ಬೆಂಗಳೂರು ಡ್ರೈವರ್ ಇಲ್ಲದೇ ತಂತಾನೇ ಚಲಿಸಿದ ಕಾರು; ಬೆಚ್ಚಿಬಿದ್ದು ಓಡಿದ ಜನರು
ಬೆಂಗಳೂರಿನ ಪ್ರಮುಖ ವೃತ್ತದ ಬಳಿ ನಿಲ್ಲಿಸಿದ್ದ ಕಾರು ಚಾಲಕನಿಲ್ಲದೇ ಹಿಂದಕ್ಕೆ ಚಲಿಸಿದ್ದು, ಜನರು ಈ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರು (ಜು.03): ಬೆಂಗಳೂರಿನಲ್ಲಿ ಪಾರ್ಕಿಂಗ್ ಮಾಡಿ ಹೋಗಿದ್ದ ಕಾರು ತಂತಾನೆ ಹಿಂದಕ್ಕೆ ಚಲಿಸಿದ್ದು, ಶಾಲಾ ಬಸ್ಸು, ಆಟೋಗಳು, ಬೈಕ್ ಸೇರಿ ಜನರು ಸಂಚಾರ ಮಾಡುತ್ತಿದ್ದ ಪ್ರಮುಖ ವೃತ್ತದಲ್ಲಿ ಬಂದಿದೆ. ಆದರೆ, ಕಾರಿನಲ್ಲಿ ಮಾತ್ರ ಡ್ರೈವರ್ ಇಲ್ಲ. ಇದನ್ನು ನೋಡಿದ ಜನರು ಗಾಬರಿಗೊಂಡಿದ್ದು, ಕಾರನ್ನು ನಿಲ್ಲಿಸಲು ಕಾರಿನ ಮಾಲೀಕ ಓಡೋಡಿ ಹೋಗಿದ್ದಾನೆ.
ಕಾರಿನಿಂದಾಗುವ ಎಡವಟ್ಟುಗಳನ್ನು ನೋಡಿದರೆ ನಾವು ಗಾಬರಿಗೊಳ್ಳುವುದು ಸಾಮಾನ್ಯ. ಕೆಲವು ಕಾರುಗಳು ಡ್ರೈವರ್ ಇಲ್ಲದೇ ತಂತಾನೆ ಚಲಿಸುವುದನ್ನು ನೋಡಿ ಯಾವುದೋ ದೆವ್ವ, ಭೂತದ ಕೈವಾಡ ಎಂದುಕೊಂಡಿರುತ್ತೇವೆ. ಆದರೆ, ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಯಾವುದೇ ಪ್ರೇತ, ಭೂತದ ಕೈವಾಡವಿಲ್ಲ. ಕಾರನ್ನು ಪಾರ್ಕಿಂಗ್ ಮಾಡಿದ ಡ್ರೈವರ್ ಕಾರಿನ ಗೇರ್ ತೆಗೆದು ನ್ಯೂಟ್ರಲ್ ಮಾಡಿ ನಿಲ್ಲಿಸಿದ್ದಾನೆ. ಆದರೆ, ಕಾರಿಗೆ ಹ್ಯಾಂಡ್ ಬ್ರೇಕ್ ಹಾಕುವುದನ್ನೇ ಮರೆತುಬಿಟ್ಟಿದ್ದಾನೆ. ಇದರಿಂದ ಸ್ವಲ್ಪವೇ ಮೂವ್‌ಮೆಂಟ್ ಪಡೆದ ಕಾರು ಜೋರಾಗಿ ಹಿಂದಕ್ಕೆ ಚಲಿಸಿದೆ.
ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಶೀಘ್ರವೇ ಸಿಬಿಐ ಎಂಟ್ರಿ; ರಾಜ್ಯದ ಮತ್ತಷ್ಟು ಪ್ರಭಾವಿಗಳಿಗೆ ಜೈಲು ಸೇರುವ ಭೀತಿ
ಇನ್ನು ಕಾರು ಹಿಂದಕ್ಕೆ ಚಲಿಸುತ್ತಿದ್ದ ಸ್ಥಳದಲ್ಲಿ ಕಡಿಮೆ ವಾಹನಗಳು ಇದ್ದ ಹಿನ್ನೆಲೆಯಲ್ಲಿ ಕಾರು ಹಿಂದಕ್ಕೆ ಹೋಗುತ್ತಿದ್ದರೂ ಯಾವುದೇ ವಾಹನಕ್ಕೆ ಡಿಕ್ಕಿ ಹೊಡೆದಿಲ್ಲ. ಇನ್ನು ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದರೂ ಡ್ರೈವರ್ ಇಲ್ಲದೇ ಹಿಂದಕ್ಕೆ ಚಲಿಸುತ್ತಿದ್ದ ಕಾರನ್ನು ನೋಡಿ ಇತರೆ ವಾಹನಗಳ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಕಾರು ಯಾವುದೇ ವಾಹನಕ್ಕೆ ಡಿಕ್ಕಿ ಹೊಡೆಯದೇ ಹಿಂದೆ ಇದ್ದ ಬಾರಿನ ಹತ್ತಿರ ಹೋಗಿದ್ದು, ಅಲ್ಲಿ ಜಲ್ಲಿ ಕಲ್ಲಿನ ರಸ್ತೆಯಲ್ಲಿ ನಿಧಾನವಾಗಿದೆ. ಆಗ ಕಾರಿನ ಹಿಂದೆಯೇ ಓಡಿಹೋಗಿ ಕಾರಿನ ಡೋರ್ ಓಪನ್ ಮಾಡಿ, ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ.
ಬೆಂಗಳೂರಿನಲ್ಲಿ ನಡೆದ ಈ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು 3ನೇ ಕಣ್ಣು (Third eye) ಎಂಬ ಎಕ್ಸ್ ಖಾತೆಯ ಪೇಜ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಇನ್ನು ವಿಡಿಯೋದಲ್ಲಿ ಕಾರಿನ ಡ್ರೈವರ್ ಹ್ಯಾಂಡ್ ಬ್ರೇಕ್ ಮರೆತಿರುವ ಪರಿಣಾಮ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ಕಾರು ಎಣ್ಣೆ ಹೊಡೆಯಲು ಬೆಳ್ಳಂಬೆಳಗ್ಗೆ ಡ್ರೈವರ್‌ನನ್ನು ಬಿಟ್ಟು ಬಾರ್‌ನತ್ತ ಹೋಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವರು ಕಾರನ್ನು ಗೇರ್‌ನಲ್ಲಿರುವಾಗ ನಿಲ್ಲಿಸಿ. ಇಲ್ಲವೇ ನ್ಯೂಟ್ರಲ್‌ನಲ್ಲಿ ನಿಲ್ಲಿಸಿದರೆ ಕಡ್ಡಾಯವಾಗಿ ಹ್ಯಾಂಡ್ ಬ್ರೇಕ್ ಹಾಕುವಂತೆ ಸಲಹೆ ನೀಡಿದ್ದಾರೆ. ಮತ್ತೊಬ್ಬರು ನೀವು ಕಾರನ್ನು ನಿಲ್ಲಿಸುವಾಗ ಮುಂದಕ್ಕೆ ಇಳಿಜಾರಿದ್ದರೆ ಹಿಂದಕ್ಕೆ ಗೇರ್ (ರಿವರ್ಸ್ ಗೇರ್) ಹಾಕಿ ನಿಲ್ಲಿಸಿ. ಇನ್ನು ಹಿಂದಕ್ಕೆ ಇಳಿಜಾರು ಇದ್ದರೆ 2ನೇ ಗೇರ್ ಹಾಕಿ ನಿಲ್ಲಿಸಿ ಎಂದು ಸಲಹೆ ಕೊಟ್ಟಿದ್ದಾರೆ. ಇನ್ನು ಕೆಲವರು ಅದೃಷ್ಟವಶಾತ್ ಎಲ್ಲಿಯೂ ಇಳಿಜಾರಿಲ್ಲದ ಕಾರಣ ಹಾಗೂ ರಸ್ತೆಯಲ್ಲಿ ಮಕ್ಕಳು ಮತ್ತು ಯಾವುದೇ ಪಾದಾಚಾರಿಗಳು ಇಲ್ಲದ ಕಾರಣ ದೊಡ್ಡ ಅಪಘಾತ ಸಂಭವಿಸುವುದು ತಪ್ಪಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
BBMP Property Tax: ಆಸ್ತಿ ತೆರಿಗೆ ಹೆಚ್ಚಳ ನಿರ್ಧಾರ ಕೈಬಿಟ್ಟು ಬೆಂಗಳೂರು ಜನತೆಗೆ ಸಿಹಿ ಸುದ್ದಿ ಕೊಟ್ಟ ಬಿಬಿಎಂಪಿ