ಹುಂಡೈ ತನ್ನ ಜನಪ್ರಿಯ ಸಣ್ಣ ಎಸ್‌ಯುವಿ 'ಎಕ್ಸ್‌ಟರ್'ನ ಹೊಸ 'ನೈಟ್ ಎಡಿಷನ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಕಪ್ಪು ಬಣ್ಣದ ಥೀಮ್ ಹೊಂದಿರುವ ಈ ಕಾರು, ಸ್ಪೋರ್ಟಿ ವಿನ್ಯಾಸ ಮತ್ತು ಆಕರ್ಷಕ ಇಂಟೀರಿಯರ್‌ನೊಂದಿಗೆ ಲಭ್ಯವಿದ್ದು, ಇದರ ಆರಂಭಿಕ ಬೆಲೆ ₹8.13 ಲಕ್ಷ ಆಗಿದೆ.
ನವದೆಹಲಿ (ಆ.12): ಭಾರತೀಯ ವಾಹನ ಮಾರುಕಟ್ಟೆಯ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಹುಂಡೈ (Hyundai), ತನ್ನ ಜನಪ್ರಿಯ ಸಣ್ಣ ಎಸ್‌ಯುವಿ 'ಎಕ್ಸ್‌ಟರ್'ನ (Exter) ಹೊಸ 'ನೈಟ್ ಎಡಿಷನ್' (Knight Edition) ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಬ್ಲ್ಯಾಕ್ ಥೀಮ್‌ನಲ್ಲಿ ಕಂಗೊಳಿಸುತ್ತಿರುವ ಈ ಹೊಸ ಎಸ್‌ಯುವಿಯ ಆರಂಭಿಕ ಬೆಲೆಯನ್ನು 8.13 ಲಕ್ಷ ರೂಪಾಯಿ (ಎಕ್ಸ್-ಶೋರೂಮ್) ಎಂದು ನಿಗದಿಪಡಿಸಲಾಗಿದೆ. ಇದರ ಟಾಪ್ ವೇರಿಯೆಂಟ್ ಬೆಲೆ 9.60 ಲಕ್ಷ ರೂಪಾಯಿವರೆಗೆ ಇದೆ.
ಹೊಸ 'ಎಕ್ಸ್‌ಟರ್ ನೈಟ್' ಆವೃತ್ತಿಯನ್ನು ಸಂಪೂರ್ಣ ಕಪ್ಪು ಬಣ್ಣದ ಥೀಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ಎಸ್‌ಯುವಿಗೆ ಮೊದಲಿಗಿಂತಲೂ ಹೆಚ್ಚು ಸ್ಪೋರ್ಟಿ ಹಾಗೂ ರಗಡ್ ಲುಕ್ ನೀಡಿದೆ. ಕಸ್ಟಮರ್‌ಗಳಿಗೆ ಪೆಟ್ರೋಲ್ ಮ್ಯಾನುವಲ್, ಪೆಟ್ರೋಲ್ ಎಎಮ್‌ಟಿ (AMT) ಹಾಗೂ 'ಹೈ-ಸಿಎನ್‌ಜಿ ಡ್ಯುಯೊ' (Hy-CNG Duo) ಸೇರಿದಂತೆ ಒಟ್ಟು ನಾಲ್ಕು ವೇರಿಯೆಂಟ್‌ಗಳಲ್ಲಿ ಈ ಮಾಡೆಲ್ ಲಭ್ಯವಿರಲಿದೆ.
ಕಂಪನಿಯು ಈ ನೈಟ್ ಎಡಿಷನ್‌ನಲ್ಲಿ ಎಂಜಿನ್ ಅಥವಾ ಇತರ ಮೆಕ್ಯಾನಿಕಲ್ ಭಾಗಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಬದಲಾಗಿ, ಮುಖ್ಯವಾಗಿ ಇದರ ವಿನ್ಯಾಸ (Exterior Design) ಮತ್ತು ಇಂಟೀರಿಯರ್‌ನಲ್ಲಿ ಆಕರ್ಷಕ ಎನಿಸುವಂಥ ಬದಲಾವಣೆಗಳನ್ನು ತರಲಾಗಿದೆ.
ಬ್ಲ್ಯಾಕ್ ಥೀಮ್‌ನಲ್ಲಿ ಮಿಂಚುವ ಎಕ್ಸ್‌ಟರ್ ಲುಕ್
ಹೊರಭಾಗದಿಂದ ಎಕ್ಸ್‌ಟರ್ ನೈಟ್ ಆವೃತ್ತಿಗೆ ಸಂಪೂರ್ಣ ವಿಭಿನ್ನ ಹಾಗೂ ಸ್ಪೆಷಲ್ ಲುಕ್ ನೀಡಲು ಕಂಪನಿ ಶ್ರಮಿಸಿದೆ. ಇದರಲ್ಲಿ ಮ್ಯಾಟ್ ಬ್ಲ್ಯಾಕ್ ಬಣ್ಣದ 'Hyundai' ಮತ್ತು 'Exter' ಲೋಗೋ ಬ್ಯಾಡ್ಜ್‌ಗಳನ್ನು ನೀಡಲಾಗಿದೆ. ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳಲ್ಲಿ ಡಾರ್ಕ್ ಗ್ರೇ ಗಾರ್ನಿಶ್ ನೀಡಲಾಗಿದ್ದರೆ, ಸೈಡ್ ಪ್ರೊಫೈಲ್‌ನಲ್ಲೂ ಡಾರ್ಕ್ ಗ್ರೇ ಟಚ್ ನೀಡಲಾಗಿದೆ.
