸುಜುಕಿ ವ್ಯಾಗನರ್ ಕಾರಿಗೆ ಮೊದಲ ಸ್ಥಾನ
- ಸಬ್ ಕಾಂಪಾಕ್ಟ್ SUV ಪೈಕಿ ಟಾಟಾ ನೆಕ್ಸಾನ್‌ಗೆ ಅಗ್ರ ಸ್ಥಾನ
ನವದೆಹಲಿ(ಜು.07): ಭಾರತದಲ್ಲಿ ಕಾರುಗಳ ಮಾರಾಟ ನಿಧಾನವಾಗಿ ಚೇತರಿಸಿಕೊಂಡಿದೆ. ವಾಹನ ಬೆಲೆ ಏರಿಕೆ, ಇಂಧನ ಬೆಲೆ ಏರಿಕೆಗಳಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ಹೊಡೆತ ಬಿದ್ದಿತ್ತು. ಇದೀಗ ಮತ್ತೆ ಪುಟಿದೆದ್ದಿದೆ. ಜೂನ್ ತಿಂಗಳ ವಾಹನ ಮಾರಾಟ ಪಟ್ಟಿ ಪ್ರಕಟಗೊಂಡಿದೆ. ಟಾಪ್ ಕಾರುಗಳ ಪೈಕಿ ಮಾರುತಿ ಸುಜುಕಿ ವ್ಯಾನಗರ್ ಕಾರು ಮೊದಲ ಸ್ಥಾನದಲ್ಲಿದ್ದರೆ, ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಟಾಟಾ ನೆಕ್ಸಾನ್ ಕಾರು ಅಗ್ರಸ್ಥಾನದಲ್ಲಿದೆ.
ಕಳೆದ ಕೆಲ ತಿಂಗಳುಗಳಿಂದ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ವ್ಯಾಗನರ್ 2022 ಜೂನ್ ತಿಂಗಳಲ್ಲೂಅಗ್ರ ಸ್ಥಾನದಲ್ಲಿ ಮುಂದುವರಿದಿದೆ.ಜೂನ್ ತಿಂಗಳಲ್ಲಿ ಮಾರುತಿ ವ್ಯಾಗನರ್ 19,190 ಕಾರುಗಳು ಮಾರಾಟವಾಗಿದೆ.ಮೇ ತಿಂಗಳಲ್ಲೂ ವ್ಯಾನಗರ್ ಮೊದಲ ಸ್ಥಾನ ಕಾಪಾಡಿಕೊಂಡಿತ್ತು. ಮೇ ತಿಂಗಳಲ್ಲಿ 16,814 ಕಾರುಗಳ ಮಾರಾಟವಾಗಿದೆ.
ಭಾರತೀಯ ಕಾರುಗಳ ಸುರಕ್ಷತೆ ಪರಿಶೀಲಿಸಲಿದೆ ಭಾರತ್ ಎನ್ಕ್ಯಾಪ್: ಗಡ್ಕರಿ
ಎರಡನೇ ಸ್ಥಾನದಲ್ಲಿರುವ ಮಾರುತಿ ಸ್ವಿಫ್ಟ್ ಕಾರು ಜೂನ್ ತಿಂಗಳಲ್ಲಿ 16,213 ಕಾರುಗಳು ಮಾರಾಟವಾಗಿದೆ. ಮೇ ತಿಂಗಳಿಗೆ ಹೋಲಿಕೆ ಮಾಡಿದರೆ 2,000 ವಾಹನಗಳು ಹೆಚ್ಚು ಮಾರಾಟವಾಗಿದೆ. ಮಾರುತಿ ಬಲೆನೋ ಜೂನ್ ತಿಂಗಳಲ್ಲಿ 16,103 ಕಾರುಗಳು ಮಾರಟವಾಗಿದೆ.
