ಮಾರುತಿ ಸುಜುಕಿ ಹೊಸ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಇದು ಬ್ರೆಝಾ ಕಾರಿಗಿಂತ ದೊಡ್ಡ ಗಾತ್ರ, ಗ್ರ್ಯಾಂಡ್ ವಿಟಾರಗಿಂತ ಕಡಿಮೆ ಬೆಲೆಯ ಕಾರನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಲು ಸಜ್ಜಾಗಿದೆ.
ನವದೆಹಲಿ (ಜು.04) ಮಾರುತಿ ಸುಜುಕಿ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಕಾರು ನೀಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಕೈಗೆಟುಕುವ ದರದಲ್ಲಿ ಆದರೆ ಹೆಚ್ಚು ಪ್ರೀಮಿಯಂ ಲುಕ್ ಹಾಗೂ ಗಾತ್ರದ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಹ್ಯುಂಡೈ ಕ್ರೆಟಾ, ಕಿಯೋ ಸೆಲ್ಟೋಸ್ ಸೇರಿದಂತೆ ಮಿಡ್ ಸೈಝ್ ಎಸ್‌ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು ಬಿಡುಗಡೆಯಾಗಲಿದೆ. ಆದರೆ ಬೆಲೆ ಮಾತ್ರ ಈ ಎಲ್ಲಾ ಕಾರುಗಳಿಗಿಂತ ಕಡಿಮೆ. ಜೊತೆಗೆ ಇದರ ನಿರ್ವಹಣೆ ಕೂಡ ಅತೀ ಸುಲಭ. ಹೊಸ ಕಾರಿನ ಹೆಸರು Escudo. ಈ ಹೆಸರಿನಲ್ಲಿ ಈಗಾಗಲೇ ನೇಮ್‌ಪ್ಲೇಟ್ ಟ್ರೇಡ್‌ಮಾರ್ಕ್ ಮಾಡಿಕೊಂಡಿದೆ.
ಮಾರುತಿ ಸುಜುಕಿ ಬಳಿ ಈಗಾಗಲೇ ಗ್ರ್ಯಾಂಡ್ ವಿಟಾರ ಮಿಡ್ ಸೈಝ್ ಎಸ್‌ಯುವಿ ಕಾರಿದೆ. ಕ್ರೆಟಾ, ಸೆಲ್ಟೋಸ್ ಸೇರಿದಂತೆ ಇತರ ಮಿಡ್ ಸೈಜ್ ಎಸ್‌ಯುವಿಗಳ ಜೊತೆ ತೀವ್ರ ಪೈಪೋಟಿ ನಡೆಸುತ್ತಿದೆ. ಬ್ರೆಝಾಗಿಂತ ದೊಡ್ಡ ಗಾತ್ರದ ಎಸ್‌ಯುವಿ ಹಲವು ಗ್ರಾಹಕರ ಬಯಕೆಯಾಗಿದೆ. ಆದರೆ ಗ್ರ್ಯಾಂಡ್ ವಿಟಾರಾಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಹೊಸ ಕಾರು ಬಿಡುಗಡೆಯಾಗುತ್ತಿದೆ. ಈ ಮೂಲಕ ಸಬ್ ಕಾಂಪಾಕ್ಟ್ ಹಾಗೂ ಮಿಡ್ ಸೈಝ್ ಎಸ್‌ಯುವಿ ವಿಭಾಗಗಳ ಪೈಕಿ ಮಾರುತಿ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ.
