ಗ್ರೌಂಡ್ ಕ್ಲಿಯರೆನ್ಸು ತೃಪ್ತಿದಾಯಕ, ಇಂಜಿನ್ ತಾಕತ್ತು ಆನಂದದಾಯಕ, ನಿಸಾನ್ ಮ್ಯಾಗ್ನೈಟ್ ಟೆಸ್ಟ್ ಡ್ರೈವ್!
ಭಾರತದ ಮಧ್ಯಮ ವರ್ಗದ ಸ್ನೇಹ ಸಂಪಾದನೆಗಾಗಿಯೇ ನೀಡಿರುವ ಕೊಡುಗೆ ನಿಸಾನ್ ಮ್ಯಾಗ್ನೈಟ್ ಕಾರು. ಆರಂಭಿಕ ಬೆಲೆ ರು.5.86 ಲಕ್ಷ ರೂಪಾಯಿ. ಈ ಕಾರಿನ ಪರ್ಫಾಮೆನ್ಸ್, ಫೀಚರ್ಸ್ ಹೇಗಿದೆ? ಇಲ್ಲಿದ ಸಂಪೂರ್ಣ ಮಾಹಿತಿ
ದೊಡ್ಡ ದೊಡ್ಡ ಆಟಗಾರರ ಮಧ್ಯೆಯೇ ಪ್ರತಿಭೆ ಇದ್ದೂ ಸೈಡಲ್ಲಿ ಬೆಂಚು ಕಾಯಿಸುವಂತೆ ಇರುವ ಕಾರಿನ ಹೆಸರು ನಿಸಾನ್ ಮ್ಯಾಗ್ನೈಟ್. ನಿಸಾನ್ ಜಪಾನ್ ಮೂಲದ ಕಾರು ತಯಾರಿಕಾ ಕಂಪನಿ. ಭಾರತಕ್ಕೆ ಬಲಗಾಲಿಟ್ಟು ಬಂದು ಹಲವು ವರ್ಷಗಳಾದರೂ ನಿಧಾನಗತಿಯ ಆಟದಿಂದಾಗಿ ಅಂಥಾ ಮಹತ್ವದ ಯಶಸ್ಸು ಸಾಧಿಸಿದ ಉದಾಹರಣೆ ಸಿಗುವುದಿಲ್ಲ. ಅಂಥಾ ನಿಸಾನ್ ಭಾರತದ ಮಧ್ಯಮ ವರ್ಗದ ಸ್ನೇಹ ಸಂಪಾದನೆಗಾಗಿಯೇ ನೀಡಿರುವ ಕೊಡುಗೆ ಮ್ಯಾಗ್ನೈಟ್. ಈ ಕಾರು ಬಿಡುಗಡೆಯಾಗಿ ಕೆಲವು ಕಾಲ ಸಂದಿದೆ. ಆದರೆ ಕಾಲಕಾಲಕ್ಕೆ ಸಾಧ್ಯವಾದಷ್ಟು ಅಪ್‌ಡೇಟ್‌ಗಳನ್ನು ಮಾಡಿದ ಕಾರಣ ಇನ್ನೂ ತನ್ನ ಹವಾ ಉಳಿಸಿಕೊಂಡಿದೆ.
ಈ ಎಸ್‌ಯುವಿ ಕಾರಿನ ಪವರ್ ಎಷ್ಟು ಎಂದು ಸಣ್ಣ ಪರೀಕ್ಷೆ ಮಾಡಲು ಮ್ಯಾಗ್ನೈಟ್‌ನ ಸಿವಿಟಿ ವರ್ಷನ್ ಅನ್ನು ಚಾರ್ಮಾಡಿ ಘಾಟ್‌ವರೆಗೆ ತೆಗೆದುಕೊಂಡು ಹೋಗಲಾಯಿತು. ಈ ಟರ್ಬೋ ಸಿವಿಟಿ ವರ್ಷನ್ ಪೂರ್ತಿ ಅಟೋಮ್ಯಾಟಿಕ್. 1.0 ಲೀ ಸಾಮರ್ಥ್ಯದ ಟರ್ಬೋ ಇಂಜಿನ್ ಇದರ ತಾಕತ್ತು. 999 ಸಿಸಿಯ ಈ ಕಾರು ಹೆಚ್ಚಿನ ತಂಟೆ ತಕರಾರು ಮಾಡುವುದಿಲ್ಲ. ಒಳ್ಳೆಯ ಪಿಕಪ್, ಹೇಳಿದಲ್ಲಿ ನಿಲ್ಲುವ ಸಾಮರ್ಥ್ಯ ಇದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದರಿಂದ ನಿಜವಾಗಿಯೂ ಎಸ್‌ಯುವಿ ಫೀಲ್ ಕೊಡುತ್ತದೆ. ಸಣ್ಣ ಸಣ್ಣ ಹಂಪ್ ಗಳಲ್ಲಿ ಲೀಲಾಜಾಲವಾಗಿ ಚಲಿಸುತ್ತದೆ. ತಿರುವುಗಳಲ್ಲಿ ಸುಲಲಿತವಾಗಿ ಮುಂದೆ ಸಾಗುತ್ತದೆ. ಎತ್ತರ ತಗ್ಗುಗಳನ್ನು ಹೆಚ್ಚಿನ ತಾಕಲಾಟವಿಲ್ಲದೆ ದಾಟಿ ಹೋಗುತ್ತದೆ. ಅಷ್ಟರ ಮಟ್ಟಿಗೆ ಈ ಎಸ್ ಯುವಿ ಡ್ರೈವರ್ ಫ್ರೆಂಡ್ಲಿ ಕಾರು.
