ಚೆನ್ನೈ(ಜ.07): ಕೊರೋನಾ ವೈರಸ್‌ ಬಂದ ನಂತರ ಸ್ವಂತ ವಾಹನ ಕೊಳ್ಳುವವರ ಸಂಖ್ಯೆ ದೇಶದಲ್ಲಿ ಹೆಚ್ಚಿರುವ ಪರಿಣಾಮ ಹೊಸ ಕಾರು ಕೊಳ್ಳುವವರು ಈಗ 1 ತಿಂಗಳಿನಿಂದ 10 ತಿಂಗಳವರೆಗೆ ವೇಟಿಂಗ್‌ ಲಿಸ್ಟ್‌ನಲ್ಲಿ ಕಾಯಬೇಕಾಗಿ ಬಂದಿದೆ. ದೇಶಾದ್ಯಂತ ಕಾರುಗಳಿಗೆ ಬೇಡಿಕೆ ದಿಢೀರ್‌ ಜಾಸ್ತಿಯಾಗಿದ್ದು, ಬೇಡಿಕೆಯಿರುವಷ್ಟುಕಾರುಗಳನ್ನು ತಯಾರಿಸಲು ಕಾರು ಉತ್ಪಾದಕ ಕಂಪನಿಗಳಿಂದ ಸಾಧ್ಯವಾಗುತ್ತಿಲ್ಲ.

ಈಗ ವಾಹನ ಸಾಲದ ಮೇಲಿನ ಬಡ್ಡಿ ದರಗಳು ಕೂಡ ಸಾಕಷ್ಟುಇಳಿಕೆಯಾಗಿವೆ. ಹೀಗಾಗಿ ಮಾರುತಿ ಆಲ್ಟೋ, ವ್ಯಾಗನ್‌ಆರ್‌ನಂತಹ ಸಣ್ಣ ಕಾರುಗಳಿಂದ ಹಿಡಿದು ಸ್ವಿಫ್ಟ್‌, ಹುಂಡೈ ಐ20ಯಂತಹ ಹ್ಯಾಚ್‌ಬ್ಯಾಕ್‌ ಕಾರುಗಳು ಹಾಗೂ ಎಸ್‌ಯುವಿಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಪರಿಣಾಮ, ಕಾರು ಮಾರಾಟಗಾರರು 1 ತಿಂಗಳಿನಿಂದ 10 ತಿಂಗಳವರೆಗೆ ಗ್ರಾಹಕರಿಂದ ಸಮಯ ಕೇಳುತ್ತಿದ್ದಾರೆ.

ಮಾರುತಿ ಕಂಪನಿ ಅಕ್ಟೋಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಕಾರು ಉತ್ಪಾದನೆ ಮಾಡುತ್ತಿದೆ. ಆದರೂ ಗ್ರಾಹಕರು ಕಾರು ಬುಕ್‌ ಮಾಡಿ 3ರಿಂದ 8 ವಾರಗಳವರೆಗೆ ಕಾಯಬೇಕಾಗುತ್ತದೆ. ಹುಂಡೈ ಕಂಪನಿಯ ಕೆಲ ಕಾರುಗಳಿಗೆ 2ರಿಂದ 3 ತಿಂಗಳು ಕಾಯಬೇಕಾಗುತ್ತದೆ. ಕಿಯಾ ಕಂಪನಿಯ ಕೆಲ ಮಾಡೆಲ್‌ಗಳಿಗೂ 2ರಿಂದ 3 ತಿಂಗಳು ಕಾಯಬೇಕಾಗುತ್ತದೆ. ಕೆಲ ಬ್ರ್ಯಾಂಡ್‌ನ ಕಾರುಗಳಿಗೆ 10 ತಿಂಗಳವರೆಗೂ ವೇಟಿಂಗ್‌ ಪೀರಿಯಡ್‌ ಇದೆ. ಎಲ್ಲಾ ಕಾರು ಉತ್ಪಾದಕ ಕಂಪನಿಗಳೂ ತಮ್ಮ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿವೆ ಅಥವಾ ಕಳೆದ ವರ್ಷಕ್ಕಿಂತ ಹೆಚ್ಚು ಮಾಡಿವೆ. ಆದರೂ ಮಾರುಕಟ್ಟೆಯಲ್ಲಿ ಬೇಡಿಕೆಯಿರುವಷ್ಟುಕಾರುಗಳಿಲ್ಲ.

ಲಾಕ್‌ಡೌನ್‌ ಸಮಯದಲ್ಲಿ ಎಲ್ಲಾ ಕಾರು ಉತ್ಪಾದನಾ ಘಟಕಗಳು ಬಂದ್‌ ಆಗಿದ್ದವು. ನಂತರ ಉತ್ಪಾದನೆ ಆರಂಭವಾದರೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರಲಿಲ್ಲ. ಮೊದಲೇ ಬುಕಿಂಗ್‌ ಮಾಡಿಸಿಕೊಂಡಿದ್ದ ಕಾರುಗಳನ್ನು ಗ್ರಾಹಕರಿಗೆ ಡೆಲಿವರಿ ಕೊಡುವುದರ ಜೊತೆಗೆ, ಕೊರೋನಾದಿಂದಾಗಿ ಹೆಚ್ಚಳವಾದ ಕಾರಿನ ಬೇಡಿಕೆಯನ್ನು ತಲುಪುವುದು ಕಾರು ಉತ್ಪಾದಕರಿಗೆ ಸವಾಲಾಗಿತ್ತು. ನಿರಂತರವಾಗಿ ಉತ್ಪಾದನಾ ಘಟಕಗಳನ್ನು ಚಾಲೂ ಇಟ್ಟಿದ್ದ ಕೆಲ ಕಂಪನಿಗಳು ಡಿಸೆಂಬರ್‌ ಅಂತ್ಯದಲ್ಲಿ ಕೆಲ ದಿನಗಳ ಕಾಲ ನಿರ್ವಹಣೆಗೆಂದು ಘಟಕ ಬಂದ್‌ ಮಾಡಿದ್ದವು. ಇವೆಲ್ಲ ಸಂಗತಿಗಳು ಸೇರಿ ಬೇಡಿಕೆಗೆ ತಕ್ಕಷ್ಟುಕಾರು ಪೂರೈಕೆಯಾಗದಂತಾಗಿದೆ ಎಂದು ಸಾರಿಗೆ ತಜ್ಞರು ಹೇಳಿದ್ದಾರೆ.