ಹಬ್ಬದ ವೇಳೆ ಮಾರುತಿ ಎಸ್‌ಯುವಿ ಕಾರು ಬಿಡುಗಡೆ
ಆಗಸ್ಟ್ , ಸೆಪ್ಟೆಂಬರ್ ತಿಂಗಳಿನಿಂದ ಹಬ್ಬಗಳ ಋತು ಆರಂಭಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಮಾರುತಿ ಹೊಸ ಕಾರು ಬಿಡುಗಡೆಯಾಗಲಿದೆ. ಸದ್ಯ ಈ ಕಾರಿಗೆ Y17 ಎಂಬ ಕೋಡ್ ವರ್ಡ್ ಇಡಲಾಗಿದೆ. ಹೊಸ ಎಸ್‌ಯುವಿ ಕಾರಿನ ವಿನ್ಯಾಸ ಸದ್ಯ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ವಿಟಾರ ರೂಪದಲ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ. ಕೆಲ ಸಣ್ಣ ಬದಲಾವಣೆಗಳು ವಿನ್ಯಾಸದಲ್ಲಿ ಇರಲಿದೆ. ಆದರೆ ಹೆಚ್ಚು ಪ್ರೀಮಿಯಂ ಲುಕ್ ನೀಡಲಿದೆ. ಜೊತೆಗೆ ಹೊಸ ಎಲ್‌ಇಡಿ ಲೈಟ್ ಹಾಗೂ ಟೈಲ್ ಲೈಟ್ ಮೂಲಕ ವಿನ್ಯಾಸ ಮತ್ತಷ್ಟು ಆಕರ್ಷಕವಾಗಿ ಮಾಡಲು ಮಾರುತಿ ಸುಜುಕಿ ಮುಂದಾಗಿದೆ.
ಮಾರುತಿ ಸುಜುಕಿ ಹೊಸ ಕಾರಿನ ಬೆಲೆ
ಸದ್ಯ ಮಾರುತಿ ಸುಜುಕಿ ಹೊಸ ಕಾರಿನ ಬೆಲೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಹೊಸ ಕಾರಿನ ಬೆಲೆ 9 ರಿಂದ 10 ಲಕ್ಷ ರೂಪಾಯ ಒಳಗೆ ಆರಂಭಿಕ ಬೆಲೆ ಇರಲಿದೆ ಎಂದು ಹೇಳಲಾಗುತ್ತಿದೆ. ಇದು ಕ್ರೆಟಾ ಹಾಗೂ ಇತರ ಮಿಡ್ ಸೈಝ್ ಎಸ್‌ಯುವಿ ಬೆಲೆಗಿಂತ ಕಡಿಮೆಯಾಗಿದೆ. ಇಷ್ಟೇ ಅಲ್ಲ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬೆಲೆಗಿಂತ ಕಡಿಮೆಯಾಗಿದೆ. ಆದರೆ ಮಾರುತಿ ಸುಜುಕಿ ಬ್ರೆಝಾ ಕಾರಿನ ಆರಂಭಿಕ ಬೆಲೆಗಿಂತ ಕೊಂಚ ಹೆಚ್ಚು.
ದೊಡ್ಡ ಇನ್ಫೊಟೈನ್ಮೆಂಟ್ ಸಿಸ್ಟಮ್, ಆಟೋ, ಆ್ಯಪಲ್ ಕಾರ್ ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್, ವೈಯರ್‌ಲೆಸ್ ಫೋನ್ ಚಾರ್ಜರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿರಲಿದೆ. ಹೊಸ ಕಾರು 1.5 ಲೀಟರ್ ನ್ಯಾಚುರಲ್ ಆಸ್ಪೈರ್ ಪೆಟ್ರೋಲ್ ಎಂಜಿನ್ ಸಾಧ್ಯತೆ ಇದೆ. ಸದ್ಯ ಬ್ರೆಝಾ ಹಾಗೂ ಗ್ರ್ಯಾಂಡ್ ವಿಟಾರ ಕಾರಿನಲ್ಲೂ ಇದೇ ಎಂಜಿನ್ ಬಳಸಲಾಗಿದೆ. 103bhp ಪವರ್, 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 6 ಸ್ಟೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಗ್ರ್ಯಾಂಡ್ ವಿಟಾರ ಹೈಬ್ರಿಡ್ ಆಯ್ಕೆಯಲ್ಲೂ ಲಭ್ಯವಿದೆ. ಆದರೆ ಹೊಸ ಕಾರು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡುವ ಕಾರಣದಿಂದ ಹೈಬ್ರಿಡ್ ಆಯ್ಕೆ ಸಾಧ್ಯತೆ ಕಡಿಮೆ.