ದೆಹಲಿಯಲ್ಲಿ ಹಳೇ ವಾಹನ ನಿಷೇಧ ಮಾಡಲಾಗಿದೆ. ಹೀಗಾಗಿ 10 ವರ್ಷದ ಡೀಸೆಲ್ ವಾಹನ 15 ವರ್ಷದ ಪೆಟ್ರೋಲ್ ವಾಹನ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹೀಗೆ 84 ಲಕ್ಷ ರೂ ಮರ್ಸಿಡಿಸ್ ಬೆಂಜ್ ಕಾರನ್ನು ಮಾಲೀಕ ಕೇವಲ 2.5 ಲಕ್ಷ ರೂಗೆ ಮಾರಾಟ ಮಾಡಲಾಗಿದೆ.

ನವದೆಹಲಿ (ಜು.02) ದೆಹಲಿಯಲ್ಲಿ ಹೊಸ ವಾಹನ ನೀತಿ ಜಾರಿಗೆಯಾಗಿದೆ. ಜುಲೈ 1 ರಿಂದ ಹಳೇ ವಾಹನಗಳು ರಸ್ತೆಗೆ ಇಳಿಸುವಂತಿಲ್ಲ. 10 ವರ್ಷ ಹಳೇ ಡೀಸೆಲ್ ವಾಹನ ಹಾಗೂ 15 ವರ್ಷ ಹಳೇ ಪೆಟ್ರೋಲ್ ವಾಹನ ನಿಷೇಧಿಸಲಾಗಿದೆ. ರಸ್ತೆಗಿಳಿದರೆ ದುಬಾರಿ ದಂಡ, ಈ ವಾಹನಗಳಿಗೆ ಇಂಧನ ಕೂಡ ನಿರಾಕರಿಸಲಾಗಿದೆ. ದೆಹಲಿಯಲ್ಲೀಗ ಹಳೇ ವಾಹನ ಮಾಲೀಕರು ಕಂಗಾಲಾಗಿದ್ದಾರೆ. ಉತ್ತಮ ಕಂಡೀಷನ್‌ನಲ್ಲಿದ್ದರೂ ಈ ವಾಹನ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಗುಜುರಿ ಹಾಕುವುದು ಒಂದೇ ಮಾರ್ಗ. ಇದೀಗ ಇಛರ ರಾಜ್ಯದ, ದೆಹಲಿ ಹೊರಗಿನ ವಾಹನ ಆಸಕ್ತರು ಅತೀ ಕಡಿಮೆ ಬೆಲೆಗೆ ಡೆಲ್ಲಿ ರಿಜಿಸ್ಟ್ರೇಶನ್ ವಾಹನ ಖರೀದಿಸುತ್ತಿದ್ದಾರೆ. ದುಬಾರಿ ಕಾರುಗಳು ಕಾರುಗಳು 50 ಸಾವಿರ, 1 ಲಕ್ಷ, 2 ಲಕ್ಷ ರೂಪಾಯಿಗೆ ಲಭ್ಯವಾಗುತ್ತಿದೆ.

ಡೆಲ್ಲಿ ರಿಜಿಸ್ಟ್ರೇಶನ್ ಕಾರು ಅತೀ ಕಡಿಮೆ ಬೆಲೆಗೆ ಲಭ್ಯ

ದೆಹಲಿಯ ಹೊಸ ವಾಹನ ನೀತಿಯಿಂದ ದೆಹಲಿಯಲ್ಲಿ ಹಳೇ ವಾಹನಗಳು ಇದೀಗ ಅತೀ ಕಡಿಮೆ ಬೆಲೆಗೆ ಲಭ್ಯವಿದೆ. ಹೀಗಾಗಿ ಹಲವು ಡೀಲರ್‌ಗಳು ಇದೀಗ ದೆಹಲಿಯಿಂದ ಅತೀ ಕಡಿಮೆ ಬೆಲೆಗೆ ವಾಹನ ಖರೀದಿಸಿ ಇತರ ನಗರಗಳು, ಇತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

