ರಾಜಧಾನಿಯ ರಾಜಕುಮಾರ ಟಾಟಾ ಟಿಗೋರ್ ಇವಿ; ಎಲೆಕ್ಟ್ರಿಕ್ ಕಾರಿನ Review!
- ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಡ್ರೈವಿಂಗ್ ಅನುಭವ ಹೇಗಿದೆ?
- ಕಾರಿನ ಪರ್ಫಾಮೆನ್ಸ್, ಮೈಲೇಜ್, ಚಾರ್ಜಿಂಗ್ ಕುರಿತು ಸಂಪೂರ್ಣ ಮಾಹಿತಿ
- ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಕಾರಿನ ರಿವ್ಯೂ
ಬೆಂಗಳೂರು(ಸೆ.14): ನಾವು ಬೆಂಗಳೂರಿನ ಹೊರವಲಯದಲ್ಲಿರುವ ಟಾಟಾ ಷೋ ರೂಮಿಗೆ ಹೋಗುವ ಹೊತ್ತಿಗೆ ತಿಳಿ ನೀಲಿ ಬಣ್ಣದ ಚೆಂದದ ಕಾರೊಂದು ನಮಗೋಸ್ಕರ ಕಾಯುತ್ತಿತ್ತು. ನೋಡುವುದಕ್ಕೆ ತುಂಬ ಹಗುರ ಎನ್ನಿಸುವ, ಒಳಗೆ ನಾಲ್ಕು ಮಂದಿ ಕೈಕಾಲು ಚಾಚಿಕೊಂಡು ಕೂರಬಹುದಾದ ಸೆಡಾನ್ ಕಾರು. ಬೂಟ್ ತೆಗೆದು ನೋಡಿದರೆ ಒಳಗಡೆಯೇ ಕಳ್ಳನಂತೆ ಅಡಗಿ ಕೂತ ಸ್ಟೆಪ್ನಿ. ಅದರ ಪಕ್ಕದಲ್ಲೇ ಒಂದಷ್ಟುಜಜಾಗ ಕಬಳಿಸಲೆಂದೇ ಇರುವ ರೀಚಾರ್ಜ್ ಯೂನಿಟ್ಟುಗಳು.
306 ಕಿ.ಮೀ ಮೈಲೇಜ್, ಕೈಗೆಟುಕವ ಬೆಲೆ, ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಾಂಚ್!
ಹೊರನೋಟಕ್ಕೆ ಎಲ್ಲವೂ ಚೆಂದವೇ. ಮಿರಮಿರ ಮಿನುಗುವ ಮ್ಯಾಗ್ ವೀಲು, ಆಕರ್ಷಕ ಡ್ಯಾಷ್ ಬೋರ್ಡು, ಡ್ರೈವ್ ಮೋಡ್ ಬದಲಾಯಿಸಲು ತಿರುಪಿನ ಚಕ್ರ, ಸಂಪೂರ್ಣ ಡಿಜಿಟಲ್ ಡ್ಯಾಶ್ ಬೋರ್ಡು, ಕಣ್ಣಿಗೆ ಹಿತವೆನಿಸುವ ಬಣ್ಣ, ಆರಾಮದಾಯಕ ಸೀಟು, ಬೆನ್ನಿಗೆ ಇಂಬಾಗುವಂಥ ಸೀಟಿನ ಹಿಂಭಾಗ. ಎಲ್ಲವೂ ಸುಸಜ್ಜಿತ.