ಟಾಪ್ 10 ಕಾರುಗಳ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ 4ನೇ ಸ್ಥಾನ ಪಡೆದಿದೆ. ಆದರೆ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಪೈಕಿ ಟಾಟಾ ನೆಕ್ಸಾನ್ ಮೊದಲ ಸ್ಥಾನ ಪಡೆದಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೈನ್ಯೂ ಸೇರಿದಂತೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೂನ್ ತಿಂಗಳಲ್ಲಿ 14,295 ಟಾಟಾ ನೆಕ್ಸಾನ್ ಕಾರುಗಳು ಮಾರಾಟವಾಗಿದೆ. ಆದರೆ ಮೇ ತಿಂಗಳಿಗೆ ಹೋಲಿಸಿದರೆ ಟಾಟಾ ನೆಕ್ಸಾನ್ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಮೇ ತಿಂಗಳಲ್ಲಿ 14,614 ನೆಕ್ಸಾನ್ ಕಾರುಗಳು ಮಾರಾಟವಾಗಿತ್ತು.
5ನೇ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ ವಿರಾಜನಮಾನವಾಗಿದೆ. ಕಳೆದ ತಿಂಗಳು 13,790 ಕ್ರೆಟಾ ಕಾರುಗಳು ಮಾರಾಟವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಈ ಸಂಖ್ಯೆ ಭಾರಿ ಏರಿಕೆ ಕಂಡಿದೆ. ಕಾರಣ ಮೇ ತಿಂಗಳಲ್ಲಿ 10,973 ಕ್ರೆಟಾ ಕಾರುಗಳು ಮಾರಾಟವಾಗಿತ್ತು.
ಮಾರುತಿ ಅಲ್ಟೋ ಕಾರು ಮೇ ತಿಂಗಳಲ್ಲಿ 12,513 ಕಾರುಗಳು ಮಾರಾಟವಾಗಿತ್ತು. ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ 850 ಹೆಚ್ಚು ಕಾರುಗಳು ಮಾರಾಟವಾಗಿದೆ. ಈ ಮೂಲಕ 6ನೇ ಸ್ಥಾನ ಪಡೆದಿದೆ. ಇನ್ನು ಮಾರುತಿ ಡಿಸೈರ್ 7 ನೇ ಸ್ಥಾನದಲ್ಲಿದೆ. ಡಿಸೈರ್ 12,597 ಕಾರುಗಳು ಮಾರಾಟವಾಗಿದೆ.
ವಾಹನಗಳ ಮಾರಾಟದಲ್ಲಿ ಏರಿಕೆಯಾದರೂ, ಸಾಂಕ್ರಾಮಿಕ ಹಿಂದಿನ ಸಂಖ್ಯೆ ತಲುಪಲು ಹೆಣಗಾಟ
ಮಾರುತಿ ಎರ್ಟಿಗಾ 10,423 ಕಾರಗಳು ಮಾರಾಟವಾಗುವ ಮೂಲಕ 8ನೇ ಸ್ಥಾನದಲ್ಲಿದೆ. ಇನ್ನು ಟಾಟಾ ಪಂಚ್ ಸಣ್ಣ ಎಸ್‌ಯುವಿ ಕಾರು ಜೂನ್ ತಿಂಗಳಲ್ಲಿ 10,414 ಕಾರುಗಳು ಮಾರಾಟವಾಗಿದೆ. ಕಳೆದ ವರ್ಷಾಂತ್ಯದಲ್ಲಿ ಪಂಚ್ ಕಾರು ಬಿಡುಗಡೆಯಾಗಿತ್ತು. ಕೆಲವೇ ತಿಂಗಳಲ್ಲಿ ಪಂಚ್ ಟಾಪ್ 10 ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. 10,321 ಕಾರುಗಳು ಮಾರಾಟವಾಗುವ ಮೂಲಕ ಹ್ಯುಂಡೈ ವೆನ್ಯೂ 10ನೇ ಸ್ಥಾನ ಪಡೆದುಕೊಂಡಿದೆ. ಜುಲೈ ತಿಂಗಳಲ್ಲೂ ಆಟೋಮೊಬೈಲ್ ಕ್ಷೇತ್ರ ಮತ್ತಷ್ಟು ಸುಧಾರಣೆ ಕಾಣವು ನಿರೀಕ್ಷೆಗಳು ಗರಿಗೆದರಿದೆ.