84 ಲಕ್ಷ ರೂಪಾಯಿ ಮರ್ಸಿಡೀಸ್ ಬೆಂಜ್ ಕಾರು 2.5 ಲಕ್ಷ ರೂಪಾಯಿಗೆ ಮಾರಾಟ

ದೆಹಲಿ ನಿವಾಸಿ ವರುಣ್ ವಿಜ್ 2015ರಲ್ಲಿ 84 ಲಕ್ಷ ರೂಪಾಯಿ ನೀಡಿ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಎಂಲ್ 350 ಕಾರು ಖರೀದಿಸಿದ್ದರು. ಬಳಿಕ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಮನೆಯಿಂದ ಕಚೇರಿ, ಕಚೇರಿಯಿಂದ ಮನೆ ಹೀಗೆ ಅಚ್ಚುಕಟ್ಟಾದ ಪ್ರಯಾಣ. ಬೇರೆ ಯಾರೂ ಈ ಕಾರು ಚಲಾಯಿಸಿಲ್ಲ. ಒಂದು ಸಣ್ಣ ಸ್ಕ್ರಾಚ್ ಕೂಡ ಈ ಕಾರಿನಲ್ಲಿ ಇಲ್ಲ. ಉತ್ತಮ ಕಂಡೀಷನ್‌ನಲ್ಲಿರುವ ಕಾರುನ್ನು ಇದೀಗ ವರುಣ್ ವಿಜ್ ಕೇವಲ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಭಾವುಕರಾದ ವರುಣ್ ವಿಜ್

ಕಳೆದ 10 ವರ್ಷಗಳಿಂದ ಮರ್ಸಿಡಿಸ್ ಬೆಂಜ್ ಎಂಎಲ್ 350 ಕಾರು ನಮ್ಮ ಕುಟುಂಬದ ಹಲವು ಸುಂದರ ನೆನಪುಗಳಿಗೆ ಈ ಕಾರು ಕಾರಣವಾಗಿದೆ. ಹಲವು ಸಂಭ್ರಮದ ಪ್ರಯಾಣ, ಆರಾಮದಾಯಕ ಪ್ರಯಾಣಕ್ಕೆ ಕಾರಣಾಗಿರುವ ಕಾರು ಇದೀಗ ಹೊಸ ನೀತಿಯಿಂದ ಅನಿವಾರ್ಯವಾಗಿ ಮಾರಾಟ ಮಾಡಿದ್ದೇನೆ. ತುಂಬಾ ನೋವಾಗುತ್ತಿದೆ ಎಂದು ವರುಣ್ ವಿಜ್ ಹೇಳಿದ್ದಾರೆ.

10 ವರ್ಷದಲ್ಲಿ ನಮ್ಮ ಕುಟುಂಬದ ಅವಶ್ಯಕತೆಗೆ ಈ ಕಾರು ಬಳಸಿದ್ದೇವೆ. ಕೇವಲ 1.35 ಲಕ್ಷ ಕಿಲೋಮೀಟರ್ ಪ್ರಯಾಣಿಸಿದೆ. ಪ್ರತಿ ವರ್ಷ ಅಧಿಕೃತ ಸರ್ವೀಸ್ ಕೇಂದ್ರದಲ್ಲಿ ಸರ್ವೀಸ್ ಮಾಡಲಾಗಿದೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಪಾರ್ಟ್ ಉತ್ತಮವಾಗಿದೆ. ಟೈಯರ್ ಬದಲಾಯಿಸಲಾಗಿದೆ. ಆದರೆ ಯಾರೂ ಖರೀದಿಸುತ್ತಿಲ್ಲ. 84 ಲಕ್ಷ ರೂಪಾಯಿ ಕಾರು ಕೊನೆಗೆ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡುವಂತಾಯಿತು. ಕಾರಿನ ಸಾಲ ಮುಗಿದು ಕೇವಲ ಮೂರು ವರ್ಷಗಳಾಗಿದೆ ಎಂದಿದ್ದಾರೆ.

ಇಂಧನ ಸಹವಾಸ ಬೇಡ ಎಂದ ವರುಣ್ ವಿಜ್

ಇಂಧನ ಕಾರುಗಳ ಸಹವಾಸ ಬೇಡ. ಇಂಧನ ಕಾರು ಖರೀದಿಸಿದರೆ ಕೆಲ ದಿನಗಳ ಬಳಿಕ ನಿಯಮಗಳು ಮತ್ತಷ್ಟು ಕಠಿಣವಾಗುತ್ತದೆ. ಕೋಟಿ ಬೆಲೆಯ ಕಾರನ್ನು ಜುಜುಬಿ ಮೊತ್ತಕ್ಕೆ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ಎಲೆಕ್ಟ್ರಿಕ್ ಕಾರು ಸಾಕು ಎಂದು ವರುಣ್ ವಿಜ್ ಹೇಳಿದ್ದಾರೆ. ಈ ರೀತಿಯ ನೀತಿಗಳಿಂದ ಅಪಾರ ನಷ್ಟವಾಗುತ್ತದೆ ಎಂದು ವರುಣ್ ವಿಜ್ ಹೇಳಿದ್ದಾರೆ.