ನಾವು ಡ್ರೈವ್ ಮಾಡಿದ ಕಾರು ಟಾಟಾ ಟಿಗೋರ್ ಇವಿ. ಟಾಟಾ ಹೊರತಂದಿರುವ ಇಲೆಕ್ಟ್ರಿಕ್ ಕಾರು. ಒಮ್ಮೆ ಪೂರ್ತಿ ಚಾಜ್‌ರ್ ಮಾಡಿದರೆ 306 ಕಿಲೋಮೀಟರ್ ಸಾಗಬಹುದು ಎನ್ನಲಾಗುತ್ತದೆ. ಆದರೆ ಅದು ಐಡಿಯಲ್ ಡ್ರೈವಿಂಗ್ ಕಂಡೀಷನ್ನುಗಳಲ್ಲಿ ಮಾತ್ರ. ಅಂದರೆ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ, ಡ್ರೈವ್ ಮೋಡ್‌ನಲ್ಲೇ ಪ್ರಯಾಣ ಮಾಡಬೇಕು. ರಸ್ತೆಯೂ ಟೈರುಗಳ ಏರ್ ಪ್ರೆಷರೂ ನಮ್ಮ ಬ್ಲಡ್ ಪ್ರೆಷರೂ ಒಂದು ಹದದಲ್ಲಿದ್ದಾಗ ಮಾತ್ರ ಈ ಆದರ್ಶ ಸ್ಥಿತಿ ಮುಟ್ಟಲಿಕ್ಕೆ ಸಾಧ್ಯ. ಅಂಥ ಪುಣ್ಯ ನಮಗೂ ಇಲ್ಲ, ನಮ್ಮ ರಸ್ತೆಗಳಿಗೂ ಇಲ್ಲ.
ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್: ಟಾಟಾ ಟಿಗೋರ್ ಇವಿ ಗರಿಷ್ಠ ಸುರಕ್ಷೆಯ ಕಾರ್
ನಾವು ಹೊರಟದ್ದು ಮಹದೇವಪುರದಿಂದ. ತಲುಪಿದ್ದು ಕೋಲಾರಕ್ಕೆ. ಕಾರಿನ ವೇಗ ಸರಿಸುಮಾರು 80ರಿಂದ 120 ಕಿಲೋಮೀಟರುಗಳಂತೆ ವ್ಯತ್ಯಸ್ತ. ಮನೋಲಹರಿಗೆ ತಕ್ಕಂತೆ ಬದಲಾದರೆ ಬ್ಯಾಟರಿ ಸ್ಪಂದಿಸುತ್ತದೆಯೇ? 200 ಕಿಲೋಮೀಟರ್ ಕೂಡ ಗಿಟ್ಟಲಿಲ್ಲ. ಕೆಜಿಎಫ್ ತಲುಪಲಿಕ್ಕೆ ಇನ್ನೇನು 9 ಕಿಲೋಮೀಟರ್ ಇದೆ ಅನ್ನುವಷ್ಟರಲ್ಲಿ ಬ್ಯಾಟರಿ ಶೇಕಡಾ 55ಕ್ಕೆ ಇಳಿಯಿತು. ಸಮೀಪದಲ್ಲಿ ಎಲ್ಲೂ ರೀಚಾಜ್‌ರ್ ಕೇಂದ್ರಗಳಿಲ್ಲ ಅಂತ ಗೊತ್ತಾಯಿತು. ಕಾರು ಯೂ ಟರ್ನ್ ತೆಗೆದುಕೊಂಡಿತು.
ಹಾಗಿದ್ದರೆ ಈ ಕಾರು ಬೇಡವೇ? ಇದು ರಾಜಧಾನಿಯ ರಾಜಕುಮಾರ. ಪಕ್ಕಾ ಸಿಟಿ ಕಾರ್. ನಿತ್ಯ ಸಖ. ಬೆಳಗಾಗೆದ್ದು ಆಫೀಸಿಗೆ ಹೋಗಿ, ಅಲ್ಲಿಂದ ಇಷ್ಟವಿದ್ದರೆ ಕ್ಲಬ್ಬಿಗೆ ಹೋಗಿ, ಹತ್ತಿಪ್ಪತ್ತು ಕಿಲೋಮೀಟರ್ ಅತ್ತಿತ್ತ ವಾಲಾಡಿ, ರಾತ್ರಿ ಮನೆ ಸೇರುವ ಮಧ್ಯಮ ವರ್ಗದ ಮಹಾನುಭಾವರಿಗೆ ಮೋರ್ ದ್ಯಾನ್ ಎನಫ್! ರಾತ್ರಿ ಬಂದು ಚಾರ್ಜಿಂಗ್ ಪಾಯಿಂಟಿಗೆ ಕಾರನ್ನು ಕಟ್ಟಿಹಾಕಿದರೆ ಊಟ ಮಾಡುವಷ್ಟರಲ್ಲಿ ಮತ್ತೊಂದು ದಿನದ ದುಡಿಮೆಗೆ ಕಾರು ಕುದುರೆ ರೆಡಿಯಾಗುತ್ತದೆ.
