ನಡುರಸ್ತೆಯಲ್ಲಿ ಬೆಂಕಿಗಾಹುತಿಯಾದ ಐಷಾರಾಮಿ ಲ್ಯಾಂಬೋರ್ಘಿನಿ ಕಾರು: ವೀಡಿಯೋ ವೈರಲ್
ಮುಂಬೈನ ಕರಾವಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಲಂಬೋರ್ಘಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಆದರೆ ವೀಡಿಯೊ ವೈರಲ್ ಆಗಿದೆ.
ಐಷಾರಾಮಿ ಲಂಬೋರ್ಘಿನಿ ಕಾರೊಂದು ನಡುರಸ್ತೆಯಲ್ಲಿ ಬೆಂಕಿಗಾಹುತಿಯಾದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಮುಂಬೈನ ಕರಾವಳಿ ರಸ್ತೆಯಲ್ಲಿ ಬುಧವಾರ ರಾತ್ರಿ 10.20ರ ಸುಮಾರಿಗೆ ಈ ಘಟನೆ ನಡೆದಿದೆ. ನಡುರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಈ ಬೆಂಕಿಗೆ ಏನು ಕಾರಣ ಹಾಗೂ ಘಟನೆ ಸಂಭವಿಸುವ ವೇಳೆ ಕಾರಿನಲ್ಲಿ ಎಷ್ಟು ಜನರಿದ್ದರು ಎಂಬ ಮಾಹಿತಿ ಇಲ್ಲ. ಹಳದಿ ಕೇಸರಿ ಮಿಶ್ರಿತ ಬಣ್ಣದ ಲಂಬೋರ್ಘಿನಿ ಕಾರು ಇದಾಗಿದ್ದು, ಕಾರಿನಿಂದ ಬೆಂಕಿ ಹೊರಬರುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಈ ಕಾರು ಗುಜರಾತ್‌ನ ನೋಂದಣಿ ಸಂಖ್ಯೆಯನ್ನು ಹೊಂದಿದ್ದು ಬೆಂಕಿ ಆರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ.
ಕಾರಿಗೆ ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಅಗ್ನಿ ಶಾಮಕ ದಳದ ವಾಹನ ಬಂದು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್ ರೇಮಾಂಡ್ ಸಂಸ್ಥೆಯ ಸಂಸ್ಥಾಪಕ ಗೌತಮ್ ಸಿಂಘಾನಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈನ ಕೋಸ್ಟಲ್ ರಸ್ತೆಯಲ್ಲಿ ಒಂದು ಲಂಬೋರ್ಘಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ರೀತಿಯ ಘಟನೆಗಳು ಲಂಬೋರ್ಘಿನಿಯ ವಿಶ್ವಾಸಾರ್ಹತೆ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತವೆ. ಬೆಲೆ ಮತ್ತು ಖ್ಯಾತಿಗೆ ಪ್ರತಿಯಾಗಿ, ಒಬ್ಬರು ರಾಜಿಯಾಗದ ಗುಣಮಟ್ಟವನ್ನು ನಿರೀಕ್ಷಿಸುತ್ತಾರೆ, ಸಂಭಾವ್ಯ ಅಪಾಯಗಳನ್ನಲ್ಲ ಹೀಗಾಗಿ ಅದರ ಭಾರತೀಯ ಡೀಲರ್‌ಗಳ ದುರಂಕಾರ ನೋಡಿದ ಮೇಲೆ ಲಂಬೋರ್ಘಿನಿ ಕಾರನ್ನು ಖರೀದಿಸುವ ಮೊದಲು ಎರಡು ಬಾರಿ ಯೋಚನೆ ಮಾಡಿ ಎಂದು ರೇಮಾಂಡ್ ಗ್ರೂಪ್‌ನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಹೇಳಿದ್ದಾರೆ. ಹೀಗೆ ಲಕ್ಸುರಿ ಕಾರೊಂದು ನಡುರಸ್ತೆಯಲ್ಲಿ ಬೆಂಕಿಗಾಹುತಿಯಾಗುತ್ತಿರುವ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಗೌತಮ್ ಸಿಂಘಾನಿಯಾ ಅವರು ಐಷಾರಾಮಿ ಕಾರುಗಳ ಲೋಪದೋಷಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಲೇ ಇರುತ್ತಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ, ಸಿಂಘಾನಿಯಾ ಅವರು ಲಂಬೋರ್ಘಿನಿ ರೆವಲ್ಟೊ ಚಾಲನೆಯ ಅನುಭವವನ್ನು ಹಂಚಿಕೊಂಡರು. ಮುಂಬೈನ ಟ್ರಾನ್ಸ್-ಹಾಬರ್ ಲಿಂಕ್ ರೋಡ್‌ನಲ್ಲಿ ನಡೆದ ಘಟನೆಯನ್ನು ಹೈಲೈಟ್ ಮಾಡುವ 15 ದಿನಗಳ ಮೊದಲು ಅವರು ಸೂಪರ್‌ಕಾರ್ ತನಗೆ ಡೆಲಿವರಿ ಆಗಿದ್ದಾಗಿ ಹೇಳಿದ್ದರು. ಈ ಐಷಾರಾಮಿ ಕಾರಿನ ಡ್ರೈವಿಂಗ್ ಸಮಯದಲ್ಲಿ ವಿದ್ಯುತ್ ವೈಫಲ್ಯ ಕಾಣಿಸಿಕೊಂಡಿತು ಹೀಗಾಗಿ ನಡುರಸ್ತೆಯಲ್ಲಿ ಸಿಲುಕುವಂತೆ ಮಾಡಿತ್ತು. ಈ ವಿಚಾರವನ್ನು ಸಂಸ್ಥೆಗೆ ತಿಳಿಸಿದಾಗ ಲಂಬೋರ್ಗಿನಿ ಇಂಡಿಯಾದವರಾಗಲಿ ಅಥವಾ ಏಷ್ಯಾ ವಿಭಾಗದಿಂದಲಾಗಲಿ ಯಾರೊಬ್ಬರೂ ತನ್ನನ್ನು ಸಂಪರ್ಕಿಸಿಲ್ಲ ಎಂದು ಸಿಂಘಾನಿಯಾ ಹೇಳಿದ್ದಾರೆ.
ಐಷಾರಾಮಿ ಕಾರು ತಯಾರಕರೊಂದಿಗೆ ಸಿಂಘಾನಿಯಾ ಫೈಟ್
ಸಿಂಘಾನಿಯಾ ಈ ಹಿಂದೆ ಮಾಸೆರೋಟಿ ಮತ್ತು ಪೋರ್ಷೆ ಸೇರಿದಂತೆ ಭಾರತದ ಇತರ ಐಷಾರಾಮಿ ಕಾರು ತಯಾರಕರ ವಿರುದ್ಧವೂ ಆರೋಪ ಮಾಡಿದ್ದರು. ಕಳೆದ ವರ್ಷ, ಸಿಂಘಾನಿಯಾ ಅವರು ಮಸೆರೋಟಿ MC20 ಅನ್ನು ಖರೀದಿಸಲು ಬಯಸುವವರಿಗೆ ಎಚ್ಚರಿಕೆಯನ್ನು ನೀಡಿದ್ದರು, ಇದು ಅಪಾಯಕಾರಿ ಕಾರು ಮತ್ತು ಯಾರಾದರೂ ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಹೇಳಿದ್ದರು. 2015 ರಲ್ಲಿ, ಕೈಗಾರಿಕೋದ್ಯಮಿ ಯೋಹಾನ್ ಪೂನಾವಾಲಾ ಅವರಿಗೆ ಸೇರಿದ 2011 ರ ಪೋರ್ಷೆ ಕಯೆನ್ನೆ ಟರ್ಬೊ ಮುಂಬೈನಲ್ಲಿ ಬೆಂಕಿಗೆ ಆಹುತಿಯಾಗಿತ್ತು. ಆಗಲೂ ಗೌತಮ್ ಸಿಂಘಾನಿಯಾ ಐಷಾರಾಮಿ ಕಾರುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಹಾಗಂತ ಗೌತಮ್ ಸಿಂಘಾನಿಯಾ ಅವರ ಬಳಿ ಐಷಾರಾಮಿ ಕಾರುಗಳೇ ಇಲ್ಲವೆಂದಲ್ಲ, ಅವರ ಬಳಿ ಈ ಲಕ್ಸುರಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಮಸೆರೊಟಿ ಎಂಸಿ20, ಲೋಟಸ್ ಇಲಿಸೆ(Lotus Elise) ಪಾಂಟಿಯಾಕ್ ಫೈರ್ಬರ್ಡ್ ಟ್ರಾನ್ಸಮ್ (Pontiac Firebird Transam), 2 ಮೆಕ್ಲಾರೆನ್ಸ್ (McLarens) ಹಾಗೂ ಹಲವು ಫೆರಾರಿ ಕಾರುಗಳ ಮಾಡೆಲ್‌ಗಳನ್ನು ಗೌತಮ್ ಸಿಂಘಾನಿಯಾ ಹೊಂದಿದ್ದಾರೆ.