ಇದಲ್ಲದೆ, ಕಾರಿನ ಸೈಡ್‌ನಲ್ಲಿ ವಿಶೇಷ 'Knight' ಬ್ಯಾಡ್ಜಿಂಗ್ ಹಾಗೂ 15-ಇಂಚಿನ ಬ್ಲ್ಯಾಕ್ ಅಲಾಯ್ ವೀಲ್‌ಗಳನ್ನು ಕೊಡಲಾಗಿದೆ. ಮುಂಭಾಗದ ಬ್ರೇಕ್ ಕ್ಯಾಲಿಪರ್‌ಗಳಿಗೆ ರೆಡ್ ಕಲರ್ ನೀಡಲಾಗಿದ್ದು, ಇದು ಕಪ್ಪು ಬಣ್ಣದ ಥೀಮ್‌ನೊಂದಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಕೆಲವು ಲೋವರ್ ವೇರಿಯೆಂಟ್‌ಗಳಲ್ಲಿ ಡಾರ್ಕ್ ಗ್ರೇ ಶೈಲಿಯ ಸ್ಟೀಲ್ ವೀಲ್‌ಗಳು ಲಭ್ಯವಿರಲಿವೆ. ಪ್ರಸ್ತುತ ಈ ಕಾರನ್ನು ಟೈಟಾನಿಯಂ ಬ್ಲ್ಯಾಕ್, ಅಟ್ಲಾಸ್ ವೈಟ್, ಸ್ಟಾರ್ರಿ ನೈಟ್, ಟೈಟಾನ್ ಗ್ರೇ ಮತ್ತು ಗೋಲ್ಡನ್ ಬ್ರಾಂಜ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.
ಆಕರ್ಷಕ ಆಲ್-ಬ್ಲ್ಯಾಕ್ ಇಂಟೀರಿಯರ್
ಎಸ್‌ಯುವಿಯ ಕ್ಯಾಬಿನ್ ಒಳಗೂ ಸಹ ಸಂಪೂರ್ಣ ಬ್ಲ್ಯಾಕ್ ಥೀಮ್ ಅನ್ನೇ ಮುಂದುವರಿಸಲಾಗಿದೆ. ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್ ಹಲವೆಡೆ ಗ್ರಾಸ್/ಬ್ರಾಸ್ ಬಣ್ಣದ ಸುಂದರ ಟಚ್ ನೀಡಲಾಗಿದೆ. ಇದರಲ್ಲಿ ಬ್ಲ್ಯಾಕ್ ಸೆಮಿ-ಫ್ಯಾಬ್ರಿಕ್ ಸೀಟ್‌ಗಳು, ಆಂಬರ್ ಫುಟ್‌ವೆಲ್ ಆಂಬಿಯೆಂಟ್ ಲೈಟಿಂಗ್ ಹಾಗೂ ಕೆಲವು ವೇರಿಯೆಂಟ್‌ಗಳಲ್ಲಿ ಬ್ಲ್ಯಾಕ್ ಡಿ-ಕಟ್ ಸ್ಟೀರಿಂಗ್ ವೀಲ್ ನೀಡಲಾಗಿದೆ. ಫೀಚರ್ಸ್‌ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ತಂತ್ರಜ್ಞಾನ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹಲವಾರು ಸುಧಾರಿತ ಸುರಕ್ಷತಾ (Safety) ಫೀಚರ್ಸ್‌ಗಳು ಲಭ್ಯವಿವೆ.
ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯಿಲ್ಲ
ಎಕ್ಸ್‌ಟರ್ ನೈಟ್‌ನಲ್ಲಿ ಮೊದಲಿನಂತೆಯೇ 1.2-ಲೀಟರ್ ಕಪ್ಪಾ (Kappa) ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಮಾರ್ಟ್ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ 1.2-ಲೀಟರ್ ಹೈ-ಸಿಎನ್‌ಜಿ ಡ್ಯುಯೊ ಎಂಜಿನ್ ಆಯ್ಕೆಯನ್ನೂ ನೀಡುತ್ತಿದೆ.
ಹುಂಡೈ ಸಂಸ್ಥೆಯ ಪ್ರಕಾರ, ಕಂಪನಿಯ 'ನೈಟ್ ಎಡಿಷನ್' ಮಾಡೆಲ್‌ಗಳಿಗೆ ಗ್ರಾಹಕರಿಂದ ಭಾರಿ ಸ್ಪಂದನೆ ಸಿಕ್ಕಿದೆ. 2022ರಲ್ಲಿ ಈ ಎಡಿಷನ್ ಆರಂಭಿಸಿದಾಗಿನಿಂದ ಇದುವರೆಗೆ ಹುಂಡೈ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು 'ನೈಟ್' ಎಡಿಷನ್ ಕಾರುಗಳನ್ನು ಮಾರಾಟ ಮಾಡಿದೆ. ಈಗಿನ ಹೊಸ ಎಕ್ಸ್‌ಟರ್ ನೈಟ್ ಎಡಿಷನ್ ಮೂಲಕ ಸಣ್ಣ ಎಸ್‌ಯುವಿ ವಿಭಾಗದಲ್ಲಿ ಗ್ರಾಹಕರಿಗೆ ಮತ್ತಷ್ಟು ಸ್ಪೋರ್ಟಿ ಹಾಗೂ ಪ್ರೀಮಿಯಂ ಆಯ್ಕೆಯನ್ನು ನೀಡಲು ಕಂಪನಿ ಮುಂದಾಗಿದೆ.