NCAP Crash Test ಕೈಗೆಟುಕುವ ದರದ ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
ಮ್ಯಾಗ್ನೈಟ್ ನ ವಿನ್ಯಾಸ ಸ್ಟೈಲಿಷ್ ಆಗಿದೆ. ಇಂಜಿನ್ ಪವರ್ ಕೂಡ ಖುಷಿ ಕೊಡುತ್ತದೆ. ಐದು ಜನ ಆರಾಮಾಗಿ ಕೂರಬಹುದು. ಹಿಂದಿನ ಸೀಟಿನವರು ಸಮಾಧಾನಕರ ಮಟ್ಟದಲ್ಲಿ ಕಾಲು ಚಾಚಬಹುದು. ಎರಡನೇ ಸಾಲಿನ ಸೀಟಿನವರಿಗೂ ಏಸಿ ವೆಂಟ್ ಇರುವುದರಿಂದ ಸೆಕೆ ಪ್ರವೃತ್ತಿಯವರು ದೂರುವ ಸಂದರ್ಭವೇ ಬರುವುದಿಲ್ಲ. 336 ಲೀ.ನಷ್ಟು ಡಿಕ್ಕಿ ಸ್ಪೇಸ್ ಇರುವುದು ಫ್ಯಾಮಿಲಿ ಮ್ಯಾನ್ ಡ್ರೈವರ್‌ಗೆ ಆನಂದದಾಯಕ ಅಂಶ. ಕುಟುಂಬ ಸಮೇತ ಅಕ್ಕಿ ಸಾಮಾನು ಹಾಕಿಕೊಂಡು ದೂರದೂರಿಗೆ ಪ್ರಯಾಣ ಹೊರಡಲು ಅವಕಾಶ ಒದಗಿಸುವ ಈ ಎಸ್‌ಯುವಿ ಬೆಂಗಳೂರು-ಊರು ಎಂದು ತಿರುಗುವವರಿಗೆ ಬೆಸ್ಟ್ ಫ್ರೆಂಡ್ ಆಗಬಲ್ಲದು.
ಇನ್ ಫೋಟೇನ್‌ಮೆಂಟ್ 8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕಣ್ಣಿಗೂ ಬಳಕೆಗೂ ಹಿತಕರವಾಗಿದೆ. ಇನ್ ಫೋಟೇನ್ ಮೆಂಟ್ ಸಿಸ್ಟಮ್ ಕೆಳಗೆ ವೈರ್ ಲೆಸ್ ಚಾರ್ಜರ್ ಇದೆ. ವೈರ್ ಲೆಸ್ ಚಾರ್ಜಿಂಗ್ ಆಪ್ಷನ್ ಇರುವ ಮೊಬೈಲ್ ಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. 360 ಡಿಗ್ರಿ ಕ್ಯಾಮೆರಾ ಇರುವುದರಿಂದ ಯಾರು ಎಲ್ಲಿ ಪ್ರೀತಿಯಿಂದ ಸವರಲು ಬಂದರೂ ದೊಡ್ಡ ಸೈರನ್ ಆಗುವುದು. ಟೈರ್ ಚಲಿಸಿದಂತೆ ಯಾವ ದಿಕ್ಕಿಗೆ ಚಲಿಸಬೇಕು ಎಂದು ಕ್ಯಾಮೆರಾ ಸೂಚಿಸುವುದರಿಂದ ಪಾರ್ಕಿಂಗ್ ಮಾಡುವುದು ಇದರಲ್ಲಿ ಸುಲಭ. ಅಲ್ಲಿ ತಾಗುತ್ತದೆ ಇಲ್ಲಿ ತಾಗುತ್ತದೆ ಎಂಬೆಲ್ಲಾ ಆತಂಕವನ್ನು ಬದಿಗಿಟ್ಟು ಪಾರ್ಕ್ ಮಾಡಬಹುದಾದ ಖುಷಿಯನ್ನು ಈ ಎಸ್ ಯುವಿ ಒದಗಿಸುತ್ತದೆ.
ನಿಸಾನ್ ಮ್ಯಾಗ್ನೈಟ್ ಕಾರಿನ ಅಬ್ಬರಕ್ಕೆ SUV ವಿಭಾಗದ ದಾಖಲೆ ಧೂಳೀಪಟ!
ಅಂದ ಚಂದ, ಶಕ್ತಿ ಸಾಮರ್ಥ್ಯ, ಮನರಂಜನೆ, ಸೀಟು ವ್ಯವಸ್ಥೆ ಎಲ್ಲವನ್ನೂ ಗಮನಿಸಿ ಹೇಳುವುದಾದರೆ ಈ ಆಟಗಾರ ಚೆನ್ನಾಗಿದ್ದಾನೆ ಮತ್ತು ಪ್ರತಿಭಾವಂತನಿದ್ದಾನೆ. ಆದರೆ ಇಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಸ್ವಲ್ಪ ಎಡವಟ್ಟು ಇದ್ದಂತೆ ಕಾಣುತ್ತದೆ. ನಿಸಾನ್ ಕಂಪನಿ ಗ್ರಾಹಕಸ್ನೇಹಿ ವರ್ತನೆ ಹೆಚ್ಚು ತೋರಿಸಿದಷ್ಟೂ ಗ್ರಾಹಕನ ಒಲವು ನಿಸಾನ್ ಕಡೆ ವಾಲಬಹುದು. ನಿಸಾನ್ ಮ್ಯಾಗ್ನೈಟ್ ಆರಂಭಿಕ ಬೆಲೆ ರು.5.86 ಲಕ್ಷ ಇದೆ.(ಎಕ್ಸ್ ಶೋರೂಮ್) ನಿಸಾನ್ ಮ್ಯಾಗ್ನೈಟ್ ಸಿವಿಟಿ ಬೆಲೆ ರು.10,37,500.