ಇದು ಹೇಳಿಕೇಳಿ ಆಟೋಡ್ರೈವ್. ಎಡಗಾಲಿಡುವುದಕ್ಕೆ ಆರಾಮದಾಯಕ ಡೆಡ್ ಪೆಡಲ್ ಥರದ ಜಾಗವಿದೆ. ಬ್ಯಾಟರಿ ಚಾಲಿತ ಕಾರು ಆಗಿರುವುದಕ್ಕೆ ಪಿಕಪ್ ಸಮಸ್ಯೆಯಿಲ್ಲ. ಟಾಟಾ ಅಭಿವೃದ್ಧಿಪಡಿಸಿದ ಝಿಪ್‌ಟ್ರಾನ್ ತಂತ್ರಜ್ಞಾನದಲ್ಲಿ ಓಡುವ ಕಾರು ಇದು. ಮಿಕ್ಕಂತೆ ಅಂದಚೆಂದ, ಒಳಾಂಗಣ ಎಲ್ಲ ಅವರವರ ಅಭಿರುಚಿಗೆ ಬಿಟ್ಟದ್ದು. ಹೊರನೋಟಕ್ಕೆ, ಆರಾಮಕ್ಕೆ, ಪೆಟ್ರೋಲಲ್ಲಿ ಓಡುವ ಟಾಟಾ ಟಿಗೋರ್‌ಗೂ ಇದಕ್ಕೂ ಅಂಥ ಮಹಾನ್ ವ್ಯತ್ಯಾಸ ಏನೂ ಇಲ್ಲ.
ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!
ನಾವು ಡ್ರೈವ್ ಮಾಡಿದ ಕಾರಲ್ಲಿ ಇದ್ದದ್ದು 26 ಕಿಲೋವ್ಯಾಟ್‌ನ ಲಿಥಿಯಮ್ ಬ್ಯಾಟರಿ. 25 ನಿಮಿಷದಲ್ಲಿ 80 ಪರ್ಸೆಂಟ್ ಚಾಜ್‌ರ್ ಮಾಡಬಹುದು ಅನ್ನುವುದು ಕಂಪೆನಿಯ ಪ್ರಾಮಿಸ್ಸು. ಅದಕ್ಕೆ ನೀವು 25 ಕಿಲೋವ್ಯಾಟ್ ಫಾಸ್ಟ್ ಚಾರ್ಜರ್ ಬಳಸಬೇಕು. ಸಾಧಾರಣ ಸಾಕೆಟ್ ಬಳಸಿದರೆ ಎಂಬತ್ತು ಪರ್ಸೆಂಟ್ ಚಾಜ್‌ರ್ ಆಗಲು ಒಂಬತ್ತು ಗಂಟೆ ಬೇಕಾಗುತ್ತದೆ.
ಆಫೀಸು-ಮನೆ ಎಂದು ಓಡಾಡುವ ಎಲ್ಲರೂ ಇದನ್ನು ಸೆಕೆಂಡ್ ಕಾರ್ ಆಗಿ ಬಳಸಬಹುದು. ದೂರದ ಓಡಾಟಕ್ಕೆ ಮತ್ತೊಂದು ಕಾರು ಇಟ್ಟುಕೊಳ್ಳುವುದು ಅನಿವಾರ್ಯ. ಅಂದಹಾಗೆ ಈ ಕಾರಿನ ಆನ್-ರೋಡ್ ಬೆಲೆ ಬೆಂಗಳೂರಿನಲ್ಲಿ 12,64,225.00 ರುಪಾಯಿ. ಇದು XE, XM,XZ Plus ಮತ್ತು XZ plus dual tone ಈ ನಾಲ್ಕು ಮಾದರಿಗಳಲ್ಲಿ ಸಿಗುತ್ತದೆ. ಎಕ್ಸ್ ಷೋ ರೂಮ್ ಬೆಲೆ 11.99 ಲಕ್ಷದಿಂದ-13.14 ಲಕ್ಷದ ತನಕ ಇದೆ.